ನೇಪಾಳದ ಭೀಕರ ಪರಿಸ್ಥಿತಿಗೆ ಕಾರಣಗಳೇನು? ಕಳೆದ 17 ವರ್ಷಗಳಲ್ಲಿ ಆಗಿದ್ದೇನು?

Date:

Advertisements
ಆಳುವವರು ಜನರ ಧ್ವನಿಯನ್ನು ಸಂಪೂರ್ಣವಾಗಿ ದಮನ ಮಾಡಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದಕ್ಕೆ ನೇಪಾಳ ಒಂದು ಜೀವಂತ ಉದಾಹರಣೆಯಾಗಿದೆ. ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಸ್ವಜನಪಕ್ಷಪಾತದಂತಹ ನಿಜವಾದ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಭಾವನಾತ್ಮಕ ವಿಚಾರಗಳ ಮೇಲೆ ಅಧಿಕಾರ ನಡೆಸಬಹುದು ಎಂದು ಭಾವಿಸಿರುವ ಎಲ್ಲ ಸರ್ಕಾರಗಳಿಗೆ ಇದು ಪಾಠವಾಗಿದೆ.

ಈ ಪೀಳಿಗೆಯನ್ನು ಸಾಮಾನ್ಯವಾಗಿ ಅಸಮರ್ಥರು, ಏನನ್ನೂ ಸಾಧಿಸಲಾರದವರು ಎಂದು ಹೇಳಲಾಗುತ್ತಿದೆ. ಅದೇ ‘ಜನರೇಷನ್ ಝಡ್‌’ (ಜೆನ್‌ ಝಡ್‌). ಈಗ ಇದೇ ಪೀಳಿಗೆ ನೇಪಾಳದಲ್ಲಿ ಸರ್ಕಾರವನ್ನು ಉರುಳಿಸಿದೆ. ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡುವಂತೆ ಮಾಡಿದೆ. ನೇಪಾಳದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಯಲ್ಲಿನ ಬದಲಾವಣೆ ಮತ್ತು ಸುಧಾರಣೆಗಾಗಿ ಒತ್ತಾಯಿಸಿದೆ.

ಸೆಪ್ಟೆಂಬರ್‌ 8ರಂದು ಶಾಂತಿಯುತವಾಗಿ ಆರಂಭವಾದ ‘ಜೆನ್‌ ಝಡ್’ ಪ್ರತಿಭಟನೆಯು, ಪೊಲೀಸರ ದಬ್ಬಾಳಿಕೆಯಿಂದಾಗಿ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನೆಯು ತೀವ್ರಗೊಂಡಿತು. ಪ್ರಧಾನಮಂತ್ರಿಯ ನಿವಾಸ, ಸಂಸತ್ತಿನ ಆವರಣಕ್ಕೆ ಬೆಂಕಿ ಹಚ್ಚಲಾಯಿತು. ನೇಪಾಳದ ಹಣಕಾಸು ಸಚಿವರನ್ನು ಪ್ರತಿಭಟನಾಕಾರರು ತೀವ್ರವಾಗಿ ಥಳಿಸಿದರು. ಇದೆಲ್ಲದರ ನಡುವೆ, ಸುಮಾರು 19 ಯುವಕರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ, ಪ್ರಧಾನಿ ಒಲಿ ಅವರ ಪತ್ನಿಯೂ ಮೃತಪಟ್ಟಿದ್ದಾರೆ.

ಯುವಜನರ ಈ ಕೋಪಕ್ಕೆ ಕಾರಣವೇನು? ಇದು ಸಾಮಾಜಿಕ ಮಾಧ್ಯಮ ನಿಷೇಧದ ಕಾರಣಕ್ಕಾಗಿ ಘಟಿಸಿದ್ದೇ? ಈ ಪ್ರತಿಭಟನೆಗಳಿಗೆ ಹಲವಾರು ಕಾರಣಗಳಿವೆ. ಸೆಪ್ಟೆಂಬರ್‌ 8ರಂದು, ಈ ಪ್ರತಿಭಟನೆಯನ್ನು ‘ಹಮೀ ನೇಪಾಳ’ ಎಂಬ ಎನ್‌ಜಿಒ ಆಯೋಜಿಸಿತ್ತು. ಕಠ್ಮಂಡುವಿನ ಮೈತಿಘರ್ ಮಂಡಲ ಸ್ಮಾರಕದ ಬಳಿ ನೆರೆದ ಯುವಜನರು ಸಂಸತ್ತಿನ ಕಡೆಗೆ ಅಹಿಂಸಾತ್ಮಕ ಮತ್ತು ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ, ಅವರನ್ನು ತಡೆಯಲು ಸರ್ಕಾರವು ಪೊಲೀಸರನ್ನು ಮುಂದೆಬಿಟ್ಟಿತು. ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲ ಫಿರಂಗಿಗಳು, ಟಿಯರ್ ಗ್ಯಾಸ್‌ ಹಾಗೂ ರಬ್ಬರ್ ಗುಂಡುಗಳಿಂದ ದಾಳಿ ನಡೆಸಿದರು. ಇದು ಸಂಘರ್ಷವನ್ನು ಹುಟ್ಟುಹಾಕಿತು. ಕೆಲವು ಪ್ರತಿಭಟನಾಕಾರರು ಸಂಸತ್ತಿನ ಆವರಣದೊಳಗೆ ನುಗ್ಗಿದರು.

