ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ರೈತರಿಂದ ₹3 ಸಾವಿರ ಲಂಚ ಪಡೆದು, ಟೇಬಲ್ ಮೇಲೆ ಹಣ ಎಣಿಸಿ ಜೇಬಿಗೆ ಹಾಕಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಜೊತೆಗೆ “ನಿಮ್ಮ ಕೆಲಸ ತಕ್ಷಣ ಮಾಡಿಸುತ್ತೇನೆ” ಎಂದು ಹೇಳುತ್ತಿರುವುದೂ ದಾಖಲಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ತಕ್ಷಣ ಕ್ರಮಕ್ಕೆ ಇಳಿದು, ಸೋಮವಾರವೇ ದುರ್ಯೋಧನ ಮಾಳಿ ಅವರನ್ನು ಅಮಾನತು ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಜಿಲ್ಲಾ ಇನ್ಚಾರ್ಜ್ ಚೀಫ್ ಪ್ರವೀಣಕುಮಾರ ಚಿಕ್ಕಾಡೆ, “ಭಾನುವಾರ ವಿಡಿಯೋ ನಮ್ಮ ಗಮನಕ್ಕೆ ಬಂದಿತ್ತು. ಸೋಮವಾರವೇ ಅಮಾನತು ಆದೇಶ ಹೊರಡಿಸಲಾಗಿದೆ” ಎಂದು ತಿಳಿಸಿದ್ದಾರೆ.