ನೆರೆಯ ರಾಷ್ಟ್ರಗಳ ಅರಾಜಕತೆಯಿಂದ ಪಾಠ ಕಲಿತು, ಸರಿ ದಾರಿಗೆ ಬರುವುದೇ ಭಾರತ?

Date:

Advertisements
ಹತ್ತಾರು ಕಾರಣಗಳಿಂದಾಗಿ ಭಾರತೀಯರ ಸಹನೆಯ ಕಟ್ಟೆ ಒಡೆಯುತ್ತಿದೆ. ಸರ್ಕಾರದ ವಿರುದ್ಧ ಆಕ್ರೋಶವು ಉಸಿರುಗಟ್ಟಿದೆ. ಆಕ್ರೋಶ ಎಂದಾದರೂ ಸ್ಪೋಟಗೊಳ್ಳಬಹುದು. ಅದಕ್ಕೂ ಮೊದಲೇ, ಭಾರತವು ನೆರೆಯ ರಾಷ್ಟ್ರಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು.

ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ಅರಾಜಕತೆ ಮತ್ತು ರಾಜಕೀಯ ಅಸ್ಥಿರತೆಯಿಂದ ತತ್ತರಿಸುತ್ತಿವೆ. 2022ರಲ್ಲಿ ಪಾಕಿಸ್ತಾನ, 2023ರಲ್ಲಿ ಶ್ರೀಲಂಕಾ, 2024ರಲ್ಲಿ ಬಾಂಗ್ಲಾದೇಶಗಳು ಅರಾಜಕತೆಯಿಂದ ದಿವಾಳಿಯಾಗಿದ್ದವು. ಈಗಿನ ಸರದಿ ನೇಪಾಳದ್ದು. ನೇಪಾಳದಲ್ಲಿ ಯುವಜನರು ಆರಂಭಿಸಿದ ‘ಜೆನ್‌ ಜಡ್‌’ (Gen Z) ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಅಲ್ಲಿನ ಸರ್ಕಾರ ಪತನಗೊಂಡಿದೆ. ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ್ದಾರೆ. ನೇಪಾಳ ಅಸ್ಥಿರಗೊಂಡಿದೆ.

ಭಾರತದ ನೆರೆಯ ರಾಷ್ಟ್ರವಾದ ನೇಪಾಳ 2008ರಲ್ಲಿ ರಾಜತಂತ್ರವನ್ನು ಕೊನೆಗಾಣಿಸಿ, ಪ್ರಜಾತಂತ್ರವನ್ನು ಅಳವಡಿಸಿಕೊಂಡಿತು. ಆದರೂ, ಕಳೆದ ಈ 17 ವರ್ಷಗಳಲ್ಲಿ ನೇಪಾಳ ಸ್ಥಿರತೆ ಕಾಣಲಿಲ್ಲ. ಯಾವುದೇ ಸರ್ಕಾರವೂ ಐದು ವರ್ಷಗಳ ಅಧಿಕಾರಾವಧಿ ಪೂರೈಸಲಿಲ್ಲ. ಬದಲಾಗಿ, 17 ವರ್ಷಗಳಲ್ಲಿ 14 ಸರ್ಕಾರಗಳು ಬದಲಾಗಿವೆ. ಈಗಿದ್ದ ಸರ್ಕಾರವೂ ಪತನಗೊಂಡಿದೆ.  