ನಂತರ, ಪೊಲೀಸರು ಏನು ಮಾಡಿದರು ಎಂಬುದನ್ನು ಇಡೀ ಜಗತ್ತು ಆಘಾತದಿಂದ ನೋಡಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಜೀವಂತ ಗುಂಡುಗಳನ್ನು ಹಾರಿಸಿದರು. ಪರಿಣಾಮ, 19 ಮಂದಿ ಯುವಕರು ಸಾವನ್ನಪ್ಪಿದರು. 400ಕ್ಕೂ ಹೆಚ್ಚು ಜನರು ಗಾಯಗೊಂಡರು. ಪೊಲೀಸರ ದುಷ್ಕೃತ್ಯದಲ್ಲಿ 12 ವರ್ಷದ ಬಾಲಕನೂ ಜೀವ ಕಳೆದುಕೊಂಡನು.

ಆಳುವವರ ಇಂತಹ ಕ್ರೌರ್ಯವನ್ನು ನೋಡಿ ಯಾರು ಸುಮ್ಮನಿರುತ್ತಾರೆ? ಪೊಲೀಸ್‌ ಹಿಂಸಾಚಾರದ ಬಗ್ಗೆ ತಿಳಿದ ನೇಪಾಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದರು. ಕಠ್ಮಂಡುವಿನ ರಸ್ತೆಗಳು ಪ್ರತಿಭಟನಾಕಾರರಿಂದ ತುಂಬಿಹೋದರು. ಸರ್ಕಾರವು ಮಧ್ಯಾಹ್ನ 3:30ರ ವೇಳೆಗೆ ಕರ್ಫ್ಯೂ ಜಾರಿಗೊಳಿಸಲು ಪ್ರಯತ್ನಿಸಿತು. ಆದರೆ, ಪ್ರತಿಭಟನಾಕಾರರು ಜಗ್ಗಲಿಲ್ಲ. ಪ್ರತಿಭಟನೆಗಳು ಮತ್ತಷ್ಟು ವಿಸ್ತರಿಸಿದವು. ಪೊಖರಾ, ಬುಟ್ವಾಲ್, ಭರತ್‌ಪುರ್ ಹಾಗೂ ದಮಕ್ ನಗರಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದವು.

ಈ ಪ್ರತಿಭಟನೆಗಳಿಗೆ ‘ನೇಪಾಳದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ್ದು ಕಾರಣ’ವೆಂದು ಮಾಧ್ಯಮಗಳು ಹೆಚ್ಚಾಗಿ ಹೇಳುತ್ತಿವೆ. ಆದರೆ, ಇದೇ ಕಾರಣವಲ್ಲ. ಇದೂ ಒಂದು ಕಾರಣವಿರಬಹುದು ಅಷ್ಟೇ. ಬದಲಾಗಿ, ಭ್ರಷ್ಟಾಚಾರ, ನಿರುದ್ಯೋಗ, ಆಳುವವರ ಸ್ವಜನಪಕ್ಷಪಾತ, ಸರ್ಕಾರದ ದುರಾಡಳಿತದಂತಹ ಗಂಭೀರ ಕಾರಣಗಳಿವೆ.

ಆದರೆ, ಪ್ರತಿಭಟನೆಗೆ ಕಾರಣವೆಂದು ಚರ್ಚೆಯಲ್ಲಿರುವುದು ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧ ಎಂಬ ವಿಚಾರ ಮಾತ್ರ. ಇದರ ಬಗ್ಗೆಯೇ ಮೊದಲು ನೋಡುವ, ಸಾಮಾಜಿಕ ಮಾಧ್ಯಮ ಕಂಪನಿಗಳು ನೇಪಾಳದ ಸಂಹವನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಸ್ಥಳೀಯವಾಗಿ ಕಚೇರಿಯನ್ನು ತೆಗೆಯುವುದು ಕಡ್ಡಾಯವೆಂದು 2023ರ ನವೆಂಬರ್‌ನಲ್ಲಿ ಕಾನೂನು ತರಲಾಯಿತು. ದ್ವೇಷ ಭಾಷಣ, ಸುಳ್ಳು ಸುದ್ದಿಗಳು, ವಂಚನೆ ಹಾಗೂ ಇತರ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಈ ನಿಯಮ ಸಹಾಯವಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿತು.

