ದಿಲ್ಲಿ ಮಾತು | ಕಾಲ ಮರೆತುಹೋದ ʼಔರಂಗಜೇಬ್ ರೋಡ್ʼ

Date:

ನನ್ನಂತೆ ಉತ್ತರ ಭಾರತದಲ್ಲಿ ದೀರ್ಘಕಾಲ ನೆಲೆ ನಿಂತವರಿಗೆ ಬದುಕಿನ ಹಲವಾರು ತಿರುವುಗಳಲ್ಲಿ ಭಾರತ ದೇಶ ಬಟವಾಡೆಯಾದಾಗಿನ ಗದರ್ ಘಳಿಗೆಯ ಕರಾಳ ನೆರಳು ಬೆನ್ನುಬಿಡದು. ಇಲ್ಲಿನವರ ಬಾಯಿಂದ ಆ ಕಥೆಗಳನ್ನು ಕೇಳಿದರೇ ಜೀವ ತರಗುಡುತ್ತದೆ. ಎಷ್ಟೆಲ್ಲ ಕಳೆದುಕೊಂಡಿದ್ದಾರೆ, ಏನೆಲ್ಲ ಅನುಭವಿಸಿದ್ದಾರೆಂದು ಯೋಚಿಸಿಯೇ ಕಿಚ್ಚು ಹಚ್ಚಿದಂತಾಗುತ್ತದೆ.

- Advertisement -

ಮಲೆಯಾಳಿ ಹಳೇ ಕೋಲಿಗ್ ಒಬ್ಬರು ಬಹಳ ಕಾಲದ ನಂತರ ಫೋನ್ ಮಾಡಿದ್ದರು. ತಾವು ಬದಲಿಸಿದ ಕಂಪನಿಗಳ ಬಗ್ಗೆ ಹರಟುತ್ತ ದಾಲ್ಮಿಯಾ ಗ್ರೂಪ್ ವಿಷಯ ಬಂತು. ತನ್ನ ಗ್ರೂಪ್ ಕಂಪನಿಯ ಮಾಲೀಕ ದಾಲ್ಮಿಯಾರನ್ನು ಬಾಯ್ತುಂಬ ಹೊಗಳಿದ. ಹಿಂದೆ ನಾನೆಲ್ಲೋ ಓದಿದ ದಾಲ್ಮಿಯಾ ಹೆಸರಿನೊಡನೆ ಪಾಕಿಸ್ತಾನದ ಜನಕ ಕೈದ್ -ಏ – ಆಜಮ್ ಮೊಹಮ್ಮದ ಅಲಿ ಜಿನ್ನಾ ಅವರೂ ನೆನಪಾದರು. ಜಿನ್ನಾ ಅವರಿಗೆ ಆಪ್ತ ಸ್ನೇಹಿತರಾಗಿದ್ದರಂತೆ ರಾಮಕೃಷ್ಣ ದಾಲ್ಮಿಯಾ. ಅದೂ ಒಂದು ರೋಚಕ ಇತಿಹಾಸ. ಒಂದು ಕಾಲಕ್ಕೆ ದೆಹಲಿಯ 10 ಔರಂಗಜೇಬ್ ರೋಡಿನ ಬಂಗಲೆ ಜಿನ್ನಾರದಾಗಿತ್ತು. ಮುಂದೆ ಬಟವಾಡೆಯ ಕಾಲಕ್ಕೆ ಅವರ ಗೆಳೆಯ ರಾಮಕೃಷ್ಣ ದಾಲ್ಮಿಯಾ ಕೊಂಡುಕೊಂಡರಂತೆ. ಇಂಥ ದೆಹಲಿಯ ಇತಿಹಾಸವನ್ನು ಬಹಳ ಸಲ ದೆಹಲಿಯ ಹಿರಿಯ ಕನ್ನಡತಿ ದಿವಂಗತ ಶಾಸ್ತ್ರಿ ಆಂಟಿ ಅವರ ಬಾಯಿಯಿಂದ ಕೇಳಿದ್ದೇನೆ. ಈಗ ಅವರಿಲ್ಲ, ಔರಂಗಜೇಬ್ ರೋಡೂ ಇಲ್ಲ. ಮೊಘಲ್ ಅರಸನ ಹೆಸರು ಅಳಿಸಿದ ಬಳಿಕ ಈಗದು ಎಪಿಜೆ ಅಬ್ದುಲ್ ಕಲಾಂ ರಸ್ತೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಆಗ ಭಾರತದ ಭವಿಷ್ಯವೇ ಈ ನಾಲ್ಕು ಸೂಕ್ಷ್ಮದರ್ಶಿಗಳ ಕೈಯಲ್ಲಿತ್ತು – ಲಾರ್ಡ್‌ ಮೌಂಟ್ ಬ್ಯಾಟನ್, ಮಹಾತ್ಮ ಗಾಂಧಿ, ಜವಾಹರ ಲಾಲ್ ನೆಹರೂ ಮತ್ತು ಮಹಮ್ಮದ ಅಲಿ ಜಿನ್ನಾ. ತನ್ನ ಕನಸಿನ ಪಶ್ಚಿಮ ಪಾಕಿಸ್ತಾನವನ್ನು ಸ್ಥಾಪಿಸಿದ ಜಿನ್ನಾ ಹಾಗೂ ರಾಜಕೀಯ ನೇತಾರರಿಗೆ ಬಹುಶಃ ಮುಂದಿನ ಜನಾಂಗದ ತಲ್ಲಣಗಳ ಪ್ರಜ್ಞೆ ಇದ್ದಿದ್ದರೆ, ಈ ಯುಗದ ಕಲ್ಪನೆ ಇದ್ದಿದ್ದರೆ, ಅಂದಿನ ನಮ್ಮ ನಾಯಕರು ನಿಸ್ಸಂಶಯವಾಗಿ ತಮ್ಮ ಅಸಾಧಾರಣ ದೂರದೃಷ್ಟಿ. ಸೊಕ್ಕು ಹಾಗೂ ಸ್ವಾರ್ಥದಿಂದ ಎರಡು ರಾಷ್ಟ್ರಗಳ ವಿಭಜನೆಯ ಸಿದ್ಧಾಂತದಲ್ಲಿ ತಮ್ಮ ಮುಂದಿನ ನೂರಾರು ತಲೆಮಾರಿನವರು ಕಡು ಹಗೆತನದಿಂದ ನರಳುವಂತೆ ಮಾಡುತ್ತಿರಲಿಲ್ಲವೇನೋ. ಇದಕ್ಕೆ ಉದಾಹರಣೆಯೆಂದರೆ ಸದ್ಯದ ಕ್ರಿಕೆಟ್ ಮ್ಯಾಚಿನ ಸುತ್ತಲೂ ನಡೆಯುತ್ತಿರುವ ವಾದ-ಪ್ರತಿವಾದಗಳೇ ಸಾಕು.

