ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುಂಬಲ ಗ್ರಾಮದಲ್ಲಿ ಒಂದೇ ಮನೆಯ ಅಣ್ಣ ತಮ್ಮ, ಅಕ್ಕತಂಗಿಯರ ಮಕ್ಕಳು ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ಟಿ. ನರಸೀಪುರ ಠಾಣಾ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ಅರ್ಜುನ್ ಎಂಬ ದಲಿತ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಿನಾಂಕ-05-09-2025 ರಂದು ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ, ಸಬ್ ಇನ್ಸ್ ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಮತ್ತು ಇಬ್ಬರು ಪೊಲೀಸರು ಯಾವುದೇ ದೂರು ದಾಖಲಾಗದಿದ್ದರೂ, ಯಾವುದೇ ನೊಟೀಸ್ ನೀಡದೆ, ಠಾಣೆಗೆ ಕರೆದೊಯ ದೈಹಿಕವಾಗಿ ದಲಿತ ಯುವಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸದರಿ ಗಲಾಟೆಯೂ ಕ್ಷುಲ್ಲಕವಾಗಿದ್ದು, ಮನೆಯವರೊಂದಿಗೆ ನಡೆದಿರುವ ಚಿಕ್ಕಪುಟ್ಟ ಗಲಾಟೆ ಎಂದು ತಿಳಿದು ಬಂದಿದೆ. ಪೊಲೀಸರು ಸೂಕ್ತವಾದ ತಿಳುವಳಿಕೆ ನೀಡಿ, ಮುಂದೆ ನಡೆಯದಂತೆ ಮಾರ್ಗದರ್ಶನ ನೀಡಬಹುದಿತ್ತು. ಆದರೆ, ದೂರು ಸ್ವೀಕಾರವಾಗದೆ ಠಾಣೆಗೆ ಕರೆದೊಯ್ದಿರುವುದು, ಮನಬಂದಂತೆ ಥಳಿಸಿದ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಪ್ರಶಸ್ತಿಗಳು ನಮ್ಮನ್ನು ಅಣಕಿಸಬಾರದು : ಜಯಪ್ಪ ಹೊನ್ನಾಳಿ
ನ್ಯಾಯ ಎಲ್ಲಿದೆ? ನ್ಯಾಯ ಯಾರ ಬಳಿ ಕೇಳಬೇಕು? ನ್ಯಾಯ ನೀಡಬೇಕಾದವರೇ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟು ಸರಿ?. ಈ ಘಟನೆಗೆ ಕಾರಣರಾದ ತಪ್ಪಿತಸ್ಥ ಪೊಲೀಸರನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಅಮಾನತು ಮಾಡಿ, ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೖಗೊಳ್ಳಬೇಕೆಂದು ದಸಂಸ ಆಗ್ರಹಿಸಿದೆ.
