ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಆಗಸ್ಟ್ 26ರಂದು ನಡೆದಿದ್ದ ದರೋಡೆ ಯತ್ನ ಪ್ರಕರಣದಲ್ಲಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯ ವಿಜಯ ಜಾವೀರ ಹಾಗೂ ಸಾಂಗ್ಲಿ ಜಿಲ್ಲೆಯ ಜರಂಡಿಯ ಯಶವಂತ ಗುರವ. ಇವರಿಂದ ದರೋಡೆ ವೇಳೆ ಬಳಸಿದ ಎರಡು ಪಿಸ್ತೂಲ್, ಏಳು ಜೀವಂತ ಗುಂಡುಗಳು, ಕಾರು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ದರೋಡೆ ಯತ್ನದ ಸಂಪೂರ್ಣ ದೃಶ್ಯಾವಳಿ ಮಳಿಗೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನೇ ಆಧಾರ ಮಾಡಿಕೊಂಡು ಪೊಲೀಸರು ತನಿಖೆ ಮುಂದುವರೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣದಲ್ಲಿ ಇನ್ನೂ ಮೂವರು ಪರಾರಿಯಾಗಿದ್ದು, ಸಾಂಗ್ಲಿಯ ಸಾವಳಜದ ಹನಮಂತ ವಾಂಡರೆ, ಆಸ್ವಾದದ ಭರತ ಕಾಟಕರ ಹಾಗೂ ಸಾತಾರ ಜಿಲ್ಲೆಯ ಪೊಸೇಗಾಂವ-ವೀಸಾಪುರದ ಸೂರಜ್ ಬೂದಾವಲೆ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಮುಖ್ಯ ಆರೋಪಿ ವಿಜಯ ಜಾವೀರನ ವಿರುದ್ಧವೇ ಈಗಾಗಲೇ ಕೊಲೆ, ಡಕಾಯಿತಿ, ಸುಲಿಗೆ ಸೇರಿ 11 ಪ್ರಕರಣಗಳು ದಾಖಲಾಗಿವೆ. ಉಳಿದವರ ಮೇಲೂ ವಿವಿಧ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್ಗಳು ರಾಜ್ಯಕ್ಕೆ ಬರುವ ಸುಳಿವು ಸಿಕ್ಕಿದ್ದು, ಅವು ಹೇಗೆ ಹರಿದು ಬರುತ್ತಿವೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ವಿವರಿಸಿದರು.