ರಾಜಕೀಯ ಅಸ್ಥಿರತೆ, ದುರಾಡಳಿತ, ವಂಶ ರಾಜಕಾರಣ (ನೆಪೋಟಿಸಂ), ಜನರ ಸ್ವಾತಂತ್ರ್ಯ ಹರಣ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸೇರಿದಂತೆ ನಾನಾ ಕಾರಣಗಳಿವೆ. ನೇಪಾಳದಲ್ಲಿ 2008ರಲ್ಲಿ ಪ್ರಜಾತಂತ್ರ ಆರಂಭವಾಯಿತಾದರೂ, ಅಲ್ಲಿನ, ಸಿಪಿಎನ್‌-ಯುಎಂಎಲ್‌, ನೇಪಾಳಿ ಕಾಂಗ್ರೆಸ್‌ ಮತ್ತು ಮಾವೋವಾದಿ ಪಕ್ಷಗಳು ನೇಪಾಳವನ್ನು ಸದೃಢವಾಗಿ ಮುನ್ನಡೆಸುವಲ್ಲಿ ವಿಫಲವಾಗಿವೆ. ಸಿಪಿಎನ್‌-ಯುಎಂಎಲ್‌ನ ನಾಯಕ ಕೆ.ಪಿ ಶರ್ಮಾ ಒಲಿ ಅವರು 2015ರಿಂದ ಹಲವು ಪಕ್ಷಗಳೊಂದಿಗೆ ಮೈತ್ರಿಯನ್ನು ಪದೇ-ಪದೇ ಬದಲಿಸಿ ನಾಲ್ಕು ಬಾರಿ ಪ್ರಧಾನಿಯಾಗಿದ್ದಾರೆ. ಪರಿಣಾಮ, ಸರ್ಕಾರವೂ ಸ್ಥಿರವಾಗಿರಲಿಲ್ಲ, ದೇಶದ ಪ್ರಗತಿಯೂ ಸ್ಥಿರವಾಗಲಿಲ್ಲ.

ಪರಿಣಾಮವಾಗಿ, ಆಡಳಿತವು ತೀರಾ ದುರ್ಬಲಗೊಂಡಿತ್ತು. ದುರಾಡಳಿತಕ್ಕೂ ಕಾರಣವಾಯಿತು. ರಾಜಕಾರಣಿಗಳು ಮತ್ತು ಅವರ ಕುಟುಂಬಗಳ ದುರಾಡಳಿತದಿಂದ ಹಗರಣಗಳು ಹೆಚ್ಚಾಗಿವೆ. ಸಹಕಾರಿ ವಲಯ, ಟೆಲಿಕಾಂ ಸೆಕ್ಟರ್ ಕ್ಷೇತ್ರದಲ್ಲಿ ಭಾರೀ ಅಕ್ರಮಗಳು ನಡೆದಿವೆ. ರಾಜಕಾರಣಿಗಳು ವಂಶರಾಜಕಾರಣ (ನೆಪೋಟಿಸಂ)ನಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಜೊತೆಗೆ, ಆರ್ಥಿಕ ಬಿಕ್ಕಟ್ಟೂ ನೇಪಾಳವನ್ನು ಆವರಿಸಿಕೊಂಡಿತು. ನಿರುದ್ಯೋಗ ದರವು 12.6ಕ್ಕೆ ಏರಿಕೆಯಾಗಿದೆ. ಜಿಡಿಪಿಯೂ ಕುಸಿಯುತ್ತಿದೆ. ಬೆಲೆ ಏರಿಕೆಯ ಹೊರೆ ಹೆಚ್ಚುತ್ತಿದೆ.