ಸ್ವಾತಂತ್ರ್ಯ ದೊರಕಿದ ಸಂಭ್ರಮದ ಬೆನ್ನಲ್ಲೇ ರಕ್ತದ ಕೋಡಿಯೇ ಹರಿಯಿತು. ಪಾಕಿಸ್ತಾನ – ಪಂಜಾಬು ಕೋಮು ದಳ್ಳುರಿಯಲ್ಲಿ ತತ್ತರಿಸಿಹೋದವು. ಸಾವಿರಾರು ಹಿಂದು-ಮುಸ್ಲಿಂ ಕುಟುಂಬಗಳು ಚೆಲ್ಲಾಪಿಲ್ಲಿಯಾದವು, ಕೆಲವು ನಾಶವಾದವು. ಹೊಲದಲ್ಲಿ ಬೆಳೆದುನಿಂತ ಫಸಲನ್ನು, ಚರಾಚರ ಆಸ್ತಿ-ಪಾಸ್ತಿಗಳನ್ನು ಇದ್ದಲ್ಲೇ ಬಿಟ್ಟು, ಕೂಸು ಕುನ್ನಿಗಳನ್ನೆತ್ತಿಕೊಂಡು ಜೀವ ಉಳಿದರೆ ಸಾಕೆಂದು ಎದ್ದು ದೇಶಾಂತರ ಹೋದವರೆಷ್ಟೋ! ಭುಗಿಲೆದ್ದ ಆಕ್ರೋಶ! ನರಮೇಧದಲ್ಲಿ ಪರ್ಯಾವಸಾನ! ಉಳಿದವರಿಗೆ ನರಕದ ಬದುಕು, ಹೋದವರಿಗೆ ಗತಿ ಕಾಣಿಸುವವರೂ ಇಲ್ಲದ ಸ್ಥಿತಿ!

