- ಭೂರಹಿತ ಗೇಣಿ ಸಾಗುವಳಿ ರೈತರಿಗೆ ಸಹಾಯಧನ ಒದಗಿಸಲು ಹೊಸ ಕಾಯ್ದೆ ರಚಿಸಬೇಕು.
- ಭೂಸುಧಾರಣೆ ಹೊಸ ತಿದ್ದುಪಡಿ ಹಾಗೂ ಗೋರಕ್ಷಣಾ ಅಧಿನಿಯಮ -2020 ನ್ನು ಕೂಡಲೇ ಹಿಂಪಡೆಯಬೇಕು.
ರಾಜ್ಯಾದ್ಯಂತ ಭೂರಹಿತರು ಅರಣ್ಯ ಭೂಮಿ ಸಾಗುವಳಿ ಮಾಡುವುದನ್ನು ನಿಲ್ಲಿಸಬಾರದು. ಅರಣ್ಯ ಇಲಾಖೆ ಹೂಡಿದ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕು ಹಾಗೂ ಸರಕಾರಿ ಭೂಮಿ ಸಾಗುವಳಿ ಮಾಡುವ ಭೂರಹಿತರಿಗೆ ಪಟ್ಟಾ ವಿತರಿಸಲು ಸರ್ಕಾರ ಕೂಡಲೇ ಅಕ್ರಮ – ಸಕ್ರಮ ಕಮಿಟಿ ರಚನೆಗೆ ಆದೇಶ ಹೊರಡಿಸಬೇಕೆಂದು ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾರುಕರ್ತರು “ಭೂಸುಧಾರಣೆ ಹೊಸ ತಿದ್ದುಪಡಿ ಅಧಿನಿಯಮ-2020 ಹಾಗೂ ಗೋರಕ್ಷಣಾ ಅಧಿನಿಯಮ -2020 ನ್ನು ಕೂಡಲೇ ಹಿಂಪಡೆಯಬೇಕು. ಭೂರಹಿತ ಗೇಣಿ ಸಾಗುವಳಿ ರೈತರಿಗೆ ಬೆಳೆಸಾಲ, ಸಹಾಯಧನ , ಪರಿಹಾರ ಸೌಲಭ್ಯ ಒದಗಿಸಲು ಹೊಸ ಕಾಯ್ದೆ ರಚಿಸಬೇಕು. ರಾಜ್ಯಾದ್ಯಂತ ಹೆಚ್ಚುವರಿ ಭೂಮಿ, ಸರಕಾರದ ಪಾಳು ಭೂಮಿಯನ್ನು ಭೂರಹಿತರಿಗೆ ವಿತರಿಸಬೇಕೆಂದು” ಒತ್ತಾಯಿಸಿದರು.
“ಸರಕಾರಿ ಭೂಮಿ ಕಬಳಿಕೆ ಮಾಡಿದವರನ್ನು ಭೂಮಿಯಿಂದ ಹೊರ ಹಾಕಿ ಸಮುದಾಯ ಭೂಮಿಗಳನ್ನು ಸಂರಕ್ಷಣೆ ಮಾಡಬೇಕು. ಯಾವ ಉದ್ದೇಶಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆಯೊ ಆ ಉದ್ದೇಶಕ್ಕೆ ಭೂಮಿಯನ್ನು ಉಪಯೋಗಿಸದಿದ್ದರೆ ಅಂತಹ ಭೂಮಿಯನ್ನು ರೈತರಿಗೆ ಹಿಂತಿರುಗಿಸಲು ಕ್ರಮ ಜರುಗಿಸಬೇಕು. ಪ್ರತಿ ವರ್ಷ ಆಯಾ ಜಿಲ್ಲೆಗಳ ಭೂಮಿ ಲೆಕ್ಕಪತ್ರ ಸಿದ್ಧಪಡಿಸಿ ಸಾರ್ವಜನಿಕ ಪ್ರಕಟಣೆ ನೀಡಬೇಕು ” ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಕೆಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅಬ್ಬಾಸ್ ಅಲಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ, ಮುಖಂಡರಾದ ಕೆ.ಗಿರಿಲಿಂಗ ಸ್ವಾಮಿ, ಶಫೀಕ್ ಪಾಶ, ತಿಪ್ಪಣ್ಣ ಚಿಕ್ಕಹೆಸರೂರು, ಶೇಖರಪ್ಪ ಸೇರಿದಂತೆ ಅನೇಕರಿದ್ದರು.