ಆದರೆ, ಐದು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹೊರತುಪಡಿಸಿ, ಯಾವುದೇ ಪ್ರಮುಖ ‘ಪ್ಲಾಟ್‌ಫಾರ್ಮ್’ಗಳು ನೋಂದಾಯಿಸಿಕೊಳ್ಳಲಿಲ್ಲ. ನೋಂದಾಯಿಸಿಕೊಂಡ ಕಂಪನಿಗಳಲ್ಲಿ ಕೇವಲ ಒಂದೇ-ಒಂದು ಬೃಹತ್ ಕಂಪನಿ ಇತ್ತು– ಅದು ಟಿಕ್‌ಟಾಕ್. ಇದೇ ಸಮಯದಲ್ಲಿ, ನೋಂದಾಯಿಸಿಕೊಳ್ಳದ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಸರ್ಕಾರಕ್ಕೆ ನೇಪಾಳದ ಸುಪ್ರೀಂ ಕೋರ್ಟ್ ಅನುಮತಿ ನೀಡಿತು.

ನಂತರ ಈ ವರ್ಷ, ಆಗಸ್ಟ್ 28 ರಂದು, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆಯೊಂದನ್ನು ಹೊರಡಿಸಿತು. ‘ಸೆಪ್ಟೆಂಬರ್ 3ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಅವುಗಳನ್ನು ನಿಷೇಧಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿತು. ಆದಾಗ್ಯೂ, ಸರ್ಕಾರ ಸೂಚನೆಯನ್ನು ಹೆಚ್ಚಿನ ಸಾಮಾಜಿಕ ಮಾಧ್ಯಮ ಕಂಪನಿಗಳು ನಿರ್ಲಕ್ಷಿಸಿದವು. ಆದ್ದರಿಂದ, ದೇಶದಲ್ಲಿ 26 ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್‌ಗಳನ್ನು ಸರ್ಕಾರ ನಿಷೇಧಿಸಿತು.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್, ಯೂಟ್ಯೂಬ್, ಸ್ನ್ಯಾಪ್‌ಚಾಟ್, ಟ್ವಿಟ್ಟರ್ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಜಾಗತಿಕ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್‌ಗಳು ನಿಷೇಧಗೊಂಡವು. ಈ ಕ್ರಮವು ಸಾಮಾಜಿಕ ವೇದಿಕೆಗಳ ಮೇಲೆ ಸರ್ಕಾರವು ನಿಯಂತ್ರಣ ಸಾಧಿಸಲು ಮತ್ತು ಜನರ ಭಿನ್ನಾಭಿಪ್ರಾಯಗಳನ್ನು ದಮನಿಸಲು ಮಾಡುತ್ತಿರುವ ಕುತಂತ್ರ. ನಮ್ಮನ್ನು ನಿಯಂತ್ರಿಸಲು ಸರ್ಕಾರವು ಬಯಸುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನಾಕಾರರ ಈ ಆರೋಪ ಸತ್ಯವಾದದ್ದು. ಯಾಕೆಂದರೆ, ಇತ್ತೀಚಿನ ತಿಂಗಳುಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿದ್ದವು. ಅವುಗಳು ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬುದನ್ನು ಬಯಲಿಗೆಳೆಯುತ್ತಿದ್ದವು. ಸರ್ಕಾರದ ಸ್ವಜನಪಕ್ಷಪಾತದಿಂದಾಗಿ ಸಚಿವರ ಮಕ್ಕಳು ಮತ್ತು ಅವರ ಸಂಬಂಧಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ನೆಟ್ಟಿಗರು ಬಹಿರಂಗಪಡಿಸಿದ್ದರು.

ನಿಜವಾಗಿಯೂ, ನೇಪಾಳದ ಯುವಜನರು ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಆರ್ಥಿಕ ಅಸಮಾನತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತತ್ತರಿಸಿಹೋಗಿದ್ದಾರೆ. 2024 ರಲ್ಲಿ, ನೇಪಾಳದಲ್ಲಿ ಯುವಜನರ ನಿರುದ್ಯೋಗ ದರವು 20.82% ಇತ್ತು. ಈ ವರ್ಷ ಇನ್ನೂ ಹೆಚ್ಚಾಗಿದೆ. ಪ್ರತಿ ಐದು ಯುವಜನರಲ್ಲಿ ಒಬ್ಬರು ನಿರುದ್ಯೋಗಿಯಾಗಿದ್ದಾರೆ.

ನೇಪಾಳದಲ್ಲಿ ತೀರಾ ಕಡಿಮೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಜನರು ಉದ್ಯೋಗ ಹುಡುಕಲು ಇತರ ದೇಶಗಳಿಗೆ ವಲಸೆ ಹೋಗಬೇಕಾಗಿದೆ. ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ. ಮಾತ್ರವಲ್ಲ, ಸಂಕಷ್ಟಗಳಿಂದ ಹೊರಬರಲು ಸಾವಿರಾರು ಜನರು ಕೇವಲ ಹಣ ಗಳಿಸಲು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯುದ್ಧಮಾಡಲು ಹೋಗಿದ್ದಾರೆ. 2024ರ ಫೆಬ್ರವರಿಯ ವೇಳೆಗೆ, 15,000ಕ್ಕೂ ಹೆಚ್ಚು ನೇಪಾಳದ ಜನರು ರಷ್ಯಾ ಸೇನೆಗೆ ಸೇರಿದ್ದರು. ಅವರಿಗೆ ಕೇವಲ ಕೆಲವು ವಾರಗಳ ತರಬೇತಿ ನೀಡಿ, ಅವರನ್ನು ಯುದ್ಧಕ್ಕೆ ಕಳಿಸಲಾಗಿತ್ತು. ಪರಿಣಾಮವಾಗಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹಲವಾರು ನೇಪಾಳಿಗರು ತಮ್ಮ ಜೀವ ತೆತ್ತಿದ್ದಾರೆ.

