ಹೌದು ಸ್ವಾತಂತ್ರ್ಯ ದೊರೆಯುವವರೆಗಿದ್ದ ಕನಸು, ಉತ್ಸಾಹ; ಸ್ವತಂತ್ರರಾದಾಗ ಭಾರತೀಯರಲ್ಲಿ ಮಡುಗಟ್ಟಿದ್ದ ಬದ್ದತೆ, ಪರಿಶ್ರಮ, ಒಗ್ಗಟ್ಟು ಈಗ ಮಾಯವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂದಿನ ಭಾರತ ಸಂಪನ್ಮೂಲದಲ್ಲಿ, ಭಾವನೆಗಳಲ್ಲಿ ಇಬ್ಬಾಗವಾದಂತೆ ತೋರುತ್ತಿದೆ. ಒಂದೆಡೆ ಶ್ರೀಮಂತರ ಅಟ್ಟಹಾಸ, ಅದ್ದೂರಿಯ ಭಾರತವಾದರೆ, ಇನ್ನೊಂದೆಡೆ ಬಡವರ ನರಳಾಟದ ಭಾರತ..!
ಸ್ವಾತಂತ್ರೋತ್ಸವ ಮತ್ತು ಭಾರತ…!
ನಾವಿಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂಭ್ರಮದಲ್ಲಿದ್ದೇವೆ. ದೇಶದಲ್ಲಿ ನಮ್ಮದೇ ಆಡಳಿತವಿದ್ದರೆ, ನಮ್ಮವರೇ ನಮ್ಮನ್ನು ಆಳಿದರೆ, ನಮಗಾಗಿ ನಮ್ಮವರೇ ನೀತಿ ನಿರೂಪಣೆ ಮಾಡಿದರೆ ನಾವು ಅಭಿವೃದ್ಧಿ ಹೊಂದುತ್ತೇವೆ. ಸ್ವಾವಲಂಭಿಗಳಾಗುತ್ತೇವೆ, ಸ್ವತಂತ್ರರಾಗುತ್ತೇವೆ….! ಇದು 1947 ಆಗಸ್ಟ್ 15ರವರೆಗಿನ ಸ್ವಾತಂತ್ರ್ಯ ಹೋರಾಟಗಾರರ ಕನಸು ಮತ್ತು ಗುರಿಯಾಗಿತ್ತು. ಹಾಗಾಗಿಯೇ ಸುಮಾರು 90 ವರ್ಷಗಳ ಕಾಲ ಸ್ವಾತಂತ್ರ್ಯ ಸಂಗ್ರಾಮ ನಿರಂತರವಾಗಿ ನಡೆಯಲು ಸಾಧ್ಯವಾಯಿತು. ಹಲವು ನಾಯಕರು ಮುಂದಾಳತ್ವ ವಹಿಸಿದ್ದರು. ಅವರು ಅಳಿದರು, ಹುತಾತ್ಮರಾದರು, ಮತ್ತೆ ಹೊಸ ನಾಯಕರು ಬಂದರು, ಹೊಸ ಚಳವಳಿ ಹೂಡಿದರು, ಜನರಲ್ಲಿ ಜಾಗೃತಿ ಮೂಡಿಸಿದರು, ಒಗ್ಗೂಡಿಸಿದರು, ದೇಶದ ಉದ್ದಗಲದಲ್ಲಿ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ಬರುವಂತೆ ಮಾಡಿ, ಸ್ವಾತಂತ್ರ್ಯ ನಮ್ಮ ಜನ್ಮಸಿದ್ದಹಕ್ಕು ಎಂದು ಸಾಧಿಸಿ ತೋರಿಸಿದರು. ಹುತಾತ್ಮರಾದವರ ಸಂಖ್ಯೆಗೆ ಲೆಕ್ಕವಿಲ್ಲ, ಜೈಲು ಶಿಕ್ಷೆ ಅನುಭವಿಸಿದವರ ತಾಳ್ಮೆ, ಸಂಯಮ, ಛಲ, ಧೈರ್ಯಕ್ಕೆ ಸಾಟಿಯಿಲ್ಲ. ದೇಶಕ್ಕಾಗಿ ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಕುಟುಂಬ ಸಮೇತರಾಗಿ ತ್ಯಾಗಿಗಳಾದ ಮಹಾತ್ಮರ ಕೊಡುಗೆಗೆ ಪಾರವೇ ಇಲ್ಲ. ಇದೆಲ್ಲದರ ಪ್ರತಿಫಲವೇ ಸ್ವತಂತ್ರ ಭಾರತ…!
