ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪಿಕರ ರಸ್ತೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಡನಾಳದ ನಿವಾಸಿ ಪ್ರತಾಪಗೌಡ ಅಲಿಯಾಸ್ ಚೇತನಗೌಡ ಕುಮಾರಗೌಡರ (30) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಪ್ರತಾಪಗೌಡ ಅವರ ಎದೆ ಮತ್ತು ಕೆಳ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರತಾಪಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಕಾರಣರಾದ ಸೆಟ್ಲಮೆಂಟ್ ನಗರದ ನಿವಾಸಿ ರಾಕೇಶ್ ಬಿಜವಾಡ್ (26), ಸೋನಿಯಾ ಗಾಂಧಿನಗರದ ಶಿವಕುಮಾರ್ ಧವಳೇಶ್ವರ (24), ಗೋಕಾಕ್ (21), ಫಕ್ಕೀರೇಶ್ ದೊಡ್ಡಮನಿ (20) ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಪಟ್ಟವ ಸೇರಿದಂತೆ ಒಟ್ಟು 4 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೋನಿಯಾ ಗಾಂಧಿ ನಗರದ ಶಿರಿ, ಕೃಷ್ಣ ಹಾಗೂ ಶಿವ ಎಂಬುವವರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗುತ್ತಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಶಿವಪ್ರಕಾಶ ನಾಯ್ಕ ಮತ್ತು ಉಮೇಶ ಚಿಕ್ಕಮಠ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸೆ.06 ರಿಂದ ಸೆ.15 ರವರೆಗೆ ಗ್ರಾಮ ಪಂಚಾಯತ್ಗಳ ಜಮಾಬಂದಿ ಕಾರ್ಯಕ್ರಮ
ಮಾಧ್ಯಮಗಳೊಂದಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದಿದ್ದಾರೆ ಎನ್ನಲಾಗಿದೆ.