ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ನಡೆಸುವ ಸಲುವಾಗಿ ಆಗಸ್ಟ್ 17, 20, 23, 24 ಮತ್ತು 29ರಂದು ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮ, “ಆಗಸ್ಟ್ 17ರಂದು ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲು ಸೇವೆ ಇರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ರೈಲು ಸೇವೆಗಳು ಲಭ್ಯವಿರುತ್ತದೆ” ಎಂದು ತಿಳಿಸಿದೆ.
“ಆಗಸ್ಟ್ 23, 24 ರಂದು ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ. ಬೆಳಗ್ಗೆ 7.00 ಗಂಟೆಯ ನಂತರ ಕೆಂಗೇರಿಯಿಂದ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಲಭ್ಯವಿರುತ್ತದೆ” ಎಂದು ತಿಳಿಸಿದೆ.
“ಆಗಸ್ಟ್ 23, 24 ರಂದು ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೈಸೂರು ರಸ್ತೆ ನಿಲ್ದಾಣದಲ್ಲಿ ರೈಲುಗಳ ಸೇವೆ ಕೊನೆಗೊಳ್ಳುತ್ತದೆ. ಇತರೆ ದಿನಗಳಲ್ಲಿ ರೈಲುಗಳು ಕೆಂಗೇರಿ ನಿಲ್ದಾಣದ ವರೆಗೆ ರೈಲು ಸೇವೆ ಲಭ್ಯವಿರುತ್ತದೆ. ಬೆಳಗ್ಗೆ 7 ಗಂಟೆಯ ನಂತರ ಬೈಯಪ್ಪನಹಳ್ಳಿಯಿಂದ ಕೆಂಗೇರಿ ನಿಲ್ದಾಣದ ಮಾರ್ಗಗಳ ನಡುವೆ ಎಂದಿನಂತೆ ಸೇವೆಗಳು ಲಭ್ಯವಿರುತ್ತದೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ ದಿನ | ಬಿಬಿಎಂಪಿ ಮತ್ತು ಕೆಎಸ್‌ಆರ್‌ಟಿಸಿ ಕಚೇರಿಗಳಲ್ಲಿ ಆಚರಣೆ
“ಆಗಸ್ಟ್ 20 ಮತ್ತು 29ರಂದು ಬೈಯಪ್ಪನಹಳ್ಳಿ ಟರ್ಮಿನಲ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಮಾರ್ಗಗಳ ನಡುವೆ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ” ಎಂದು ತಿಳಿಸಿದೆ.
ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಎಂದಿನಂತೆ ರೈಲು ಸೇವೆ ಇರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಆಗಿರುವ ಬದಲಾವಣೆಯನ್ನು ಗಮನಿಸಿ ಸಹಕರಿಸುವಂತೆ ಬಿಎಂಆರ್‌ಸಿಎಲ್ ಕೋರಿದೆ.