ಬಿಹಾರ | ‘ಮತ ಕಳ್ಳತನ’ವನ್ನು ಸೋಲಿಸಿ ಗೆಲ್ಲುವುದೇ ‘ಇಂಡಿಯಾ’?

Date:

Advertisements
ನಿತೀಶ್‌ ಕುಮಾರ್ ಹಂಗಿಲ್ಲದೆ, ಬಿಜೆಪಿಯೇ ಬಹುಮತದೊಂದಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಹಂಬಲ ಹೊಂದಿದೆ ಎಂಬ ಚರ್ಚೆ ಹೆಚ್ಚಾಗಿದೆ. ಬಿಜೆಪಿಯ ಈ ತಂತ್ರಕ್ಕೆ 'ವೋಟ್‌ ಚೋರಿ' ನೆರವಾಗಬಹುದು ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ...

ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರವು ಚುನಾವಣಾ ರಾಜಕಾರಣ, ಪಕ್ಷಗಳ ಜಟಾಪಟಿಗಿಂತ ಹೆಚ್ಚಾಗಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್‌)ಯೇ ಹೆಚ್ಚು ಚರ್ಚೆಯಲ್ಲಿದೆ. ಎಸ್‌ಐಆರ್ ಪರ ವಿರೋಧ ಚರ್ಚೆಗಳು, ವಿಚಾರ-ವಿಶ್ಲೇಷಣೆಗಳ ನಡುವೆ ಪ್ರಮುಖ ರಾಜಕೀಯ ವಿದ್ಯಮಾನಗಳು, ಬೆಳವಣಿಗೆಗಳು ಘಟಿಸುತ್ತಿವೆ.

ಒಂದೆಡೆ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ಎಸ್‌ಐಆರ್‌ನಿಂದ ಸುಮಾರು 65 ಲಕ್ಷದಿಂದ 2 ಕೋಟಿಗೂ ಅಧಿಕ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮತದಾರರ ಹಕ್ಕುಗಳ ಉಳಿವಿಗಾಗಿ, ಇಂಡಿಯಾ ಮೈತ್ರಿಕೂಟವು ಎಸ್‌ಐಆರ್ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದೆ. ‘ಮತದಾರರ ಅಧಿಕಾರ ಯಾತ್ರೆ’ ನಡೆಯುತ್ತಿದೆ. ಮತ್ತೊಂದು ಕಡೆಗೆ ರಾಜಕೀಯ ಪಕ್ಷಗಳು ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ, ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಹಾಗೂ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

ಒಟ್ಟು 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರ ವಿಧಾನಸಭೆಗೆ ಇದೇ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆಗಳು ನಡೆಯಲಿವೆ. ಸರ್ಕಾರ ರಚನೆಗೆ 122 ಸ್ಥಾನಗಳ ಕನಿಷ್ಠ ಬಹುಮತ ಬೇಕಾಗಿದೆ. ಸದ್ಯಕ್ಕೆ ಎಸ್‌ಐಆರ್‌ ಸುತ್ತಲೂ ಹೆಚ್ಚು ಚರ್ಚೆಗಳು ನಡೆಯುತ್ತಿದ್ದರೂ, ಪ್ರಕರಣ ಸುಪ್ರೀಂ ಕೋರ್ಟ್‌ ಕಟಕಟೆಯಲ್ಲಿರುವ ಕಾರಣ, ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ. ಎಸ್‌ಐಆರ್ ಹೊರತಾಗಿ, ಬಿಹಾರದ ನಿರುದ್ಯೋಗ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಹಣದುಬ್ಬರ ಸೇರಿದಂತೆ ಇತರ ಗಂಭೀರ ಸಮಸ್ಯೆಗಳು ಮುನ್ನೆಲೆಗೆ ಬರಲಿವೆ.

ಎಲ್ಲ ಪ್ರಮುಖ ಪಕ್ಷಗಳು ಜಾತಿ ಜನಗಣತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿವೆ. ರಾಜ್ಯದ ಜಾತಿ ಆಧಾರಿತ ಅಸಮಾನತೆಗಳನ್ನು ತೊಡೆದುಹಾಕುವ ಭರವಸೆಗಳನ್ನು ನೀಡುತ್ತಿವೆ. ಆಡಳಿತಾರೂಢ ಎನ್‌ಡಿಯ ಸರ್ಕಾರವು ಮಹಿಳೆಯರಿಗೆ ಸ್ವ-ಉದ್ಯೋಗಕ್ಕೆ 10,000 ರೂ. ಸಾಲ ಮತ್ತು ಮನೆಗಳಿಗೆ 125 ಯುನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಘೋಷಿಸಿದೆ.

