ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ರಾಮರೆಡ್ಡಿ ಕ್ಯಾಂಪಿನಲ್ಲಿ ನಡೆದಿದೆ.
ಭೀಮಾಶಂಕರ (20) ಮೃತ ದುದೈರ್ವಿ. ಆತ ಅನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ, ಕಾಲೇಜಿನಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮ ಮುಗಿಸಕೊಂಡು ರಾಮರೆಡ್ಡಿ ಕ್ಯಾಂಪಿಗೆ ತೆರಳಿದ್ದಾನೆ. ಸಂಜೆ ಗ್ರಾಮದಲ್ಲಿ ಬೀದಿ ದೀಪದ ಸಮಸ್ಯೆಯಾಗಿದ್ದರಿಂದ, ವಿದ್ಯುತ್ ಕನೆಕ್ಷನ್ ಸರಿಪಡಿಸಲು ಆತನನ್ನು ಗ್ರಾಮ ಪಂಚಾಯತಿ ಸಿಬ್ಬಂದಿ ವಿದ್ಯುತ್ ಕಂಬಕ್ಕೆ ಹತ್ತಿಸಿದ್ದರು ಎಂದು ಹೇಳಲಾಗಿದೆ.
ವಿದ್ಯುತ್ ದೀಪ ಬಲ್ಬ್‌ಅನ್ನು ಅಳವಡಿಸುವಾಗ ವಿದ್ಯುತ್ ಸ್ಪರ್ಶಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಭೂಮಾಶಂಕರ ಅವರ ಸಾವಿನ ಸುದ್ದಿ ತಿಳಿದ ಅನಿಕೇತನ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಮತ್ತು ಕೆಇಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ಸಾವಿಗೆ ಗ್ರಾಮ ಪಂಚಾಯತಿ ಮತ್ತು ಕೆಇಬಿ ಅಧಿಕಾರಿಗಳೆ ಕಾರಣವೆಂದು ಆರೋಪಿಸಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.