ಮಣಿಪುರ ಹಿಂಸಾಚಾರಕ್ಕೆ ಕುಕಿ ಬಡುಕಟ್ಟು ಸಮುದಾಯವೇ ಕಾರಣ. ಅವರು ಗಾಂಜಾ ಬೆಳೆದು ಮೈತೇಯಿ ಯುವಕರನ್ನು ನಶೆಗೆ ದಾಸರನ್ನಾಗಿ ಮಾಡಿದ್ದಾರೆ. ಮಯನ್ಮಾರ್ ಅಕ್ರಮ ವಲಸಿಗರಿಗೆ ವಾಸಿಸಲು ಜಾಗ ನೀಡಿದ್ದಾರೆ. ಇದೇ ಘರ್ಷಣೆಗೆ ಮೂಲ ಕಾರಣವಾಗಿದೆ ಎಂದು ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ನಮೋಬ್ರಿಗೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಣಿಪುರದಲ್ಲಿ ನಡೆದ ಮಹಿಳೆಯ ಮೇಲೆ ದೌರ್ಜನ್ಯ ಸಭ್ಯ ಸಮಾಜ ತಲೆತಗ್ಗಿಸಬೇಕಾದ ಘಟನೆಯಾಗಿದೆ. ಆದರೆ, ಮಣಿಪುರ ಹಿಂಸಾಚಾರಕ್ಕೆ ಬೇರೆಯ ಆಯಾಮವಿದೆ. ಕುಕಿ ಬುಡಕಟ್ಟು ಸಮುದಾಯ ತಮಗೆ ದೊರೆತಿದ್ದ ಸವಲತ್ತನ್ನು ಅಕ್ರಮ ವಿಷಯಗಳಿಗೆ ಬಳಸಿಕೊಂಡಿದೆ. ಮಾದಕ ವಸ್ತುಗಳ ಮಾರಾಟ ಮಾಡಿ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದೆಲ್ಲದಕ್ಕೂ ಚೀನಾ ಬೆಂಬಲ ನಿಡುತ್ತಿದೆ” ಎಂದು ದೂರಿದ್ದಾರೆ.
“ಮೈಥೇಯಿಗಳನ್ನು ಪ್ರಯೋಜನವಿಲ್ಲದವರು ಎಂಬಂತೆ ಬಿಂಬಿಸಿದ್ದರು. ಇಂಫಾಲ್‌ನಲ್ಲಿ ಮೈಥೇಯಿಗಳು ಕ್ರೂರತೆ ಮೆರೆದ ಘಟನೆಗಳು ಕಾಣುತ್ತಿವೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಕುಕಿಗಳು ಹಿಂಸಾಚಾರ ನಡೆಸುತ್ತಿದ್ದಾರೆ. ಅವುಗಳು ಪ್ರಚಾರ ಪಡೆಯುತ್ತಿಲ್ಲ” ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಪ್ರಬಲ ಮತ್ತು ಬಹುಸಂಖ್ಯಾತರಾಗಿರುವ ಮೈಥೇಯಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಲು ಪರಿಗಣಿಸಬಹುದು ಎಂದು ಅಲ್ಲಿನ ಹೈಕೋರ್ಟ್ ಅದೇಶ ನೀಡಿತ್ತು. ಅದನ್ನು ಖಂಡಿಸಿ ಕುಕಿ ಸಮುದಾಯ ಇಂಫಾಲ್‌ನಲ್ಲಿ ಶಾಂತಿ ಪ್ರತಿಭಟನೆ ನಡೆಸಿದ್ದವು. ಆದರೆ, ಅಂದಿನ ರಾತ್ರಿ ವೇಳೆಗೆ ಮೈಥೇಯಿ ಸಮುದಾಯಕ್ಕೆ ಸೇರಿದ ಕೆಲವರು ಗಲಭೆ ಎಬ್ಬಿಸಿದ್ದರು. ಹಿಂಸಾಚಾರ ಆರಂಭವಾಗಿ 90 ದಿನಗಳ ಕಳೆದಿವೆ. ಆದರೂ, ಹಿಂಸಾಚಾರವನ್ನು ತಡೆಯುವಲ್ಲಿ ಬಿಜೆಪಿ ಡಬ್ಬಲ್ ಎಂಜಿನ್ ಸರ್ಕಾರ ವಿಫಲವಾಗಿದೆ.