ಮಂಡ್ಯ ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವ ವೇಳೆ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪಿನ ನಡುವೆ ಕಲ್ಲು ತೂರಾಟ ನಡೆದಿದೆ.
ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಘಟನೆಯಲ್ಲಿ ಒಟ್ಟು 8 ಮಂದಿಗೆ ಗಾಯಗಳಾಗಿದೆ. ಅವರೆಲ್ಲರನ್ನು ಚಿಕಿತ್ಸೆಗಾಗಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ದೂರು ಪಟ್ಟಣದ ಸಿದ್ದಾರ್ಥ ನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಸಾಗುತ್ತಿತ್ತು. ರಾಮ್ ರಹೀಂ ನಗರದ ಮಸೀದಿ ಬಳಿ ಹೋದ ಸಂದರ್ಭ ರಾತ್ರಿ 8 ಗಂಟೆಯಲ್ಲಿ ಕಲ್ಲು ತೂರಾಟ ನಡೆದಿದೆ. ಕೆಲವೇ ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಮಸೀದಿ ಮೇಲೆಯೂ ಕಲ್ಲು ತೂರಾಟವಾಗಿತ್ತು. ಆಗ ಎರಡು ಕೋಮುಗಳ ಗುಂಪಿನ ನಡುವೆ ಘರ್ಷಣೆ ಉಂಟಾಗಿ, ತೀವ್ರ ಸ್ವರೂಪ ಪಡೆದಿತ್ತು.
ಭಾನುವಾರ ರಾತ್ರಿ ಮೊದಲಿಗೆ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ಸಾಗಿ ಬಂದಿದೆ. ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು, ಮೈಕ್ ಹಾಕಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಮಸೀದಿ ಬಳಿ ಎರಡು ಕೋಮುಗಳ ಯುವಕರ ನಡುವೆ ಏಕಾಏಕಿ ಕಲ್ಲು ತೂರಾಟ ನಡೆದಿದೆ.
ಆ ಸಂದರ್ಭ ಎರಡು ಗುಂಪುಗಳ ಮುಖಂಡರು ಅಲ್ಲಿ ಜಮಾಯಿಸಿದರು. ಬಿಜೆಪಿ, ಆರ್.ಎಸ್.ಎಸ್., ಬಜರಂಗದಳ ಕಾರ್ಯಕರ್ತರು ಕೂಡ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ.
ಈ ಘಟನೆ ಖಂಡಿಸಿ ಮದ್ದೂರಿನಲ್ಲಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಮಾಡಲಾಗಿತ್ತು. ಈ ವೇಳೆ ಕೋಟ್ಯಾಂತರ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿತ್ತು.