ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಹಂದಿಯನ್ನು ಹಿಡಿದು ಮಾಂಸ ಮಾರಾಟಕ್ಕೆ ಮುಂದಾದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಶೀಘ್ರ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ತಲಾ ರೂ.1 ಲಕ್ಷ ದಂಡ ವಿಧಿಸಿ, ನ್ಯಾಯಾಂಗ ವಶಕ್ಕೆ ನೀಡಿದೆ.
ಶಿಂದೋಗಿ ಗ್ರಾಮದ ಮಂಜುನಾಥ ಬಸಪ್ಪ ಭಜಂತ್ರಿ ಹಾಗೂ ಉಮೇಶ ಪಾಂಡುರಂಗ ಭಜಂತ್ರಿ ಬಂಧಿತರು. ಸವದತ್ತಿ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಕೆ.ವಾಯ್. ಆಲದಕಟ್ಟಿ ಅವರು ಸೊಗಲ ಶಾಖೆಯ ಸಿಬ್ಬಂದಿಗಳೊಂದಿಗೆ ಗಸ್ತು ತಿರುಗುವ ವೇಳೆ ಆರೋಪಿತರನ್ನು ವಶಕ್ಕೆ ಪಡೆದರು.
“ನ್ಯಾಯಾಲಯದ ಅನುಮತಿ ಪಡೆದು ಕಾಡುಹಂದಿಯನ್ನು ಸುರಕ್ಷಿತವಾಗಿ ನೈಸರ್ಗಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ” ಎಂದು ವಲಯ ಅರಣ್ಯಾಧಿಕಾರಿ ಸಂಜೀವ ಸಂಶುದ್ಧಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಎಚ್.ಬಿ. ಪನ್ನಾಳಗಡ, ವನಪಾಲಕರಾದ ಕೃಷ್ಣಾ ಮುನವಳ್ಳಿ ಮತ್ತು ರಮೇಶ ಪಾಟೊಳ್ಳಿ, ಉಪವಲಯ ಅರಣ್ಯಾಧಿಕಾರಿ ವಿ.ಎಲ್. ಓಗಿ ಪಾಲ್ಗೊಂಡಿದ್ದರು.