ಮರಣದ ಭೀತಿಯಿದ್ದರೂ, ಅವರು ರಷ್ಯಾಕ್ಕೆ ಹೋಗಿದ್ದರು. ಯಾಕೆಂದರೆ, ನೇಪಾಳದಲ್ಲಿ ಅವರಿಗೆ ಉದ್ಯೋಗಾವಕಾಶಗಳಿಲ್ಲ. ರಷ್ಯಾ – ತನ್ನ ಸೇನೆಗೆ ಸೇರುವವರಿಗೆ ಸಾಕಷ್ಟು ಸೌಲತ್ತುಗಳನ್ನು ನೀಡುವುದಾಗಿ ಆಕರ್ಷಿಸುತ್ತದೆ. ಕೆಲವು ಯೋಧರು ಹೇಳುವಂತೆ, ಬೋನಸ್ ಮತ್ತು ವೇತನ ಸೇರಿದಂತೆ ಅವರು ತಿಂಗಳಿಗೆ ಸುಮಾರು 4,000 ಡಾಲರ್ ಅಂದರೆ, ನೇಪಾಳಿ ರೂಪಾಯಿಯಲ್ಲಿ 5,00,000 ರೂ. ಗಳಿಸಬಹುದು.

ನೇಪಾಳಿಗರು ತಮ್ಮ ಜೀವನ ಕಟ್ಟಿಕೊಳ್ಳಲು ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ರಷ್ಯಾದ ಸೇನೆ ಸೇರುತ್ತಿರುವ ಇಂತಹ ಸಂದರ್ಭಗಳಲ್ಲಿ, ನೇಪಾಳದ ರಾಜಕಾರಣಿಗಳು ಸ್ವಲ್ಪ ಸಹಾನುಭೂತಿಯಿಂದ ವರ್ತಿಸಿದ್ದರೆ, ಬಹುಶಃ ಪರಿಸ್ಥಿತಿ ಇಷ್ಟು ಕೆಟ್ಟದಾಗುತ್ತಿರಲಿಲ್ಲ.

ಆದರೆ, ಆಳುವವರು ಹದ್ದುಮೀರಿ ಹೋಗಿದ್ದರು. ನೇಪಾಳಿ ರಾಜಕಾರಣಿಗಳ ಮಕ್ಕಳು ತಮ್ಮ ಐಷಾರಾಮಿ ಜೀವನಶೈಲಿಯನ್ನು ತೋರಿಸಲು ಪ್ರಾರಂಭಿಸಿದರು. ವಿದೇಶಿ ಪ್ರವಾಸ ಮತ್ತು ದುಬಾರಿ ವಸ್ತುಗಳ ಖರೀದಿಯಲ್ಲಿ ತೊಡಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ನೇಪಾಳದ ಪರಿಸ್ಥಿತಿ ಮತ್ತು ರಾಜಕಾರಣಿಗಳ ಮಕ್ಕಳ ಭೋಗದ ಜೀವನವು ವಿರೋಧಾಭಾಸವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿತು. ನೇಪಾಳಿ ಜನರು ಈ ಅಸಮಾನತೆಯ ಬಗ್ಗೆ ಮಾತನಾಡಲಾರಂಭಿಸಿದರು. #NepoKids ಟ್ರೆಂಡ್ ಆಗಲು ಪ್ರಾರಂಭಿಸಿತು. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದಾಗ, ನೇಪಾಳದ ನೆಟ್ಟಿಗರು ಟಿಕ್‌ಟಾಕ್‌ನಲ್ಲಿ ತಮ್ಮ ಅಭಿಯಾನವನ್ನು ಮುಂದುವರೆಸಿದರು.

