ಮಣಿಪುರದಲ್ಲಿ ಮಾನವೀಯತೆ ಸತ್ತಿದೆ. ಮನುಕುಲವೇ ನಾಚಿಕೆ ಪಡೆಯುವಂತಹ ಘಟನೆ ನಡೆದಿದೆ. ನಮ್ಮ ಭಾರತವು ವಿಶ್ವದಲ್ಲಿಯೇ ಬೆತ್ತಲೆಯಾಗಿದೆ. ಕುಕಿ ಸಮುದಾಯದ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಹೆಣ್ಣನ್ನು ಪೂಜಿಸುವ ನೆಲದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡ ಬಸವರಾಜ್ ಹಳ್ಳದಮನೆ ಅಸಮಧಾನ ವ್ಯಕ್ತಪಡಿಸಿದರು.
ಮಣಿಪುರ ಹಿಂಸಾಚಾರ ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ದಸಂಸ ಪ್ರತಿಭಟನೆ ನಡೆಸಿದೆ. ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಬಸವರಾಜ್ ಹಳ್ಳದಮಣಿ, “ದೇಶದ ಪ್ರಧಾನ ಮಂತ್ರಿಗಳು ಮಣಿಪುರ ಘಟನೆ ನಡೆದು 73 ದಿನಗಳಾದರೂ ತುಟಿ ಬಿಟ್ಟಿರಲಿಲ್ಲ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದಾಗ ಈ ದೇಶದ ಪ್ರಧಾನಿ ಬಾಯಿ ಬಿಟ್ಟಿದ್ದಾರೆ. ಬೇಟಿ ಬಜಾವೋ ಬೇಟಿ ಪಡಾವೋ, ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎನ್ನುವ ಪ್ರದಾನ ಮಂತ್ರಿ ಮೋದಿಯವರೆ ಮಣಿಪುರ ರಾಜ್ಯದ ಮುಖ್ಯಮಂತ್ರಿ ಬೀರೇನಸಿಂಗ್ ಅವರನ್ನು ಕೂಡಲೇ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿ ಶಾಂತಿ ಕಾಪಾಡಬೇಕು” ಎಂದು ಆಗ್ರಹಿಸಿದರು.
” ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಹಾಗೂ ಉತ್ತರ ಕರ್ನಾಟಕದವರ ಬಣ್ಣದ ಬಗ್ಗೆ ಮಾಜಿ ಗೃಹ ಸಚಿವ, ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗಳು ಬಿಜೆಪಿಯ ಕೋಮುವಾದಿ ಮತ್ತು ಮನುವಾದಿ ಸಿದ್ಧಾಂತವನ್ನು ಪ್ರತಿಧ್ವನಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಚಾಲಕ ಪರಶುರಾಮ ಕಾಂಬಳೆ ಮಾತನಾಡಿ, “ಜೈ ಶ್ರೀರಾಮ್ ಎಂದು ಕೂಗುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮುಖಂಡರು ಇಂದು ಎಲ್ಲಿಸಿದ್ದಾರೆ. ಮಣಿಪುರದಲ್ಲಿ ಸೀತಾಮಾತೆಯರನ್ನ ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಸಾವಿನ ಪ್ರಕರಣವನ್ನು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?:‘ಹೊಲೆಗೇರಿ’ ಹೇಳಿಕೆ | ಸಿಎಂ ಜೊತೆ ಚರ್ಚಿಸಿ ಕಾನೂನು ಕ್ರಮ: ಗೃಹ ಸಚಿವ ಪರಮೇಶ್ವರ್
ಪ್ರತಿಭಟನೆಯಲ್ಲಿ ದಲಿತ ಮುಖಂಡ ಖಾಜಾಮೈನುದ್ದಿನ್ ತಹಶೀಲ್ದಾರ್ ಮಾತನಾಡಿ, “ನಟ ಉಪೇಂದ್ರ ಮಾತನಾಡುವಾಗ ಸಾಮಾಜಿಕೆ ಹೊಣೆಗಾರಿಕೆ, ಪ್ರಜ್ಞೆಯಿಂದ ಮಾತನಾಡಬೇಕು. ಇಂಥವರಿಂದ ಸಮಾಜದಲ್ಲಿ ಶಾಂತಿ ಕದಡುವ ವ್ಯವಸ್ಥೆ ಆಗಬಾರದು. ಆತನ ಹೇಳಿಕೆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕುಡಿಯುವ ನೀರಿನ ಜಗ್ಗನ್ನು ತೆಗೆದುಕೊಂಡು ನೀರು ಕುಡಿಯುವ ಸಂದರ್ಭದಲ್ಲಿ ಇಬ್ಬರು ದಲಿತ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂತಹ ಘಟನೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ರಾಜ್ಯಾದ್ಯಂತ ಹೋರಾಟ ಮಾಡತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಮೇಶ ಅನಗವಾಡಿ ಜಿಲ್ಲಾ ಸಂಘಟನಾ ಸಂಚಾಲಕರು.ಯಲ್ಲಪ್ಪ ಮಾದರ (ಶಿರಗುಪ್ಪಿ) ಅಧ್ಯಕ್ಷರು ಸಲಹಾ ಸಮಿತಿ ಬೀಳಗಿ, ಕಾಶಿಂ ಗೋಠೇ,ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕ ಬಾಗಲಕೋಟೆ,ಎಂ ಎಂ ಖಾಜಿ,ಶ್ರೀಶೈಲ ಅಂಟಿನ,ಮಾರುತಿ ಚಿಕ್ಕಾಲಗುಂಡಿ, ,ಅಸ್ಲಂ ಖಲಿಪ್ ಸದಾಶಿವ ಐನಾಪುರ, ಬಸವರಾಜ್ ದೊಡ್ಡಮನಿ,ಷಾನವಾಜ್ ಮುಲ್ಲಾ,ತೌಶಿಪ್ ಕಲಾದಗಿ,ಶ್ರೀಕಾಂತ್ ಗೋಡೆಪ್ಪನ್ನವರ, ಗೈಬು ಚಲವಾದಿ ಸೇರಿ ಅನೇಕರು ಭಾಗಿಯಾಗಿದ್ದರು.