jinnah house1
ಜಿನ್ನಾ ಅವರ ಬಂಗಲೆ

ಕರಾಚಿಯಲ್ಲಿ ಹುಟ್ಟಿ, ಮುಂಬೈಯಲ್ಲೆ ಹೆಚ್ಚು ಬಾಳಿ ಬದುಕಿದ ಜಿನ್ನಾ ಅವರು ದೆಹಲಿಯ 10 ಔರಂಗಜೇಬ್ ಬಂಗಲೆಯನ್ನು ಸ್ನೇಹಿತರ ಒತ್ತಾಯಕ್ಕೆ ಮಣಿದು ಖರೀದಿಸಿದ್ದರಂತೆ. ಜಿನ್ನಾ ಅವರ 10 ಔರಂಗಜೇಬ್ ಬಂಗಲೆಯನ್ನು ವಿಭಜನೆಯ ಮೊದಲೇ ತಮ್ಮ ಪತಿ ರಾಮಕೃಷ್ಣ ದಾಲ್ಮಿಯಾ ಅವರು ಕೊಂಡುಕೊಂಡರೆಂದು ಅವರ ಪತ್ನಿ, ಕವಿಯತ್ರಿ, ಕತೆಗಾರ್ತಿ ಪದ್ಮಭೂಷಣ ವಿಜೇತೆ ದಿ. ದಿನೇಶ್ ನಂದಿನಿ ದಾಲ್ಮಿಯಾ ಒಂದೆಡೆ ಬರೆದಿದ್ದಾರೆ. ನಗರದ ಅನೇಕ ಗಣ್ಯರು ಆ ಬಂಗಲೆಯನ್ನು ಖರೀದಿಸಲು ಮುಂದಾಗಿದ್ದರಂತೆ. ಬಂಗಲೆಯ ಡ್ರಾಯಿಂಗ್ ರೂಮಿನಲ್ಲಿ ಜಿನ್ನಾ ಅವರ ಪಾರ್ಸಿ ಪತ್ನಿ ’ರತ್ತಿ’ ಅವರ ಫೋಟೋ ಇತ್ತಂತೆ. ಆಕೆ ಬಹುಕಾಲ ಬಾಳಲಿಲ್ಲ. ಜಿನ್ನಾ ತಮ್ಮ ಸೋದರಿ ಫಾತಿಮಾ ಅವರೊಂದಿಗೆ ವಾಸಿಸುತ್ತಿದ್ದರು. ದಾಲ್ಮಿಯಾ ಕೂಡ ಆ ಮನೆಯಲ್ಲಿ ವಾಸಿಸಲಿಲ್ಲ. ಮದುವೆಯ ನಂತರ ಬಂಗಲೆಯನ್ನು ತಮ್ಮ ಹೆಂಡತಿಗೆ ಉಡುಗೊರೆಯಾಗಿ ನೀಡಿದರಂತೆ. ಅಲ್ಲಿ ಅವರ ಪತ್ನಿ ದಿನೇಶ್ ನಂದಿನಿ ಅವರೂ ವಾಸಿಸಲಿಲ್ಲ. ರಾಮಕೃಷ್ಣ ದಾಲ್ಮಿಯಾ ಅವರು ಹಸಿರು-ಬಿಳಿ ಧ್ವಜ ಇಳಿಸಿ ಗೋ ಹತ್ಯಾ ವಿರೋಧಿ ಚಳವಳಿಯ ಧ್ವಜವನ್ನು ಏರಿಸಿದ್ದರಂತೆ. ಜಿನ್ನಾ- ದಾಲ್ಮಿಯಾ ವೈಚಾರಿಕತೆಯಲ್ಲಿ ಪರಸ್ಪರ ಎರಡು ಭಿನ್ನ ಧ್ರುವಗಳಂತಿದ್ದರೂ ಅವರಲ್ಲಿ ಪ್ರಗಾಢ ಸ್ನೇಹವಿತ್ತಂತೆ. ಕೈಗಾರಿಕೋದ್ಯಮಿ ದಲ್ಮಿಯಾ ಕಟ್ಟರ್ ಹಿಂದೂವಾದಿ. ಖಾದಿಯನ್ನೇ ಉಡುತ್ತಿದ್ದರು. ಈರುಳ್ಳಿ-ಬೆಳ್ಳುಳ್ಳಿಯನ್ನೂ ತಿನ್ನದ ಸಂಪ್ರದಾಯಬದ್ಧ ಮನುಷ್ಯ.