ಮುಖ್ಯವಾಗಿ, ನೇಪಾಳದ ಜನಸಾಮಾನ್ಯರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ರಾಜಕಾರಣಿಗಳ ಮಕ್ಕಳ ಐಷಾರಾಮಿ ಜೀವನಶೈಲಿಗೆ ಹೋಲಿಕೆ ಮಾಡುವ ಹಲವಾರು ವಿಡಿಯೋಗಳು ವೈರಲ್ ಆದವು. #NepoKids ಮತ್ತು #NepoBaby ಟಿಕ್‌ಟಾಕ್‌ನಲ್ಲೂ ಟ್ರೆಂಡ್ ಆಗಲು ಪ್ರಾರಂಭಿಸಿತು ‘ರಾಜಕಾರಣಿಗಳ ಮಕ್ಕಳು ವಿದೇಶದಿಂದ ದುಬಾರಿ ವಸ್ತುಗಳು ತುಂಬಿದ ಬ್ಯಾಗ್‌ಗಳನ್ನು ತರುತ್ತಾರೆ ಮತ್ತು ಸಾಮಾನ್ಯ ಜನರ ಮಕ್ಕಳು ಶವಪೆಟ್ಟಿಗೆಯಲ್ಲಿ ಬರುತ್ತಾರೆ’ (ರಷ್ಯಾ-ಉಕ್ರೇನ್ ಯುದ್ಧದ ಹತ್ಯೆಯಾದ ನೇಪಾಳಿಗರು) ಎಂದು ಘೋಷಣೆಗಳು ನೇಪಾಳದಾದ್ಯಂತ ಮೊಳಗಿದವು. ಸೆಪ್ಟೆಂಬರ್ 8ರ ಪ್ರತಿಭಟನೆಯಲ್ಲೂ ಇದು ಕೇಳಿಬಂದಿತು.

ಇದರ ಹೊರತಾಗಿ, ನೇಪಾಳದಲ್ಲಿ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆಯಾಗಿದೆ. ನೇಪಾಳದ ಯುವಜನರು ಕೆಲವು 70 ವರ್ಷದ ರಾಜಕಾರಣಿಗಳ ಆಡಳಿತದಿಂದ ಕಂಗಾಲಾಗಿದ್ದಾರೆ. ಈ ರಾಜಕಾರಣಿಗಳು ಅಧಿಕಾರದ ಸರಪಳಿಯಲ್ಲಿಯೇ ಇರುತ್ತಾರೆ. ಈ ಭ್ರಷ್ಟ ರಾಜಕಾರಣದ ವಿರುದ್ಧ ಇದೇ ವರ್ಷದ ಮಾರ್ಚ್‌ನಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು.

2008ರಲ್ಲಿ ರಾಜತಂತ್ರವನ್ನು ಕೊನೆಗಾಣಿಸಿ ಪ್ರಜಾತಂತ್ರವನ್ನು ಅಳವಡಿಸಿಕೊಂಡು ಗಣರಾಜ್ಯವಾಗುವ ನೇಪಾಳದ ಆಶಯವು ಕಳೆದ 12 ವರ್ಷಗಳಲ್ಲಿ ವಿಫಲವಾಗಿದೆ ಎಂದು ಅಲ್ಲಿನ ಜನರು ಹೇಳುತ್ತಾರೆ. ಕೆಲವರು ಮತ್ತೆ ರಾಜಪ್ರಭುತ್ವವೇ ಮರಳಿ ಬರಬೇಕೆಂದು ವಾದಿಸುವವರೂ ಇದ್ದಾರೆ. ರಾಜಕಾರಣಿಗಳ ಕೊಳಕು ರಾಜಕೀಯವನ್ನು ತೊಡೆದು ಹಾಕಲು ಗಣತಂತ್ರವನ್ನು ಹಿಂತೆಗೆದುಕೊಂಡು ಮತ್ತೆ ರಾಜಪ್ರಭುತ್ವವನ್ನು ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ.

ಅಂದಹಾಗೆ, 2008ರವರೆಗೆ ನೇಪಾಳವು ರಾಜಪ್ರಭುತ್ವದ ಆಳ್ವಿಕೆಯಲ್ಲಿತ್ತು. ರಾಜ ಜ್ಞಾನೇಂದ್ರ ನೇಪಾಳದ ಕೊನೆಯ ರಾಜನಾಗಿದ್ದ. ಆತನನ್ನು ಕೆಳಗಿಳಿಸಲು ಎರಡು ಪ್ರಮುಖ ಚಳವಳಿಗಳು ನಡೆದವು. 2006ರ ಗಣತಂತ್ರ ಕ್ರಾಂತಿ ಮತ್ತು ವರ್ಷಗಟ್ಟಲೆ ನಡೆದ ಮಾವೋವಾದಿ ದಂಗೆ. ಪರಿಣಾಮವಾಗಿ, 2008ರ ಮೇ 28ರಂದು ರಾಜಪ್ರಭುತ್ವವನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು. ನೇಪಾಳವನ್ನು ಫೆಡರಲ್, ಗಣತಾಂತ್ರಿಕ, ಗಣರಾಜ್ಯವೆಂದು ಘೋಷಿಸಲಾಯಿತು.

ಪ್ರಜೆಗಳಿಂದ ಆಯ್ಕೆಯಾಗುವ ಸರ್ಕಾರವು ನೇಪಾಳವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಹೊಸ ನೇಪಾಳ ಬೆಳೆಯುತ್ತದೆ ಎಂಬ ಆಶಯದಲ್ಲಿದ್ದರು. ಆದರೆ, 2008ರಿಂದ ಈವರೆಗಿನ 17 ವರ್ಷಗಳಲ್ಲಿ 14 ಬಾರಿ ಸರ್ಕಾರಗಳು ಬದಲಾಗಿವೆ. ಆದರೆ, ನೇಪಾಳ ಸ್ಥಿತಿ ಮಾತ್ರ ಬದಲಾಗಿಲ್ಲ. ಇನ್ನೂ ಕಂಗೆಟ್ಟಿದೆ.