ಇದೆಲ್ಲವೂ ಯುವಜನರನ್ನು ಆಕ್ರೋಶಗೊಳಿಸಿತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳಿಗೆ ಕಾರಣವಾಯಿತು. ಯುವಜನರು ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಆದರೆ, ಸರ್ಕಾರವು ಸೆಪ್ಟೆಂಬರ್ 4ರಂದು ಸಾಮಾಜಿಕ ಮಾಧ್ಯಮದ ಮೇಲೆ ನಿಷೇಧ ಹೇರಿತು. ಇದು ಯುವಜನರನ್ನು ಮತ್ತಷ್ಟು ಕೆರಳಿಸಿತು. ಯುವಜನರು ಸೆಪ್ಟೆಂಬರ್ 8ರಂದು ‘ಜೆನ್‌ ಜಡ್’ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಕಠ್ಮಂಡುನಲ್ಲಿರುವ ಸಂಸತ್ತಿನ ಹೊರಗೆ ಜಮಾಯಿಸಿ, ಶಾಂತಿಯುತ ಬೃಹತ್ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆ ಶಾಂತವಾಗಿದ್ದರೂ, ಪೊಲೀಸರು ಪ್ರತಿಭಟನಾನಿರತ ಯುವಜನರ ಮೇಲೆ ಟಿಯರ್ ಗ್ಯಾಸ್, ರಬ್ಬರ್‌ ಬುಲೆಟ್‌ಗಳು, ಜಲಪಿರಂಗಿ ಹಾಗೂ ಲಾಠಿಚಾರ್ಜ್‌ ಮೂಲಕ ದಾಳಿ ನಡೆಸಿದರು. ಪೊಲೀಸರ ದಾಳಿಯನ್ನು ವಿಶ್ವಸಂಸ್ಥೆ ‘ಅನಗತ್ಯ’ ಎಂದು ಬಣ್ಣಿಸಿದೆ. ಪೊಲೀಸ್‌ ದಾಳಿಗೆ ಅವರದ್ದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ ಯುವಜನರು ಸಂಸತ್ತಿಗೆ ನುಗ್ಗಿದರು. ಪೊಲೀಸರು ಮತ್ತು ಯುವಜನರ ನಡುವಿನ ಸಂಘರ್ಷದಲ್ಲಿ ಸುಮಾರು 22 ಮಂದಿ ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸೆಪ್ಟೆಂಬರ್ 9ರಂದು ಮುಂಜಾನೆಯಿಂದಲೇ ಕಠ್ಮಂಡು ಸೇರಿದಂತೆ ಹಲವು ನಗರಗಳಲ್ಲಿ ಕರ್ಫ್ಯೂ ಘೋಷಿಸಲಾಗಿತ್ತು. ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧವನ್ನು ಸರ್ಕಾರವು ರದ್ದುಗೊಳಿಸಿತು. ಆದರೂ, ಸರ್ಕಾರದ ಧೋರಣೆಗಳ ವಿರುದ್ಧ ಪ್ರತಿಭಟನೆಗಳು ಮುಂದುವರೆದವು. ಸಿಂಘ ದುರ್ಬಾರ್ ಪ್ಯಾಲೇಸ್ (ಪಾರ್ಲಿಮೆಂಟ್ ಕಟ್ಟಡ), ರಾಷ್ಟ್ರಪತಿ ಮನೆ ಸೇರಿದಂತೆ ಹಲವಾರು ಪ್ರಮುಖ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದರು. ಅಂತಿಮವಾಗಿ, ಮಧ್ಯಾಹ್ನದ ವೇಳೆಗೆ, ಪ್ರಧಾನಿ ಒಲಿ ರಾಜೀನಾಮೆ ನೀಡಿದರು. ‘ರಾಜ್ಯದ ಕೆಟ್ಟ ಸ್ಥಿತಿಯನ್ನು ಪರಿಹರಿಸುವ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿಕೊಂಡರು. ಈಗ ನೇಪಾಳದ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ರಾಷ್ಟ್ರಪತಿ ಮೇಲಿದೆ.

ಇದು ಸದ್ಯಕ್ಕೆ ನೇಪಾಳದ ಪರಿಸ್ಥಿತಿ ಮಾತ್ರವಲ್ಲ, ಈಗಾಗಲೇ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳೂ ಅರಾಜಕತೆ ಮತ್ತು ಅಸ್ಥಿರತೆಗೆ ತುತ್ತಾಗಿ ಚೇತರಿಕೆಗಾಗಿ ಹೆಣಗಾಡುತ್ತಿವೆ. ಭಾರತದಿಂದ ಬೇರ್ಪಟ್ಟ ಪಾಕಿಸ್ತಾನವು 1947ರಿಂದಲೂ ಸೈನ್ಯದ ಹಸ್ತಕ್ಷೇಪದಿಂದ ಬಳಲುತ್ತಿದೆ. ಆದಾಗ್ಯೂ, 2022-24ರ ಅಂದಿನ ಪ್ರಧಾನಿ ಇಮ್ರಾನ್ ಖಾನ್‌ ಆಡಳಿತದಲ್ಲಿ ಪಾಕಿಸ್ತಾನದಲ್ಲಿನ ಮೂಲ ಸೌಕರ್ಯಗಳ ಕೊರತೆ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಆಂತರಿಕ ಸಮಸ್ಯೆಗಳು ಉಲ್ಬಣಗೊಂಡವು. ಜಿಡಿಪಿ ಕುಸಿದರೆ, ಬೆಲೆ ಏರಿಕೆ 30%ರಷ್ಟು ಹೆಚ್ಚಾಯಿತು. ಭ್ರಷ್ಟಾಚಾರ ಆರೋಪಗಳೂ ಕೇಳಿಬಂದವು. ವಿಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆಗಳು ಭುಗಿಲೆದ್ದು, 2023ರಲ್ಲಿ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಯಿತು. ಸರ್ಕಾರವನ್ನು ಉರುಳಿಸಲಾಯಿತು.

