- ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆ
- ‘ಕೆಲವು ಭಾಗ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗುವುದು’
ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜಲವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ನಾವು ವಿದ್ಯುತ್ ಬೇಡಿಕೆ ನಿರ್ವಹಿಸಬೇಕಾಗಿದೆ ಎಂದು ಸಚಿವ ಜಿ ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗುವ ಸಂಭವವಿದೆ. ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ” ಎಂದರು.
“ತುಮಕೂರಿನ ಶೇ.35ರಷ್ಟು ರೈತರು ಮಾತ್ರ ಬಿತ್ತನೆ ಆರಂಭಿಸಿದ್ದಾರೆ. ಮಳೆ ಕಡಿಮೆಯಾಗಿರುವುದೇ ಕಡಿಮೆ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಲು ಕಾರಣವಾಗಿದೆ. ಮಳೆ ಕಡಿಮೆಯಾದ ಕಾರಣ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಹುಸಿ ದೇಶಭಕ್ತರ ಮೋದಿ ಕಾಲ; ಗಾಂಧಿ ಅವಮಾನಿಸುವ ಕಾಲ
“ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಕಡಿಮೆ ನೀರಿದೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಆಗಸ್ಟ್ 11 ರ ಹೊತ್ತಿಗೆ ಅವುಗಳ ಪೂರ್ಣ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟು ನೀರು ಇದೆ. 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 11 ರ ಹೊತ್ತಿಗೆ ಸಾಮಾನ್ಯ ಮಳೆಯಾಗಿದೆ” ಎಂದರು.
ಸರ್ಕಾರವು ತನ್ನ ಐದು ಚುನಾವಣಾ ಗ್ಯಾರಂಟಿಗಳನ್ನು ಪೂರೈಸಲು ಹಣವನ್ನು ಸಂಗ್ರಹಿಸಲು ಒತ್ತಡದಲ್ಲಿದೆ. ಈಗ ಬರಗಾಲದಿಂದ ಸಂತ್ರಸ್ತರಾದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕಾಗಿದೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಹೊರೆಯಾಗಲಿದೆ” ಎಂದು ಹೇಳಿದರು.