ಈ 17 ವರ್ಷಗಳಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಕೆ.ಪಿ. ಶರ್ಮಾ ಒಲಿ, ಪುಷ್ಪ ಕಮಲ್ ದಹಾಲ್ ಹಾಗೂ ಶೇರ್ ಬಹದ್ದೂರ್ ದೇವುಬಾ – ಈ ಮೂವರೇ ಪುನಾರಾವರ್ತಿತವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಈ ಮೂವರು ಮೈತ್ರಿ ಸರ್ಕಾರವನ್ನು ರಚಿಸುತ್ತಿದ್ದರು. ಮತ್ತೆ ಕೆಡವುತ್ತಿದ್ದರು. ಮತ್ತೆ ಹೊಸ ಸರ್ಕಾರ ರಚಿಸುತ್ತಿದ್ದರು.

ನೇಪಾಳದಲ್ಲಿ ಎರಡು ಪ್ರಬಲ ರಾಜಕೀಯ ಶಕ್ತಿಗಳಿವೆ. ನೇಪಾಳ ಕಾಂಗ್ರೆಸ್ ಮತ್ತು ನೇಪಾಳ ಕಮ್ಯುನಿಸ್ಟ್‌ಗಳು. (ನೇಪಾಳ ಕಮ್ಯುನಿಸ್ಟ್‌ಗಳಲ್ಲಿ ಎರಡು ಪ್ರಮುಖ ಪಕ್ಷಗಳಿವೆ. 1. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- ಯುನೈಟೆಡ್ ಮಾರ್ಕ್ಸಿಸ್ಟ್ ಮತ್ತು ಲೆನಿನಿಸ್ಟ್. 2. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- ಮಾವೋಯಿಸ್ಟ್ ಸೆಂಟರ್.)

ಈ ಮೂರು ಪ್ರಮುಖ ಪಕ್ಷಗಳು ಚಿಕ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಅಧಿಕಾರಕ್ಕೆ ಬಂದು ಹೋಗುತ್ತವೆ. ಆದರೆ, ಮೂರೂ ಪಕ್ಷಗಳ ಮುಖ್ಯಸ್ಥರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ.

ನೇಪಾಳ ಕಾಂಗ್ರೆಸ್‌ನ ಮುಖ್ಯಸ್ಥ, ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ವಿಮಾನ ಖರೀದಿಗಾಗಿ ಕಾನೂನುಬಾಹಿರವಾಗಿ ಲಂಚ ಪಡೆದ ಆರೋಪವಿದೆ. ಅವರ ಪತ್ನಿ ಅರ್ಜು ರಾಣಾ ದೇವುಬಾ ಅವರು ನೇಪಾಳದ ವಿದೇಶಾಂಗ ಸಚಿವೆಯಾಗಿದ್ದರು. ಅವರು ತಾನು ನೇಪಾಳದ ಭೂಟಾನ ಪ್ರಾಂತ್ಯದ ನಾಗರಿಕಳೆಂದು ತೋರಿಸಲು ನಕಲಿ ದಾಖಲೆಗಳನ್ನು ಬಳಸಿದ್ದರು ಎಂಬ ಆರೋಪವಿದೆ.

ಇನ್ನು, CPN-MCಯ ಮುಖ್ಯಸ್ಥ, ಮೂರು ಬಾರಿ ಪ್ರಧಾನಮಂತ್ರಿಯಾಗಿದ್ದ ಪುಷ್ಪ ಕಮಲ್ ದಹಾಲ್ ಅವರು ಮಾವೋಯಿಸ್ಟ್ ಗೆರಿಲ್ಲಾ ಯೋಧರಿಗೆ ಮೀಸಲಾದ ಹಣವನ್ನು ದುರುಪಯೋಗ ಮಾಡಿಕೊಂಡು ಶತಕೋಟಿ ರೂ.ಗಳನ್ನು ಕದ್ದಿದ್ದಾರೆ ಎಂಬ ಆರೋಪಗಳಿವೆ.

ಅಂತೆಯೇ, CPN-UMLನ ಮುಖ್ಯಸ್ಥ, ಸೆಪ್ಟೆಂಬರ್ 9ರಂದು ರಾಜೀನಾಮೆ ನೀಡಿದ ನಿರ್ಗಮಿತ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಚಹಾ ತೋಟವನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸಲು ನೇಪಾಳದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದ್ದಾರೆ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿಯಾಗಿ, ಇತರ ಮೂರು ಮಾಜಿ ಪ್ರಧಾನಮಂತ್ರಿಗಳ ಮೇಲೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ ಆರೋಪವಿದೆ.