ದೇಶದ ಇಬ್ಬಾಗ, ಹೊಸತೊಂದು ಸಹೋದರ ರಾಷ್ಟ್ರದ ಉದಯ ಸ್ವಾತಂತ್ರ್ಯ ಸಿಕ್ಕ ಸಂಭ್ರಮವನ್ನು ನುಂಗಿ ಹಾಕಿದ್ದು ಸುಳ್ಳಲ್ಲ…! ಕಿತ್ತು ತಿನ್ನುವ ಬಡತನವನ್ನು ಮೈವೆತ್ತು ನಿಂತ ಸ್ವತಂತ್ರ ಭಾರತವನ್ನು ಪ್ರಗತಿಶೀಲ ರಾಷ್ಟ್ರವಾಗಿಸುವುದೇ ಅಂದು ದೊಡ್ಡ ಸವಾಲಾಗಿತ್ತು. ಮಹಾತ್ಮ ಗಾಂಧಿಯವರ ಹತ್ಯೆ ಹಾಗೂ ಪಾಕಿಸ್ತಾನ, ಚೀನಾ ದೇಶಗಳ ದಾಳಿ ಮೊದಲಾದ ಹೊಡೆತಗಳ ನಡುವೆಯೂ ದೇಶದೊಳಗೆ ಪೊಲೀಸ್ ವ್ಯವಸ್ಥೆಯಿಂದ ಗಡಿ ಕಾಯುವ ಮಿಲಿಟರಿಯವರೆಗೆ, ರಸ್ತೆಗಳೇ ಇಲ್ಲದ ಹಳ್ಳಿಯಿಂದ ವಿಮಾನಯಾನದ ವರೆಗೆ, ಬರಡು ಭೂಮಿಯಿಂದ ಅಣೆಕಟ್ಟಿನ ವರೆಗೆ, ಕತ್ತಲ ಗ್ರಾಮದಿಂದ ಅಣು ವಿದ್ಯುತ್ ಸ್ಥಾವರದವರೆಗೆ, ಹಸಿದ ಹೊಟ್ಟೆಯಿಂದ ಹಸಿರು ಕ್ರಾಂತಿಯವರೆಗೆ ಈ ದೇಶವನ್ನು ಕಟ್ಟಿದ್ದು ಸಾಮಾನ್ಯದ ವಿಷಯವೇನಲ್ಲ. ಅಂಬೇಡ್ಕರ್ ಅವರ ಮಹತ್ವಾಕಾಂಕ್ಷೆಯ ಅದ್ಭುತವಾದ ಸಂವಿಧಾನ ಭಾರತಕ್ಕೆ ದೊರೆತದ್ದರಿಂದ ಸರ್ವಸಮಾನತೆಯ ಸಮಾಜ ನಿರ್ಮಾಣ ಮತ್ತು ಸರ್ವೋದಯದ ಹೊಂಗನಸು ಜನರಲ್ಲಿ ಮೂಡಲು ಸಹಕಾರಿಯಾಯಿತು. ತಮಗಿಂತ ಹಿಂದಿನವರ ಕನಸನ್ನು ಮುಂದೆ ಬಂದ ಆಡಳಿತಗಾರರು ನನಸು ಮಾಡುವ ಪಣತೊಟ್ಟು ಭಾರತವನ್ನು ಸದೃಢವಾಗಿಸುವ ಕಾಯಕ ಅಡೆತಡೆಗಳಿಲ್ಲದೆ ಮುಂದುವರೆದುಕೊಂಡು ಬಂದಿತ್ತು.

