ಬೆಳಗಾವಿ ನಗರದ ನಾರವೇಕರ್ ಗಲ್ಲಿಯಲ್ಲಿ ರಾತ್ರಿ ಸಂಭವಿಸಿದ ಘಟನೆಯಲ್ಲಿ ವೃದ್ಧೆಯೊಬ್ಬರು ಸಜೀವ ದಹನಗೊಂಡಿದ್ದಾರೆ.
ಮನೆಯಲ್ಲೊಬ್ಬರೇ ವಾಸಿಸುತ್ತಿದ್ದ ಸುಪ್ರಿಯಾ ಬೈಲೂರ (78), ರಾತ್ರಿ 11 ಗಂಟೆಯ ಸುಮಾರಿಗೆ ಬೆಂಕಿಗಾಹುತಿಯಾಗಿದ್ದಾರೆ. ಆಕೆಯಿದ್ದ ಕೋಣೆಗೆ ಬೆಂಕಿ ವ್ಯಾಪಿಸಿ ಪಾತ್ರೆ, ಬಟ್ಟೆ, ಹಾಸಿಗೆ ಸೇರಿದಂತೆ ಮನೆ ಸಮಗ್ರವಾಗಿ ಸುಟ್ಟುಹೋಗಿದೆ.
ಮೇಲ್ನೋಟಕ್ಕೆ ಇದು ಆಕಸ್ಮಿಕ ಬೆಂಕಿ ಅವಘಡವಾಗಿದ್ದು, ಬೆಂಕಿ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲಾಗದೆ ವೃದ್ಧೆ ದಹನವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕಪಕ್ಕದ ಮನೆಯವರು ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ, ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದುಹೋಗಿತ್ತು.
ಘಟನಾ ಸ್ಥಳಕ್ಕೆ ಖಡೆಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಪಿಐ ಶ್ರೀಶೈಲ ಗಾಬಿ ಸ್ಥಳ ಪರಿಶೀಲನೆ ಮಾಡಿದ್ದಾರೆ.