ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸುತ್ತಿದ್ದು, ಸೆ.19ರಂದು ಹುಬ್ಬಳ್ಳಿಯಲ್ಲಿ ವೀರಶೈವ-ಲಿಂಗಾಯತ ಏಕತಾ ಸಮಾವೇಶಕ್ಕೆ ಸಿದ್ಧತೆ ನಡೆದಿದೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನಿವಾಸದಲ್ಲಿ ಮಂಗಳವಾರ ರಾತ್ರಿ ಸಮಾಜದ ಹಿರಿಯರಾದ ಪ್ರಭಾಕರ ಕೋರೆ, ರೇಣುಕಾಚಾರ್ಯ, ವೀರಣ್ಣ ಚರಂತಿ ಮಠ ಅವರು ಸಚಿವರೊಂದಿಗೆ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಕುರಿತಂತೆ ಚರ್ಚಿಸಿದರು.
“ರಾಜ್ಯ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದು, ಜಾತಿ ಒಡೆಯುವ ಕಾರ್ಯ ಮಾಡುತ್ತಿಲ್ಲ, ಮಾಡುವುದೂ ಇಲ್ಲ” ಎಂದು ಸಭೆಯ ಬಳಿಕ ಈಶ್ವರ ಖಂಡ್ರೆ ತಿಳಿಸಿದರು.
“ಸೆ. 22ರಿಂದ 7ನೇ ಅಕ್ಟೋಬರ್ ವರೆಗೆ ರಾಜ್ಯದಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಈ ಕುರಿತಂತೆ ಮಹಾಸಭಾವತಿಯಿಂದ ಹಲವು ಸಭೆಗಳು ನಡೆದಿವೆ. ಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಹಿರಿಯ ಉಪಾಧ್ಯಕ್ಷನಾದ ನನ್ನ ಅಧ್ಯಕ್ಷತೆಯಲ್ಲಿ ಶಾಸಕರ, ಸಮಾಜದ ಮುಖಂಡರ ಸಭೆಗಳನ್ನು ನಡೆಸಲಾಗಿದೆ. ಲಿಂಗಾಯತ-ವೀರಶೈವ ಎಲ್ಲರೂ ಒಂದೇ ಎಂಬ ಸ್ಪಷ್ಟ ಸಂದೇಶ ನೀಡಲು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಆಯೋಜಿಸಲಾಗಿದೆ” ಎಂದರು.
“ಕೆಲವರು ಸರ್ಕಾರ ಧರ್ಮ ಒಡೆಯುತ್ತಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಹಿಂದೆಯೂ ಧರ್ಮ ಒಡೆಯುವ ಕಾರ್ಯ ಮಾಡಿಲ್ಲ, ಇಂದೂ ಮಾಡುತ್ತಿಲ್ಲ, ಮುಂದೆಯೂ ಮಾಡುವುದಿಲ್ಲ. ಮೊದಲೇ ಸಮಾಜದ ಜನರು ಗೊಂದಲದಲ್ಲಿದ್ದು, ರಾಜಕೀಯ ಲಾಭಕ್ಕಾಗಿ ಯಾರೂ ಮತ್ತಷ್ಟು ಗೊಂದಲ ಮೂಡಿಸಬಾರದು” ಎಂದು ಹೇಳಿದರು.
“ಸರ್ಕಾರ ಈಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ವೀರಶೈವ ಲಿಂಗಾಯತ ಸಮುದಾಯದಲ್ಲಿಯೂ ಇರುವ ಬಡವರು, ದುರ್ಬಲರು, ವಂಚಿತರಿಗೆ ಸಮಾಜಿಕ ನ್ಯಾಯ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಬಾಂಧವರೂ ನಿಖರ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದರು.
ಬಸವ ಲಿಂಗಾಯತ ಪರ ಸಂಘಟನೆಗಳಿಂದ ವಿರೋಧ
ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಹಿಂದೂ’ ಬದಲಿಗೆ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕೆಂಬ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಲಹೆಯನ್ನು ನಾವು ತಿರಸ್ಕರಿಸುತ್ತೇವೆ. ಇದಕ್ಕೆ ವಿರುದ್ಧವಾಗಿ ಪ್ರತಿಯೊಬ್ಬ ಲಿಂಗಾಯತರು ತಮ್ಮ ಧರ್ಮವನ್ನು ಲಿಂಗಾಯತ ಎಂದು ಬರೆಸಬೇಕು ಎಂದು ಕೆಲವು ಕಾರಣಗಳನ್ನು ಉಲ್ಲೇಖಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ 50 ಬಸವ ಲಿಂಗಾಯತ ಪರ ಸಂಘಟನೆಗಳು ಕರೆ ನೀಡಿವೆ.
ಅಖಿಲ ಭಾರತ ವೀರಶೈವ ಮಹಾಸಭಾದವರು ಲಿಂಗಾಯತರು ಹಿಂದೂಗಳಲ್ಲ ಮತ್ತು ಆದ್ದರಿಂದ ಅವರು ಎಲ್ಲ ಲಿಂಗಾಯತರು ಜನಗಣತಿ ನಮೂನೆಗಳ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. 121 ವರ್ಷಗಳ ಹಿಂದೆ 1904ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಿದ್ದಕ್ಕಾಗಿ ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಲಿಂಗಾಯತ ಒಕ್ಕೂಟಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.