ಸ್ವತಂತ್ರ ಭಾರತದ 76 ವರ್ಷಗಳ ಅಭಿವೃದ್ದಿಯ ಕುರಿತು ಹಿಂದಿರುಗಿ ನೋಡುವಾಗ ಈಗ ನಾವು ಎಲ್ಲಿದ್ದೇವೆ, ಏನಾಗಿದ್ದೇವೆ, ಏಕೆ ಹೀಗಾಗಿದ್ದೇವೆ? ಮುಂತಾದ ವಿಚಾರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಹೌದು ಸ್ವಾತಂತ್ರ್ಯ ದೊರೆಯುವವರೆಗಿದ್ದ ಕನಸು, ಉತ್ಸಾಹ; ಸ್ವತಂತ್ರರಾದಾಗ ಭಾರತೀಯರಲ್ಲಿ ಮಡುಗಟ್ಟಿದ್ದ ಬದ್ದತೆ, ಪರಿಶ್ರಮ, ಒಗ್ಗಟ್ಟು ಈಗ ಮಾಯವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂದಿನ ಭಾರತ ಸಂಪನ್ಮೂಲದಲ್ಲಿ, ಭಾವನೆಗಳಲ್ಲಿ ಇಬ್ಬಾಗವಾದಂತೆ ತೋರುತ್ತಿದೆ. ಒಂದೆಡೆ ಶ್ರೀಮಂತರ ಅಟ್ಟಹಾಸ, ಅದ್ದೂರಿಯ ಭಾರತವಾದರೆ ಇನ್ನೊಂದೆಡೆ ಬಡವರ ನರಳಾಟದ, ಗುಡಿಸಲು ಕೊಳಚೆ ಪ್ರದೇಶದ ಭಾರತ..!
ಒಂದೆಡೆ ಅಧಿಕಾರಶಾಹಿಗಳ, ಉದ್ಯಮಿಗಳ ದೌರ್ಜನ್ಯ, ದರ್ಪ, ದುರಹಂಕಾರ, ದಬ್ಬಾಳಿಕೆಯ ಲೋಕವಾದರೆ ಮೊತ್ತೊಂದೆಡೆ ಧ್ವನಿ ಕಳೆದುಕೊಂಡವರ, ಜೀತದಾಳಿನಂತಿರುವ ಕಡುಬಡವರ ಮೌನ ಭಾರತ…! ದೇಶದ ಸಂಪತ್ತಿನ ಮುಕ್ಕಾಲು ಭಾಗಕ್ಕೂ ಅಧಿಕ ಪಾಲು ಇರುವುದು ಶೇ.1 ರಷ್ಟಿರುವ ಶ್ರೀಮಂತರ ಪೆಟ್ಟಿಗೆಯಲ್ಲಿ. ಸಂಪತ್ತಿನ ವಿಕೇಂದ್ರಿಕರಣಕ್ಕಾಗಿ ರೂಪಿಸಿದ ಯೋಜನೆಗಳು ಬಡವರ ಬದುಕನ್ನು ಹಸನಾಗಿಸುವಲ್ಲಿ ಎಡವಿದ್ದು ಸುಳ್ಳಲ್ಲ. ಎಲ್ಲಾ ಒಕ್ಕೂಟಗಳನ್ನು ಸೇರಿಸಿ ಒಗ್ಗೂಡಿದ್ದ ಭಾರತದಲ್ಲಿ ಇಂದು ತಾರತಮ್ಯ, ಧರ್ಮ ಜಾತಿಯ ವೈಷಮ್ಯದ ಕಾರಣದಿಂದ ಬಿರುಕು ಮೂಡಿದಂತೆ ಅನ್ನಿಸುತ್ತಿದೆ. ಭಾಷೆ, ಧರ್ಮ, ಜಾತಿ ಮೊದಲಾದುವು ವಿವಾದದ ಮೂಲಗಳಾದಾಗ ಸಮಾಜದಲ್ಲಿ, ದೇಶದಲ್ಲಿ ಒಗ್ಗಟ್ಟು ಮೂಡುವುದಾದರೂ ಹೇಗೆ..? ಕಾಪಾಡಬೇಕಾದ ಸರಕಾರಗಳೇ ಜನರ ನಡುವೆ ವಿವಿಧ ಕಾರಣಗಳಿಗಾಗಿ ಒಡಕು ತಂದಿಟ್ಟರೆ ಶಾಂತಿ ನೆಲಸುವುದಾದರೂ ಎಂತು..?