ಇನ್ನು, ಶ್ರೀಲಂಕಾದಲ್ಲಿ 2022ರಲ್ಲಿ ಭೀಕರ ಹಿಂಸಾಚಾರವೇ ನಡೆದುಹೋಯಿತು. ಅತಿಯಾದ ಸರ್ಕಾರಿ ಖರ್ಚು, ವಿದೇಶಿ ಸಾಲಗಳು ಮತ್ತು ಜನ ವಿರೋಧಿ ಆರ್ಥಿಕ ನೀತಿಗಳು, ಬೆಲೆ ಏರಿಕೆ ಹಾಗೂ ಇಂಧನ ಕೊರತೆಯು ಜನರನ್ನು ಬಡಿದೆಬ್ಬಿಸಿತು. ರಾತ್ರೋರಾತ್ರಿ ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಷೆ ಅವರ ಮನೆಯ ಮೇಲೆ ಜನರು ದಾಳಿ ನಡೆಸಿದರು. ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ರಾಜಪಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದೇ ಪರಿಸ್ಥಿತಿ 2024ರಲ್ಲಿ ಬಾಂಗ್ಲಾದೇಶದಲ್ಲೂ ಸಂಭವಿಸಿತು. ನಿರುದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ಕುಸಿತದ ವಿರುದ್ಧ ವಿದ್ಯಾರ್ಥಿಗಳು ಆಂದೋಲನ ಆರಂಭಿಸಿದರು. ಭೀಕರ ಹಿಂಸಾಚಾರಗಳು ನಡೆದವು. ಬಾಂಗ್ಲಾದಿಂದ ಭಾರತಕ್ಕೆ ಪಲಾಯನ ಮಾಡಿದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದರು. ಈಗ ನೇಪಾಳದಲ್ಲಿಯೂ ಯುವಜನರು ಬಂಡೆದ್ದು, ಸರ್ಕಾರವನ್ನು ಉರುಳಿಸಿದ್ದಾರೆ.

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ಹಾಗೂ ನೇಪಾಳದ ಈ ಪರಿಸ್ಥಿತಿಗಳಿಗೆ ಭಾರತವೇನೂ ಹೊರತಾಗಿಲ್ಲ. ಭಾರತದಲ್ಲಿಯೂ ನಿರುದ್ಯೋಗ, ಬಡತನ, ಆರ್ಥಿಕ ಬಿಕ್ಕಟ್ಟು, ಬಂಡವಾಳಶಾಹಿ ಪರ ನೀತಿಗಳು, ಜಾತಿ/ಧರ್ಮ/ಲಿಂಗ ಆಧಾರಿತ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಭಾರತವೂ ಅರಾಜಕತೆಯ ಹಾದಿಯಲ್ಲಿದೆ.

ಈ ಲೇಖನ ಓದಿದ್ದೀರಾ?: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?

ಜಗತ್ತಿನ 5ನೇ ದೊಡ್ಡ ಆರ್ಥಿಕತೆ ನಮ್ಮದು ಎಂದು ಹೇಳಿಕೊಳ್ಳುವ ಭಾರತವು ಮೋದಿ ಆಡಳಿತದಲ್ಲಿ ಭಾರೀ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿದೆ. ನಿರುದ್ಯೋಗ ದರವು 9% ಮೀರಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತದ ಬಹುಸಂಖ್ಯೆಯ ಜನರು ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರುತ್ತಿದೆ. ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಸಂಪತ್ತು ಕೆಲವೇ ಶ್ರೀಮಂತ ವ್ಯಕ್ತಿಗಳ ಕೈಸೇರುತ್ತಿದೆ. ಬಡತನ ಹೆಚ್ಚುತ್ತಿದೆ. ಮಹಿಳೆಯರು, ದಲಿತರ ಮೇಲಿನ ದೌರ್ಜನ್ಯ-ಕೌರ್ಯಗಳೂ ಹೆಚ್ಚುತ್ತಿವೆ. ಶಿಕ್ಷಣ-ಆರೋಗ್ಯವು ಜನರ ಕೈಗೆಟುಕದ ಸ್ಥಿತಿಗೆ ತಲುಪಿದೆ. ಅಸಮಾನತೆ ಹೆಚ್ಚುತ್ತಿದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು, ದ್ವೇಷ ಬಿತ್ತಲಾಗುತ್ತಿದೆ. ಜೊತೆಗೆ, ಮತಗಳ್ಳತನದ ಗಂಭೀರ ಆರೋಪಗಳೂ ಕೇಳಿಬರುತ್ತಿವೆ. ಇದೆಲ್ಲವೂ ಅರಾಜಕತೆಯ ಮೂಲದಂತೆ ಕಾಣುತ್ತಿವೆ.

