ವಿದ್ಯುತ್ ದರ ಏರಿಕೆಯಾದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬೆಲೆ ಏರಿಕೆಯಾಗಿದ್ದು, ಸಾರ್ವಜನಿಕರ ಮೇಲೆ ಮತ್ತೆ ಹೊರೆ ಬಿದ್ದಂತಾಗಿದೆ. ನಿತ್ಯ ಕುಡಿಯುವ ನೀರಿಗೆ ಒಮ್ಮೆಲೆ ದರ ಹೆಚ್ಚಳವಾದ್ದರಿಂದ ನಾಗರಿಕರು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೆ ಶುದ್ಧ ನೀರಿನ ಘಟಕಗಳ ಮೇಲೆ ಅವಲಂಬಿತರಾಗಿರುವ ನಾಲ್ಕು ಐದು ಜನ ಇರುವ ಕುಟುಂಬಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ.
ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನ, ಕಟ್ಟಡ ಕಾರ್ಮಿಕರು, ಕೂಲಿ ಕೆಲಸ ಮಾಡುವವರು, ನೌಕರರು, ವ್ಯಾಪಾರಿಗಳು, ಹೋಟೆಲ್ನವರಿಗೆ ನೀರಿನ ಬೆಲೆ ಏರಿಕೆ ಮಾಡಿರುವುದರಿಂದ ಹೊರೆಯಾಗಿದೆ. ಈ ಹಿಂದೆ ₹5 ನೀಡಿ 20 ಲೀಟರ್ ನೀರು ಪಡೆಯುತ್ತಿದ್ದ ಜನ ಇದೀಗ ಅದೇ 20 ಲೀ ನೀರಿಗೆ ₹10 ನೀಡಬೇಕಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜನರು ಅಡುಗೆಗೆ ಮತ್ತು ಕುಡಿಯಲು ಶುದ್ಧೀಕರಿಸಿದ ನೀರನ್ನು ಬಳಸುತ್ತಾರೆ. ಇಬ್ಬರು ಇರುವ ಕುಟುಂಬಕ್ಕೆ ಸಾಮಾನ್ಯವಾಗಿ ನಿತ್ಯ 20 ಲೀಟರ್ ನೀರು ಖರ್ಚಾಗುತ್ತದೆ. ತಿಂಗಳಿಗೆ ನೀರಿಗಾಗಿ ಬರೋಬ್ಬರಿ ₹300 ಇಡಬೇಕಾಗುತ್ತದೆ.
ಸದ್ದಿಲ್ಲದೇ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಘಟಕಗಳು ಮಾಹಿತಿ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಹಲವು ಘಟಕಗಳ ಎದುರು ಕುಡಿಯುವ ನೀರಿನ ಬೆಲೆ ಏರಿಕೆ ಮಾಡಿರುವ ಬಗ್ಗೆ ಸಂದೇಶ ನೀಡುವ ಪೋಸ್ಟರ್ ಅಂಟಿಸಲಾಗಿದೆ.
₹5 ನಾಣ್ಯ ಬಳಸಿ ಶುದ್ಧ ನೀರನ್ನು ಪಡೆಯಬಹುದಿತ್ತು. ಇದೀಗ ₹5 ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜುಲೈ 15 ರಿಂದ ನೀರಿನ ದರ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯಿಂದ ಮಧ್ಯಮವರ್ಗದ ಕುಟುಂಬ, ಕೊಳಗೇರಿ ನಿವಾಸಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಮೇಲೆ ತೀವ್ರ ಪರಿಣಾಮ ಬೀರಿದೆ.