ಆದರೆ, ಮುಖ್ಯ ಸಮಸ್ಯೆಯೆಂದರೆ, 2006ರಿಂದ, ಯಾವುದೇ ರಾಜಕೀಯ ನಿರ್ಧಾರಕ್ಕಾಗಿ ರಾಜಕಾರಣಿಯ ವಿರುದ್ಧ ಯಾವುದೇ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬ ಧೋರಣೆ ನೇಪಾಳ ರಾಜಕೀಯದಲ್ಲಿದೆ. ಇದು ಭ್ರಷ್ಟ ರಾಜಕಾರಣಿಗಳಿಗೆ ರಕ್ಷಣೆ ನೀಡುತ್ತದೆ. ಮತ್ತಷ್ಟು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ.

ಈ ಲೇಖನ ಓದಿದ್ದೀರಾ?: ಕೋಮು ಪ್ರಯೋಗಶಾಲೆಯಾಗಿ ಮಂಡ್ಯ; ಸಂಘಪರಿವಾರದ ಹುನ್ನಾರಕ್ಕೆ ಜೆಡಿಎಸ್ ಬಲಿ?

ಈ ಭ್ರಷ್ಟಾಚಾರ, ರಾಜಕೀಯ ದುರುಪಯೋಗ, ಅಸಮಾನತೆ, ನಿರುದ್ಯೋಗ ಹಾಗೂ ಸ್ವಜನಪಕ್ಷಪಾತದ ಮಧ್ಯೆ, ಸರ್ಕಾರವು ಸಾಮಾಜಿಕ ಮಾಧ್ಯಮದ ಮೇಲೆ ನಿಷೇಧ ಹೇರಿತು. ಇದು ಜನರ ಕೋಪ ಮತ್ತು ನಿರಾಸೆಯನ್ನು ತಾರಕಕ್ಕೇರುವಂತೆ ಮಾಡಿತು. ಜನರ ಸಿಟ್ಟು ಸಂಪೂರ್ಣವಾಗಿ ಸ್ಫೋಟಗೊಂಡಿತು.

ನೇಪಾಳದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರವಾಸೋದ್ಯಮವು ಜಾಹೀರಾತು ಮತ್ತು ಬುಕಿಂಗ್‌ಗಾಗಿ ಸಾಮಾಜಿಕ ಮಾಧ್ಯಮಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಈ ನಿಷೇಧವು ಪ್ರವಾಸೋದ್ಯಮ ಉದ್ಯಮವನ್ನು ಸಂಪೂರ್ಣವಾಗಿ ಅಲುಗಾಡಿಸಿದೆ.

ಇದರ ಹೊರತಾಗಿ, ವಿದೇಶದಲ್ಲಿ ಕೆಲಸ ಮಾಡುವ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಆನ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವ ಲಕ್ಷಾಂತರ ನೇಪಾಳಿ ಕುಟುಂಬಗಳ ಮೇಲೂ ಪರಿಣಾಮ ಬೀರಿದೆ. ಒಂದು ಅಂದಾಜಿನ ಪ್ರಕಾರ, 70 ಲಕ್ಷಕ್ಕಿಂತಲೂ ಹೆಚ್ಚು ನೇಪಾಳಿ ನಾಗರಿಕರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ವಿದೇಶದಲ್ಲಿ ನೆಲೆಸಿದ್ದಾರೆ.

ಇದೆಲ್ಲವೂ, ಪ್ರತಿಭಟನೆಗೆ ಮತ್ತಷ್ಟು ಪ್ರೇರಣೆ ನೀಡಿತು. ಆದಾಗ್ಯೂ, ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ನೇಪಾಳ ಸರ್ಕಾರವು ಸರ್ವಾಧಿಕಾರಿಯಾಗಿ ಪ್ರತಿಕ್ರಿಯಿಸಿತು. ಪ್ರತಿಭಟನೆಗೆ ಅವಕಾಶ ನೀಡದೆ, ಪ್ರತಿಭಟನಾಕಾರರ ಮೇಲೆ ಪೊಲೀಸ್ ದಾಳಿ ನಡೆಸಿತು. ನೇಪಾಳದಲ್ಲಿ ತಮ್ಮ ವಿರುದ್ಧದ ಟೀಕೆಗಳನ್ನು ದಮನ ಮಾಡಲು ಸರ್ಕಾರಗಳು ಇಂತಹ ದೌರ್ಜನ್ಯಗಳನ್ನು ಆಗಾಗ್ಗೆ ನಡೆಸಿವೆ. ಆದರೆ, ಈ ಬಾರಿ, ಸರ್ಕಾರದ ದಮನಕ್ಕೆ ಜನರು ಬಗ್ಗಲಿಲ್ಲ.