ಹಾಗೆ ನೋಡಿದರೆ, ಸುಮಾರು 1.5 ವರ್ಷ (2015ರ ನವೆಂಬರ್‌ – 2017ರ ಜುಲೈ) ಹೊರತುಪಡಿಸಿ ಕಳೆದ 20 ವರ್ಷಗಳಿಂದ (18.5 ವರ್ಷ) ನಿರಂತರವಾಗಿ ನಿತೀಶ್‌ ಕುಮಾರ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಆದಾಗ್ಯೂ, ಆಡಳಿತಾರೂಢ ಸರ್ಕಾರ ಈಗಲೂ ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ. 2025ರ ಚುನಾವಣೆಯಲ್ಲಿ ಎನ್‌ಡಿಎ ಗೆದ್ದರೆ, ಯುವಜನರಿಗೆ ವರ್ಷಕ್ಕೆ 1 ಕೋಟಿ ಉದ್ಯೋಗ ಒದಗಿಸುತ್ತೇವೆ ಎಂಬ ಆಶ್ವಾಸನೆಗಳನ್ನೇ ನೀಡುತ್ತಿದೆ.

ದೀರ್ಘಕಾಲದ ಅಧಿಕಾರ ನಡೆಸಿ, ಈಗಲೂ ಆಶ್ವಾಸನೆಗಳಿಗೇ ಸೀಮಿತವಾಗಿರುವ ಸರ್ಕಾರದ ವಿರುದ್ಧ ಮಹಾಘಟಬಂಧನ ತೀವ್ರ ವಾಗ್ದಾಳಿ ನಡೆಸುತ್ತಿದೆ. ಆಡಳಿತ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸುತ್ತಿವೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನೀತಿಶ್ ಕುಮಾರ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರಿ ಯೋಜನೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್‌, ಜಾತಿಗಣತಿಯ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡಿದೆ. ಆರ್‌ಜೆಡಿ ಕೂಡ ಸಾಮಾಜಿಕ ನ್ಯಾಯದ ಬಗ್ಗೆ ಹೆಚ್ಚು ಮಾತನಾಡುತ್ತಿದೆ.

ಚುನಾವಣೆಗಾಗಿ ಬಿಜೆಪಿ ನಾಯಕರು ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಮತ್ತು ಸಮ್ರಾಟ್ ಚೌಧರಿ ಅವರಂತಹ ಮೈತ್ರಿ ನಾಯಕರನ್ನು ಮುಂದಿಟ್ಟುಕೊಂಡು ಜಾತಿ ಸಮೀಕರಣ ಬಲಪಡಿಸುತ್ತಿದ್ದಾರೆ. ಎನ್‌ಡಿಎ ಆಂತರಿಕ ಸಮೀಕ್ಷೆಯ ಪ್ರಕಾರ, ನಿತೀಶ್‌ ಅವರ ಜೆಡಿಯು ಪಕ್ಷಕ್ಕೆ 15% ಜನರ ಬೆಂಬಲವಿದೆ. ಬಿಜೆಪಿ ಮತ್ತು ಇತರ ಮೈತ್ರಿ ಪಕ್ಷಗಳಿಗೆ 35% ಬೆಂಬಲವಿದೆ. ಒಟ್ಟು 50% ಬೆಂಬಲವನ್ನು ಹೊಂದಿರುವ ಎನ್‌ಡಿಎ 136 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಮತ್ತೆ ಅಧಿಕಾರ ಉಳಿಸಿಕೊಳ್ಳಬಹುದು ಎಂಬ ವಿಶ್ವಾಸ ಎನ್‌ಡಿಎಯಲ್ಲಿದೆ.

ಇದೆಲ್ಲದರ ನಡುವೆ, ನಿತೀಶ್‌ ಅವರ ಹಂಗಿಲ್ಲದೆ, ಬಿಜೆಪಿಯೇ ಬಹುಮತದೊಂದಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಹಂಬಲ ಹೊಂದಿದೆ ಎಂಬ ಚರ್ಚೆ ಹೆಚ್ಚಾಗಿದೆ. ಬಿಜೆಪಿಯ ಈ ತಂತ್ರಕ್ಕೆ ‘ವೋಟ್‌ ಚೋರಿ’ ನೆರವಾಗಬಹುದು. ಎಸ್‌ಐಆರ್‌ ಮೂಲಕ ಮತಗಳ ಏರು-ಪೇರು ಮಾಡಿ, ಮತಗಳ ಕದ್ದು ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲು ಅಥವಾ ಬಿಜೆಪಿಯೇ ಸರ್ಕಾರ ರಚಿಸಲು ಹವಣಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಈ ಲೇಖನ ಓದಿದ್ದೀರಾ?: ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್‌ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ

ಮತಗಳ್ಳತನದಲ್ಲಿ ತೊಡಗಿರುವ ಬಿಜೆಪಿ-ಜೆಡಿಯುಅನ್ನು ಜನರು ಮಣಿಸುತ್ತಾರೆ, ಅಧಿಕಾರದಿಂದ ಹೊರಹಾಕುತ್ತಾರೆ ಎಂದು ಇಂಡಿಯಾ (ಮಹಾಘಟಬಂಧನ್) ಮೈತ್ರಿಕೂಟ ಹೇಳುತ್ತಿದೆ. ಇಂಡಿಯಾ ಮೈತ್ರಿಕೂಟವು ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ತೇಜಸ್ವಿ ನೇತೃತ್ವದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು, ಸಾಮಾಜಿಕ ನ್ಯಾಯವನ್ನು ಖಾತ್ರಿ ಪಡಿಸಲು ಸರ್ಕಾರವು ಶ್ರಮಿಸಲಿದೆ ಎಂದು ಹೇಳಿದೆ.

ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ಬೀಡುಬಿಟ್ಟಿದ್ದಾರೆ. ಮತದಾರರ ಅಧಿಕಾರ ಯಾತ್ರೆಗಳನ್ನು ನಡೆಯುತ್ತಿದ್ದಾರೆ. ಯುವಜನರು, ದಲಿತರು, ಹಿಂದುಳಿದವರು, ತಳ ಸಮುದಾಯಗಳು ಹಾಗೂ ಮಹಿಳೆಯ ಸಮಸ್ಯೆ ಮತ್ತು ಹಕ್ಕುಗಳ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಅವರ ಯಾತ್ರೆ, ಪ್ರತಿಭಟನೆ, ಪ್ರಚಾರಗಳು ಕಾಂಗ್ರೆಸ್‌ಗೆ ಭದ್ರ ಬುನಾದಿ ಹಾಕಿಕೊಡಲಿವೆ. ಬಿಹಾರ ಜನರಲ್ಲಿ ಕಾಂಗ್ರೆಸ್‌ ಪರವಾದ ಒಲವು ಹೆಚ್ಚುತ್ತಿದೆ. ತೇಜಸ್ವಿ ಯಾದವ್ ಅವರ ನಾಯಕತ್ವವೂ ಬೇರೂರುತ್ತಿದೆ. ಇದು ಚುನಾವಣೆಯಲ್ಲಿ ಮ್ಯಾಜಿಕ್ ಮಾಡಬಹುದು ಎಂಬ ಅಭಿಪ್ರಾಯಗಳಿವೆ.

ಎನ್‌ಡಿಎ ಮತ್ತು ಇಂಡಿಯಾ ನಡುವಿನ ಹೋರಾಟದಲ್ಲಿ ಪ್ರಶಾಂತ್ ಕಿಶೋರ್‌ ಅವರ ಜನ್ ಸುರಾಜ್ ಪಕ್ಷವು ಸದ್ದು ಮಾಡಲು ಆರಂಭಿಸಿದೆ. ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ 2022ರಿಂದ 2024ರವರೆಗೆ 5,000 ಕಿ.ಮೀ ಪಾದಯಾತ್ರೆ ನಡೆಸಿ, ಸುಮಾರು 5,500ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ಸಭೆಗಳನ್ನು ನಡೆಸಿದ್ದಾರೆ. ತಮ್ಮ ಪಕ್ಷವು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲಿದೆ. ಸ್ವಚ್ಛ ರಾಜಕಾರಣ ನಡೆಸಲಿದೆ ಎಂದು ಕಿಶೋಕ್ ಹೇಳಿಕೊಂಡಿದ್ದಾರೆ. ತಾವು ಪಕ್ಷದ ಅಭ್ಯರ್ಥಿಗಳನ್ನು ಅಮೆರಿಕನ್ ಶೈಲಿಯಲ್ಲಿ ಆಯ್ಕೆ ಮಾಡುತ್ತೇವೆ. ಕಾರ್ಯಕ್ಷಮತೆವುಳ್ಳವರಿಗೆ ಟಿಕೆಟ್‌ ನೀಡುತ್ತೇವೆ ಎಂದಿದ್ದಾರೆ. ಆದಾಗ್ಯೂ, ಈ ಬಾರಿಯ ಚುನಾವಣೆಯಲ್ಲಿ ಅವರ ಪಕ್ಷವು ಒಂದು ಅಥವಾ ಎರಡು ಸ್ಥಾನಗಳನ್ನು ಮಾತ್ರವೇ ಗೆಲ್ಲಬಹುದು ಎಂಬುದು ರಾಜಕೀಯ ವಿಶ್ಲೇಷಕರು ಅಭಿಪ್ರಾಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X