ಈ ಬಗ್ಗೆ ರಾಜಾಜಿನಗರ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಾಹಕ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮೊದಲಿಗೆ 20 ಲೀ. ನೀರಿಗೆ ₹5 ಪಡೆಯಲಾಗುತ್ತಿತ್ತು. ಇದೀಗ ವಿದ್ಯುತ್ ದರ ಏರಿಕೆಯಾದ ಕಾರಣ ₹5 ಹೆಚ್ಚಳ ಮಾಡಲಾಗಿದೆ. ಈಗ ₹10ಗೆ 20 ಲೀ ನೀರು ಪಡೆಯಬಹುದು. ನೀರಿನ ಘಟಕದಲ್ಲಿ ವಿದ್ಯುತ್ ಹೆಚ್ಚಾಗಿ ಬಳಕೆಯಾಗುತ್ತದೆ. ಅಲ್ಲದೇ ನಿರ್ವಹಣೆ ಕೆಲಸ ಹೆಚ್ಚಾಗಿದೆ. ಅನಿವಾರ್ಯ ಕಾರಣದಿಂದ ಸಾರ್ವಜನಿಕರ ಗಮನಕ್ಕೆ ತಂದು ದರ ಏರಿಕೆ ಮಾಡಲಾಗಿದೆ” ಎಂದು ತಿಳಿಸಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಪ್ರಕಾಶನಗರದ ನಿವಾಸಿ ಕಮಲಮ್ಮ ಮಾತನಾಡಿ, “ಮಾಹಿತಿ ನೀಡದೆ ದರ ಏರಿಕೆ ಮಾಡಲಾಗಿದೆ. ತರಕಾರಿ ಬೆಲೆ, ಅಡುಗೆ ಎಣ್ಣೆ ಬೆಲೆ ಸೇರಿದಂತೆ ನಿತ್ಯ ಅಗತ್ಯ ವಸ್ತುಗಳ ದರ ಏರಿಕೆ ಮಾಡಲಾಗಿದೆ. ಇದರಿಂದ ಬದುಕುವುದೇ ದುಸ್ತರವಾಗಿದೆ. ಅಂಥದ್ದರಲ್ಲಿ ಈಗ ಕುಡಿಯುವ ನೀರಿಗೆ ₹5 ಹೆಚ್ಚಳ ಮಾಡಿದ ಕಾರಣ ತಿಂಗಳಿಗೆ ₹400 ರಿಂದ ₹500 ಖರ್ಚಾಗುತ್ತದೆ. ನಮ್ಮ ಮನೆಯಲ್ಲಿ ಆರು ಜನರಿದ್ದೇವೆ” ಎಂದು ಹೇಳಿದರು.
“ನೀರಿನ ದರ ಹೆಚ್ಚಳ ಮಾಡುವಾಗ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಬೇಕಿತ್ತು. ದಿಢೀರನೇ ದರ ಏರಿಕೆ ಮಾಡಿದ ಕಾರಣ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಮಸ್ಯೆಯಾಗುತ್ತದೆ. ಕುಡಿಯಲು ನೀರು ಬೇಕು. ಈ ಹಿಂದೆ ಪ್ರತಿ ಕ್ಯಾನ್ಗೆ ₹5 ನೀಡುವುದೇ ಕಷ್ಟವಾಗಿತ್ತು. ಇದೀಗ ಇನ್ನೂ ₹5 ಹೆಚ್ಚಳವಾಗಿದೆ. ನೀರಿನ ದರ ಕಡಿಮೆಯಾಗದೇ ಇದ್ದರೆ, ನೀರಿನ ಬಳಕೆ ಕಡಿಮೆ ಮಾಡಬೇಕಾಗುತ್ತದೆ” ಎಂದು ವಿಜಯನಗರದ ಗೃಹಿಣಿ ಶಾಂತಮ್ಮ ಈ ದಿನ.ಕಾಮ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್ | ಇನ್ಮುಂದೆ ಬಿಸಿಬಿಸಿ ರಾಗಿ ಮುದ್ದೆ ಜತೆಗೆ ಪಾಯಸ
“ವಿದ್ಯುತ್ ಬೆಲೆ ಏರಿಕೆಯಿಂದ ದರ ಏರಿಕೆ ಮಾಡಲೇಬೇಕು ಎಂಬುದಿದ್ದರೆ, ₹1 ಅಥವಾ ₹2 ಏರಿಕೆ ಮಾಡಬಹುದಾಗಿತ್ತು. ಆದರೆ, ಏಕಾಏಕಿ ದುಪ್ಪಟ್ಟು ದರ ಏರಿಕೆ ಮಾಡಿರುವುದು ಖಂಡನೀಯ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಜನರಿಂದ ಸುಲಿಗೆ ಮಾಡಲು ಈ ರೀತಿ ದರ ಏರಿಕೆ ಮಾಡಲಾಗಿದೆ” ಎಂದು ಗೋವಿಂದರಾಜನಗರದ ನಿವಾಸಿ ನಾಗರಾಜ್ ಈ ದಿನ.ಕಾಮ್ಗೆ ತಿಳಿಸಿದರು.