ಕವಿ ಸಿದ್ದಲಿಂಗಯ್ಯನವರು ದಶಕಗಳ ಹಿಂದೆಯೇ ಬರೆದಂತೆ ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳ ಸ್ವಾತಂತ್ರ್ಯ…?’ ಎನ್ನುವ ಸಾಲುಗಳು ವರ್ತಮಾನಕ್ಕೆ ಇಂದು ಸರಿಯಾಗಿ ಹೊಂದುತ್ತವೆ. ಇಂದು ಜೈಲು, ಶಿಕ್ಷೆ, ದಂಡನೆ ಮೊದಲಾದುವು ಬಡ, ಮಧ್ಯಮ ವರ್ಗದವರಿಗೆ ಮಾತ್ರ. ಭಾರತದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುವ 99.99% ಕೈದಿಗಳು ಬಡ-ಮಧ್ಯಮ ವರ್ಗಕ್ಕೆ ಸೇರಿದವರು…! ಉಚ್ಚ ನ್ಯಾಯಾಲಯಗಳು, ಜಾಮೀನು ಎಲ್ಲವೂ ಶ್ರೀಮಂತರಿಗೆ.
ಒಂದೆಡೆ ಭ್ರಷ್ಟಾಚಾರದ ತಾಂಡವ ನೃತ್ಯ, ಇನ್ನೊಂದೆಡೆ ರಾಜಕೀಯ ನಾಯಕರ ದರ್ಪ – ದೌರ್ಜನ್ಯ, ಮತ್ತೊಂದೆಡೆ ಉದ್ಯಮಿಗಳ ಅಟ್ಟಹಾಸ, ಮಗದೊಂದೆಡೆ ಅಧಿಕಾರಿಗಳ ಬೇಜವಬ್ದಾರಿ – ದುರಹಂಕಾರ… ಹೀಗಿರುವಾಗ ದೇಶ ಅಭಿವೃದ್ದಿಯಾಗುವುದಾದರೂ ಎಂತು..? ಜನಸಾಮಾನ್ಯರ ಬದುಕು ಹಸನಾಗುವುದಾದರೂ ಹೇಗೆ ಸಾಧ್ಯ…? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಕ್ರಮೇಣವಾಗಿ ಸರ್ವಾಧಿಕಾರದತ್ತ ಹೊರಳುತ್ತಿರುವ ಮುನ್ಸೂಚನೆ ಈಗ ಗೋಚರವಾಗುತ್ತಿದೆ. ವಿರೋಧ ಪಕ್ಷಗಳನ್ನೇ ಮುಗಿಸುವ ಹುನ್ನಾರ ಸಂಸದೀಯ ವ್ಯವಸ್ಥೆಗೆ ಮಾರಕ.
ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆಗಳಿಂದ ಹಿಡಿದು ಪೊಲೀಸ್ ಇಲಾಖೆಯ ವರೆಗೆ ತಮ್ಮ ವಿರೋಧಿಗಳನ್ನು ಹಣಿಯಲು ಅಧಿಕಾರಸ್ಥರು ಉಪಯೋಗಿಸುವ ಆಯುಧದಂತಾಗಿವೆ. ಚುನಾವಣೆಯನ್ನು ತಮಗೆ ಬೇಕಾದಂತೆ ನಡೆಸಲು ಆಯೋಗದ ಮುಖ್ಯಸ್ಥರಾಗಿ ತಮ್ಮ ಅಣತಿಯಂತೆ ಕೆಲಸ ಮಾಡುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಹಂತಕ್ಕೆ ದೇಶದ ಅವಸ್ಥೆ ಮುಟ್ಟಿದೆ. ಪತ್ರಿಕಾರಂಗ ತನ್ನ ನಿಷ್ಪಕ್ಷಪಾತ ಧೋರಣೆಯನ್ನು ಕಳೆದುಕೊಂಡು ಅಧಿಕಾರಶಾಹಿಗಳ, ಉದ್ಯಮಿಗಳ ಪರ ಪ್ರಚಾರ ಮಾಡುವ ಮುಖವಾಣಿಗಳಾಗಿವೆ. ಏಕೆಂದರೆ ಬಹುತೇಕ ಖಾಸಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ರಾಜಕಾರಣಿಗಳ, ಉದ್ಯಮಿಗಳ ಒಡೆತನದಲ್ಲಿ. ಅದಕ್ಕಾಗಿ ಆಡಳಿತರೂಢರ ಭಜನೆಯೇ ಮಾಧ್ಯಮಗಳ ದಿನಚರಿಯಾಗಿದೆ.

ಚುನಾಯಿತ ಶಾಸಕ, ಸಂಸದರನ್ನೇ ಖರೀದಿಸಿ, ಚುನಾಯಿತ ಸರಕಾರವನ್ನು ಕೆಡವಿ, ಮರು ಚುನಾವಣೆ ನಡೆಸಿ, ಕೋಟಿಗಟ್ಟಲೆ ಹಣ ಸುರಿದು ತಮ್ಮ ಸರಕಾರ ರಚಿಸುವ ಪ್ರಯತ್ನಗಳನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ವಿವಿಧ ರಾಜ್ಯಗಳಲ್ಲಿ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಅಧಿಕಾರಶಾಹಿಗಳ ಮಹಾನ್ ಸಾಧನೆ ಎಂಬಂತಾಗಿದೆ. ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು, ತಮ್ಮ ವೈಫಲ್ಯವನ್ನು ಮರೆಮಾಚಿ ಮತ ಗಳಿಸುವ ಕೆಲಸ ನಡೆಯುತ್ತಿದೆ.
ಇದನ್ನು ಓದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಯೋಜನೆ-2 | ತಮಿಳುನಾಡಿನಲ್ಲಿದೆ ಮಾದರಿ ಆರೋಗ್ಯ ವ್ಯವಸ್ಥೆ
ಭಾವೈಕ್ಯದ ನಾಡಾಗಿ, ವಿವಿಧತೆಯಲ್ಲಿ ಏಕತೆ ಕಂಡಿದ್ದ, ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಭಾರತದಲ್ಲಿಂದು ಅಸಹಿಷ್ಣುತೆ ಹೊಗೆಯಾಡುತ್ತಿದೆ. ಬಲಪಂಥೀಯ ವಿಚಾರಧಾರೆಯೇ ದೇಶಪ್ರೇಮದೆಂತಲೂ ಪ್ರಗತಿಪರ ಚಿಂತನೆಗಳು ದೇಶದ್ರೋಹವೆಂತಲೂ, ಬುದ್ದಿಜೀವಿಗಳು ಬೌದ್ಧಿಕ ಭಯೋತ್ಪಾದಕರೆಂತಲೂ ಬಿಂಬಿಸುವ ಪ್ರಯತ್ನ ಬಲಪಂಥೀಯ ಸಂಘಟನೆಗಳಿಂದ ನಡೆಯುತ್ತಿದೆ. ವ್ಯಕ್ತಿಪೂಜೆಗೆ ಪ್ರಾಮುಖ್ಯತೆ ನೀಡಿ, ಆತನನ್ನು ದೈವಸಂಭೂತನೆನ್ನುವಂತೆ ಬಿಂಬಿಸಿ, ಆತನೇ ದೇಶ ಎನ್ನುವಂತೆ ತೋರಿಸುವ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಶಿಕ್ಷಣಕ್ಕೆ ಮಹತ್ವ ಕಡಿಮೆಯಾಗುತ್ತಿದ್ದು, ವೈಜ್ಞಾನಿಕತೆಗೆ ಮನ್ನಣೆ ದೊರೆಯುತ್ತಿಲ್ಲ. ಸುಳ್ಳು ಇತಿಹಾಸ ಸೃಷ್ಟಿಸಲಾಗುತ್ತಿದ್ದು,ಮೌಢ್ಯ ಹಾಗೂ ದ್ವೇಷವನ್ನು ಬಿತ್ತಲಾಗುತ್ತಿದೆ.
