ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಹಲವು ಹಳ್ಳಿಗಳು ನಾಶವಾಗಿದ್ದು, ಕನಿಷ್ಠ 250 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 500 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ ನೆರೆಯ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಬಳಿಯ ಕುನಾರ್ ಪ್ರಾಂತ್ಯದ ಹಲವು ಪಟ್ಟಣಗಳಲ್ಲಿ ಹಾನಿ ಉಂಟು ಮಾಡಿದೆ. ರಾತ್ರಿ 11:47 ಕ್ಕೆ ಸಂಭವಿಸಿದ 6.0 ತೀವ್ರತೆಯ ಭೂಕಂಪದಿಂದಾಗಿ ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಪದರೆ ಜಿಲ್ಲೆಗಳಲ್ಲಿ ಅಧಿಕ ಹಾನಿಯಾಗಿದೆ.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ | ಪ್ರಬಲ ಭೂಕಂಪದಲ್ಲಿ 2 ಸಾವಿರಕ್ಕೂ ಹೆಚ್ಚು ಸಾವು
ಈ ಬಗ್ಗೆ ಮಾಹಿತಿ ನೀಡಿರುವ ಸಾರ್ವಜನಿಕ ಆರೋಗ್ಯ ಸಚಿವಾಲಯದ ವಕ್ತಾರ ಶರಫತ್ ಜಮಾನ್, “ಇನ್ನೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಹಲವಾರು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. ಮೃತರು ಮತ್ತು ಗಾಯಾಳುಗಳ ಅಂಕಿಅಂಶಗಳು ಬದಲಾಗುತ್ತಿವೆ. ಕುನಾರ್, ನಂಗರ್ಹಾರ್ ಮತ್ತು ರಾಜಧಾನಿ ಕಾಬೂಲ್‌ನಿಂದ ವೈದ್ಯಕೀಯ ತಂಡಗಳು ಈ ಪ್ರದೇಶಕ್ಕೆ ಬಂದಿವೆ” ಎಂದು ತಿಳಿಸಿದ್ದಾರೆ.
ಅನೇಕ ಪ್ರದೇಶಗಳು ಸಾವುನೋವುಗಳ ಅಂಕಿಅಂಶಗಳನ್ನು ವರದಿ ಮಾಡಲು ಸಾಧ್ಯವಾಗಿಲ್ಲ ಮತ್ತು ಸಾವು ಮತ್ತು ಗಾಯಗಳ ವರದಿಯಾಗುತ್ತಿದ್ದಂತೆ ಅಂಕಿಅಂಶಗಳು ಬದಲಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
2023ರ ಅಕ್ಟೋಬರ್ 7ರಂದು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ತಾಲಿಬಾನ್ ಸರ್ಕಾರವು ಕನಿಷ್ಠ 4,000 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ವಿಶ್ವಸಂಸ್ಥೆಯು ಸುಮಾರು 1,500 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.
