ಪ್ರಯಾಣಿಕರನ್ನು ಕರೆದುಕೊಂಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಿಂದ ಹಿರಿಯೂರಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಚಳ್ಳಕೆರೆ ಹೊರವಲಯದ ನಗರಂಗೆರೆ ಗೇಟ್ ಬಳಿ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ್ದು ಕೆಲ ಪ್ರಯಾಣಿಕರು ಗಾಯಗೊಂಡಿದ್ದು, ಎತ್ತೊಂದು ಸ್ಥಳದಲ್ಲೇ ಅಸುನೀಗಿದ್ದು, ಇನ್ನೊಂದು ಎತ್ತು ಮತ್ತು ಗಾಡಿಯ ಮಾಲೀಕ ತೀವ್ರ ಗಾಯಗೊಂಡಿದ್ದಾರೆ.

ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದು, ಎತ್ತಿನ ಬಂಡಿಯ ಮಾಲೀಕ ರಾಜಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ‘ಎತ್ತಿನ ಬಂಡಿಯಲ್ಲಿ ರಾಜಣ್ಣ ಶೇಂಗಾ ಮೂಟೆಗಳನ್ನು ಸಾಗಿಸುತ್ತಿದ್ದು ಅಪಘಾತದ ತೀವ್ರತೆಗೆ ಶೇಂಗಾ ಚೀಲಗಳು ಬಸ್ಸಿನ ಮುಂಭಾಗ ತೂರಿಕೊಂಡು, ರಸ್ತೆಯಲ್ಲೇಲ್ಲಾ ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಚಾಲಕನಿಗೆ ಇದ್ದಕ್ಕಿದ್ದಂತೆ ಪಿಡ್ಸ್ ಕಾಣಿಸಿಕೊಂಡಿದ್ದು, ಬಸ್ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಎತ್ತಿನ ಗಾಡಿಗೆ ಡಿಕ್ಕಿಯಾದ ಬಳಿಕ ಮುಂದೆ ಇದ್ದ ಹಳ್ಳಕ್ಕೆ ಬಿದ್ದಿದೆ ಎನ್ನುವ ಮಾಹಿತಿ ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ
ತೀವ್ರವಾಗಿ ಗಾಯಗೊಂಡ ಎತ್ತಿನ ಬಂಡಿಯ ಮಾಲೀಕ ರಾಜಣ್ಣ ಸೇರಿದಂತೆ ಬಸ್ಸಿನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.