ಒಂದು ದೊಡ್ಡ ಸಮುದಾಯ ಶಿಕ್ಷಣದಿಂದ ದೂರವುಳಿಯುವಂತೆ ಮಾಡುವ ಹುನ್ನಾರ ನಡೆಯುತ್ತಿದೆ. ದಲಿತ, ಹಿಂದುಳಿದ ವರ್ಗದ ಯುವಸಮುದಾಯವನ್ನು ಶಿಕ್ಷಣದತ್ತ ನಿರಾಸಕ್ತಿ ಹೊಂದುವಂತೆ ಮಾಡಿ, ಬೀದಿಯಲ್ಲಿ ಹೊಡೆದಾಡುವವರನ್ನಾಗಿ ಮಾಡಲಾಗುತ್ತಿದೆ. ಧರ್ಮದ ಅಮಲೇರಿಸಿ, ಪರಸ್ಪರ ದ್ವೇಷದ ವಾತಾವರಣವನ್ನುಂಟು ಮಾಡಿ ಉದ್ವಿಗ್ನತೆಯನ್ನು ಹೆಚ್ಚಿಸಲಾಗುತ್ತಿದೆ. ಪ್ರಗತಿಪರರ, ಬುದ್ದಿಜೀವಿಗಳ ಹೋರಾಟವನ್ನು ಅಪಪ್ರಚಾರ ಹಾಗೂ ಕುತಂತ್ರದ ಮೂಲಕ ಹತ್ತಿಕ್ಕುವ ಧಮನಕಾರಿ ನೀತಿ ಅನುಸರಿಸಲಾಗುತ್ತಿದೆ.
ಇದನ್ನು ಓದಿ ಕಣ್ಣೀರಿಟ್ಟು ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿಯಿಂದ ರಾಹುಲ್ ಗಾಂಧಿ ಭೇಟಿ
ಇವೆಲ್ಲವನ್ನು ಕಂಡಾಗ ನಮಗೆ ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯದ ಆಶಯ ಈಗ ಕಿಂಚಿತ್ ಆದರೂ ಉಳಿದಿದೆಯೇ ಎನ್ನುವ ಪ್ರಶ್ನೆ ಮೂಡದೇ ಇರದು. ಸ್ವಾತಂತ್ರ್ಯ ತಂದು ಕೊಟ್ಟ ಗಾಂಧಿಜಿಯನ್ನು ಕೊಂದ ಗೋಡ್ಸೆ ಸಂತತಿ ಹಾಗೂ ಆರಾಧಕರು ಗಹಗಹಿಸಿ ನಗುತ್ತಿದ್ದಾರೆ. ಇದೆಲ್ಲದರ ನಡುವೆಯೂ ನಾವು ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ರಾಷ್ಟ್ರಧ್ವಜ ಅರಳಿಸಿ, ರಾಷ್ಟ್ರಗೀತೆ ಹಾಡಿ, ವಂದೇ ಮಾತರಂ ಎಂದು ಅಭಿಮಾನ ಪಡುತ್ತಿದ್ದೇವೆ.