“ಹೋಟೆಲ್ ಉದ್ಯಮ ನಡೆಸಲು ಮುಖ್ಯವಾಗಿ ಬೇಕಾಗಿರುವುದು ನೀರು, ನಮ್ಮದು ವಾಣಿಜ್ಯ ಉದ್ಯಮವಾಗಿರುವುದರಿಂದ ವಿದ್ಯುತ್ ಉಚಿತದಿಂದ ದೂರವಿದ್ದೇವೆ. ಇದೀಗ ಹಾಲಿನ ದರ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಹಾಗಾಗಿ, ಕಳೆದ ಕೆಲವು ದಿನಗಳ ಹಿಂದೆ ತಿಂಡಿ-ತಿನಿಸುಗಳ ಮೇಲೆ ಶೇ.10 ರಷ್ಟು ದರ ಏರಿಕೆ ಮಾಡಲಾಗಿದೆ. ಇದೀಗ ನೀರಿನ ಮೇಲೆಯೂ ₹5 ಏರಿಕೆ ಮಾಡಿರುವುದರಿಂದ ಹೆಚ್ಚು ಹೊಡೆತ ಬಿದ್ದಂತಾಗಿದೆ. ಏಕೆಂದರೆ ದಿನಕ್ಕೆ ಹೋಟೆಲ್ಗೆ ಐದರಿಂದ ಆರು ಕ್ಯಾನ್ಗಳು ಬೇಕಾಗುತ್ತದೆ. ದಿನಕ್ಕೆ ಸುಮಾರು 100 ಲೀ ಕುಡಿಯುವ ನೀರು ಬೇಕಾಗುತ್ತದೆ. ದಿನಕ್ಕೆ ನೀರಿಗಾಗಿ ₹50 ಪಾವತಿ ಮಾಡಬೇಕಾಗುತ್ತದೆ. ತಿಂಗಳಿಗೆ ₹1500 ಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಕುಡಿಯುವ ನೀರಿನ ದರವನ್ನು ಕಡಿಮೆ ಮಾಡಬೇಕು” ಎಂದು ಪ್ರಕಾಶನಗರದ ಹೋಟೆಲ್ ವ್ಯಾಪಾರಿಯೊಬ್ಬರು ಈ ದಿನ.ಕಾಮ್ಗೆ ತಿಳಿಸಿದರು.
“ಬಿಬಿಎಂಪಿಯಿಂದ ಗುತ್ತಿಗೆ ಆಧಾರದ ಮೇಲೆ ಕೆಲವು ನೀರಿನ ಘಟಕಗಳಿವೆ. ಇನ್ನೂ ಕೆಲವು ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಏಜೆನ್ಸಿಗಳಿಗೆ ನೀಡಲಾಗಿದೆ. ಇನ್ನೂ ಕೆಲವರು ತಾವೇ ಸ್ವಂತ ಹಣದಲ್ಲಿ ನೀರಿನ ಘಟಕಗಳನ್ನು ನಡೆಸುತ್ತಿದ್ದಾರೆ. ಈ ಹಿಂದೆ ನೀರಿನ ಘಟಕಗಳ ಬಗ್ಗೆ ಯಾವ ರೀತಿಯ ಒಪ್ಪಂದ ಆಗಿದೆ ಎಂಬ ಬಗ್ಗೆ ಪರಿಶೀಲಿಸಲಾಗುವುದು. ನೀರಿನ ಬೆಲೆ ಏರಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಈ ದಿನ.ಕಾಮ್ಗೆ ಬಿಬಿಎಂಪಿ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್ ಶಶಿಕುಮಾರ್ ತಿಳಿಸಿದರು.