ನೇಪಾಳ ಮಧ್ಯಂತರ ಪ್ರಧಾನಿಯಾಗಿ ನೇಪಾಳ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ನೇಪಾಳದ ಮೊದಲ ಮಹಿಳಾ ಪ್ರಧಾನಿಯೂ ಆಗಿದ್ದಾರೆ.
ಯುವಜನರ ಜೆನ್ ಝಡ್ ಬೃಹತ್ ಪ್ರತಿಭಟನೆಯಿಂದಾಗಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ಪ್ರಧಾನಿಯ ನೇಮಕಕ್ಕಾಗಿ ಯುವಜನರು ಮತ್ತು ಸೇನಾ ಮುಖ್ಯಸ್ಥರ ನಡುವೆ ಇತ್ತೀಚೆಗೆ ಸಭೆ ನಡೆದಿತ್ತು. ಇದೀಗ, ಸುಶೀಲಾ ಅವರನ್ನು ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದ್ದು, ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೇಪಾಳದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶರಾಜಕಾರಣ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ವಿರೋಧಿಸಿ ಯುವಜನರು ಸೆಪ್ಟೆಂಬರ್ 8ರಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಮೇಲೆ ಸರ್ಕಾರವು ಪೊಲೀಸ್ ದಾಳಿ ನಡೆಸಿತ್ತು. ಪರಿಣಾಮವಾಗಿ ಸುಮಾರು 20 ಮಂದಿ ಯುವಕರು ಸಾವನ್ನಪ್ಪಿದ್ದರು. ಬಳಿಕ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಪ್ರಧಾನಿ ಓಲಿ ರಾಜೀನಾಮೆ ನೀಡಿದ್ದರು.
ಸದ್ಯ, ನೇಪಾಳ ಉದ್ವಿಗ್ನಗೊಂಡಿದೆ. ಇಂತಹ ಸಮಯದಲ್ಲಿ ಸುಶೀಲಾ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೇಪಾಳದ ಪರಿಸ್ಥಿತಿಯನ್ನು ನಿಭಾಯಿಸಿ, ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಸವಾಲು ಅವರ ಮುಂದಿದೆ.
ಸುಶೀಲಾ ಕರ್ಕಿ ಅವರು ಜುಲೈ 11, 2016 ರಿಂದ ಜೂನ್ 6, 2017 ರವರೆಗೆ ನೇಪಾಳದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.