ಅಂತಿಮವಾಗಿ, ಸರ್ಕಾರವು ಪ್ರತಿಭಟನಾಕಾರರಿಗೆ ಶರಣಾಯಿತು. ಮೊದಲಿಗೆ, ಗೃಹ ಸಚಿವರು ರಾಜೀನಾಮೆ ನೀಡಿದರು. ಈ ಬೆನ್ನಲ್ಲೇ, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಆದರೂ, ಪ್ರತಿಭಟನೆಗಳು ಮುಂದುವರೆದವು. ಪೊಲೀಸ್‌ ದೌರ್ಜನ್ಯದಿಂದ ಆಕ್ರೋಶಗೊಂಡಿದ್ದ ಜನರು ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ನಿವಾಸಗಳಿಗೆ ಬೆಂಕಿ ಹಚ್ಚಿದರು. ವಿರೋಧ ಪಕ್ಷದ ನಾಯಕರ ನಿವಾಸಕ್ಕೂ ಬೆಂಕಿ ಹಚ್ಚಲಾಯಿತು.

ಸೇನೆಯು ಹೆಲಿಕಾಪ್ಟರ್‌ಗಳನ್ನು ಬಳಸಿ, ಸಚಿವರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಿತು. ಕೊನೆಗೆ, ಸೆಪ್ಟೆಂಬರ್ 9 ರಂದು ಮಧ್ಯಾಹ್ನ 2 ಗಂಟೆಗೆ, ಪ್ರಧಾನಿ ಕೆ.ಪಿ. ಶರ್ಮಾ ಒಲಿ ಕೂಡ ರಾಜೀನಾಮೆ ನೀಡಿದರು.

ಕಳೆದ ಮೂರು ದಿನಗಳಿಂದ ಉದ್ವಿಗ್ನಗೊಂಡಿದ್ದ ನೇಪಾಳ ಇಂದು (ಸೆ.11) ಕೊಂಚ ತಣ್ಣಗಾಗಿದೆ. ಪೊಲೀಸರು ಕರ್ಫ್ಯೂವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಜಿಸುತ್ತಿದೆ. ಪ್ರತಿಭಟನಾಕಾರರು ನೇಪಾಳ ಸೇನಾ ಮುಖ್ಯಸ್ಥರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸಿದ್ದಾರೆ. ಸದ್ಯ, ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

ಇಲ್ಲಿ, ಒಂದು ವಿಚಾರ ಸ್ಪಷ್ಟ: ಆಳುವವರು ಜನರ ಧ್ವನಿಯನ್ನು ಸಂಪೂರ್ಣವಾಗಿ ದಮನ ಮಾಡಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದಕ್ಕೆ ನೇಪಾಳ ಒಂದು ಜೀವಂತ ಉದಾಹರಣೆಯಾಗಿದೆ. ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಸ್ವಜನಪಕ್ಷಪಾತದಂತಹ ನಿಜವಾದ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಭಾವನಾತ್ಮಕ ವಿಚಾರಗಳ ಮೇಲೆ ಅಧಿಕಾರ ನಡೆಸಬಹುದು ಎಂದು ಭಾವಿಸಿರುವ ಎಲ್ಲ ಸರ್ಕಾರಗಳಿಗೆ ಒಂದು ಪಾಠವಾಗಿದೆ.

ಜನರ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಾರದು. ಅಂತಹ ನಿರ್ಲಕ್ಷವು ನೇಪಾಳದಂತಹ ಭೀಕರ ಕೆಟ್ಟ ಪರಿಸ್ಥಿತಿ-ಪರಿಣಾಮಕ್ಕೆ ಕಾರಣವಾಗುತ್ತದೆ. ಪರಿಸ್ಥಿತಿ ಇಷ್ಟು ಕೆಟ್ಟದಾದರೆ, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಬಹಳ ಕಷ್ಟ.

ಕೆಲವು ಗಣತಂತ್ರ/ಪ್ರಜಾತಂತ್ರ ವಿರೋಧಿ ಗುಂಪುಗಳು ಈ ಪ್ರತಿಭಟನೆಗಳನ್ನು ರಾಜಪ್ರಭುತ್ವವನ್ನು ಮರಳಿ ತರುವ ಬಗ್ಗೆ ಅಭಿಪ್ರಾಯ ಮೂಡಿಸಲು ಬಳಸಿಕೊಳ್ಳುತ್ತಿವೆ. ಆದರೆ, ಅದು ತಪ್ಪು. ಪರಿಹಾರ ರಾಜಪ್ರಭುತ್ವದಲ್ಲಿ ಖಂಡಿತವಾಗಿಯೂ ಇಲ್ಲ. ರಾಜ ಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ನಾಶಗೊಳಿಸುತ್ತದೆ. ಪರಿಹಾರವು ಗಣತಂತ್ರ ವ್ಯವಸ್ಥೆಯಲ್ಲಿಯೇ ಇದೆ. ಅದನ್ನು ಸರಿಯಾದ ಹಾದಿಯಲ್ಲಿ ಕಟ್ಟಿಕೊಳ್ಳಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು. ನೇಪಾಳವು ಶಾಂತಿಯುತ ಮತ್ತು ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳುವಂತಾಗಲಿ.

ಮಾಹಿತಿ ಕೃಪೆ: ದೃವ್ ರಾಠಿ ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ...

Download Eedina App Android / iOS

X