ಇಂತಹ, ಹತ್ತಾರು ಕಾರಣಗಳಿಂದಾಗಿ ಭಾರತೀಯರ ಸಹನೆಯ ಕಟ್ಟೆ ಒಡೆಯುತ್ತಿದೆ. ಸರ್ಕಾರದ ವಿರುದ್ಧ ಆಕ್ರೋಶವು ಉಸಿರುಗಟ್ಟಿದೆ. ಜನರ ಉಸಿರುಗಟ್ಟಿದ ಆಕ್ರೋಶ ಎಂದಾದರೂ ಸ್ಪೋಟಗೊಳ್ಳಬಹುದು. ಅದಕ್ಕೂ ಮೊದಲೇ, ಭಾರತವು ನೆರೆಯ ರಾಷ್ಟ್ರಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು. ಮೋದಿ ಸರ್ಕಾರವು ಭಾರತದ ಆರ್ಥಿಕ ಸದೃಢತೆಯನ್ನು ರಕ್ಷಿಸಲು ಮತ್ತು ಅರಾಜಕತೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಪ್ರಾಥಮಿಕವಾಗಿ, ಆರ್ಥಿಕ ವೈವಿಧ್ಯೀಕರಣಕ್ಕೆ ಒತ್ತು ಕೊಡಬೇಕಾದ ತುರ್ತು ಅಗತ್ಯವಿದೆ. ಕೃಷಿ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳನ್ನು ಬಲಪಡಿಸಬೇಕು. ಬಾಹ್ಯ ಸಾಲಗಳನ್ನು ನಿಯಂತ್ರಿಸಿ ಮತ್ತು ದೇಶೀಯ ಬಂಡವಾಳವನ್ನು ಹೆಚ್ಚಿಸಿಕೊಳ್ಳಬೇಕಿದೆ. ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಮೇಲಿನ ಹೂಡಿಕೆಯನ್ನು ಹೆಚ್ಚಿಸಬೇಕು. ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಒದಗಿಸಬೇಕು.

ಚುನಾವಣಾ ಸುಧಾರಣೆಗಳು ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಬೇಕು. ನ್ಯಾಯಾಂಗದ ಮೇಲಿನ ರಾಜಕೀಯ ಪ್ರಭಾವವನ್ನು ಕಿತ್ತುಹಾಕಿ, ನ್ಯಾಯಾಂಗವನ್ನು ಸ್ವತಂತ್ರಗೊಳಿಸಬೇಕು. ಆರ್ಥಿಕ ನೀತಿಗಳಲ್ಲಿ ದೀರ್ಘಕಾಲೀನ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು.

ಈ ಎಲ್ಲ ಕ್ರಮಗಳು ಭಾರತವು ನೆರೆಯ ರಾಷ್ಟ್ರಗಳ ಹಾದಿಯಿಂದ ಹೊರಬರಲು ಸಾಧ್ಯವಾಗಿಸುತ್ತವೆ. ಇಲ್ಲವಾದಲ್ಲಿ, ಮೋದಿ ಸರ್ಕಾರವು ತನ್ನ ಸರ್ವಾಧಿಕಾರಿ, ಕಾರ್ಪೊರೇಟ್‌ ಪರವಾದ ಧೋರಣೆಯನ್ನು ಮುಂದುವರೆಸಿದರೆ, ಭಾರತವು ಯುವಜನರ ಆಕ್ರೋಶಕ್ಕೆ ತುತ್ತಾಗುವ ಅಪಾಯವಿದೆ. ಅದಕ್ಕೂ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X