ಪೊಲೀಸ್ ಸ್ಟೋರಿ, ಜೈಹಿಂದ್ ಸೇರಿದಂತೆ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ (55) (SS David) ಇಂದು ನಿಧನರಾದರು.
ಹೃದಯಾಘಾತದಿಂದ ಭಾನುವಾರ(ಆ.31) ಸಂಜೆ 7.30ರ ಸುಮಾರಿಗೆ ಆರ್ ಆರ್ ನಗರದ ಎಸ್.ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
90ರ ದಶಕದಲ್ಲಿ ಖಳನಾಯಕನಾಗಿದ್ದ ಎಸ್ ಎಸ್ ಡೇವಿಡ್ ಜೈಹಿಂದ್, ಧೈರ್ಯ ಮುಂತಾದ ಸಿನಿಮಾಗಳನ್ನ ನಿರ್ದೇಶಿಸಿದ್ದರು.
ಎಸ್ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿ ಡೇವಿಡ್ ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಆದರೆ, ಕುಟುಂಬದವರು ಅವರ ಮೃತದೇಹ ಪಡೆಯಲು ಸಿದ್ಧರಿಲ್ಲ.
ಇದನ್ನು ಓದಿದ್ದೀರಾ? ಎಮ್ಮೆ ಕೊಡಿಸುವುದಾಗಿ ಹೇಳಿ ಸಿನಿಮಾ ನಿರ್ದೇಶಕ ಪ್ರೇಮ್ಗೆ ಲಕ್ಷಗಟ್ಟಲೆ ವಂಚನೆ
ಡೇವಿಡ್ ಅವರು ಆಗಸ್ಟ್ 31ರಂದು ಔಷಧ ಅಂಗಡಿಗೆ ತೆರಳಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಗೆ ಡೇವಿಡ್ ಪಾರ್ಥಿವ ಶರೀರ ರವಾನೆ ಆಗಿದೆ. ಸದ್ಯ ಕುಟುಂಬದವರು ಬಾರದೆ ಮೃತದೇಹ ಕೊಡುವುದಿಲ್ಲ ಎಂದು ಆರ್ ಆರ್ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅವರ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.