ಅಚ್ಚರಿಯೆಂದರೆ ಕಟ್ಟಾ ಹಿಂದು ಸಂಪ್ರದಾಯಸ್ಥರಾಗಿದ್ದ ದಾಲ್ಮಿಯಾ ಅವರಿಗೆ ಆರು ಹೆಂಡರಿದ್ದರಂತೆ. ಜಿನ್ನಾ ಸಂಪೂರ್ಣವಾಗಿ ಅಸಾಂಪ್ರದಾಯಿಕ ಮುಸ್ಲಿಮರು. ಆಂಗ್ಲ ವಿದ್ಯಾಭ್ಯಾಸದಿಂದ ಬಂದ ಶಿಸ್ತು, ಆಡಂಬರ ಗಾಢವಾಗಿತ್ತು. ಠಾಕು-ಠೀವಿಯೆಲ್ಲ ಯುರೋಪಿಯನ್. ಸಾಯುವಾಗಲೂ ಅವರು ತಮ್ಮನ್ನು ಉಟ್ಟ ಪೈಜಾಮದಲ್ಲಿ ಒಯ್ಯಬಾರದೆಂದೂ ಒಳ್ಳೆ ಪೋಷಾಕಿನಲ್ಲಿ ಶವಯಾತ್ರೆಗೆ ಒಯ್ಯಬೇಕೆಂದು ಕೋರಿದ್ದರಂತೆ. ಊಟ, ಉಡುಗೆ, ತೊಡುಗೆ ಯಾವುದರಲ್ಲೂ ಅವರು ಸಂಪ್ರದಾಯಿಯಾಗಿರಲಿಲ್ಲವಂತೆ. ಕಲ್ಲು ಹೃದಯದ ಜಿನ್ನಾ ಅವರ ಪಾಶವೀಕೃತ್ಯಗಳನ್ನು ವಿರೋಧಿಸುತ್ತಲೇ ದಾಲ್ಮಿಯಾ ಅವರ ಒಡನಾಡಿಯಾಗಿದ್ದು ವಿಪರ್ಯಾಸವೇ ಸರಿ. ಸತ್ಯಾಗ್ರಹದ ಕಾಲದಲ್ಲಿ ಅನೇಕ ನೇತಾರರೊಂದಿಗೆ ಸಲುಗೆಯಿದ್ದ ದಾಲ್ಮಿಯ ಲೋಕೋಪಯೋಗಿ ಕಾರ್ಯಗಳಿಗೆ ಹೆಸರಾಗಿದ್ದಾರೆ. ದಾಲ್ಮಿಯ ’ಸುಳ್ಳು ಸಮಾಜವಾದಿತನʼವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಇಡಿ ದೇಶದ ಬಟವಾಡೆ ಮತ್ತು ಬಟವಾಡೆಯ ನಂತರದ ಅವಸ್ಥೆಗೆ ಜವಾಹರಲಾಲ್‌ ನೆಹರೂರ ಸ್ವಾರ್ಥ- ಮಹತ್ವಾಕಾಂಕ್ಷೆಗಳೇ ಕಾರಣವೆಂದು ನೇರವಾಗಿಯೇ ಹೀಗಳೆದಿದ್ದಾರೆ.

dalmia
ದಾಲ್ಮಿಯಾ

10 ಔರಂಗಬೇಜ್ ರೋಡಿನ ಜಿನ್ನಾ ಮನೆಯ ವಿವರಗಳು ಡೊಮಿನಿಕ್ ಲೆಪಿಯರ್ ತನ್ನ freedom at Midnight ಪುಸ್ತಕದಲ್ಲಿ ಮತ್ತು ಕ್ಯಾಥರೀನ್ ಫ್ರಾಂಕ್ ಳ ‘Indira’ ಪುಸ್ತಕದಲ್ಲೂ ಉಲ್ಲೇಖವಿದೆ. ಕ್ಯಾಥರೀನ್ ಳ ‘Indira’ ನನ್ನ ಹತ್ತಿರವಿದೆ. ಓದಿ ಬಹಳ ಕಾಲವಾಯ್ತು. ಹೆಚ್ಚು ನೆನಪಿಲ್ಲ. ಆ ಮನೆ ಯಾವುದೋ ಎಂಬೆಸಿ ಕಚೇರಿಯಾಗಿತ್ತು. ಈಗ ಏನಾಗಿದೆಯೋ ತಿಳಿದಿಲ್ಲ. ಮಾಜಿ ಹಣಕಾಸು ಸಚಿವ ಹಾಗೂ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್‌ ಸಿಂಗ್ ಅವರು ಜಿನ್ನಾ ಬಗ್ಗೆ ಬರೆದ ಪುಸ್ತಕದಲ್ಲೂ ಹತ್ತು ಔರಂಗಜೇಬ್ ಮನೆ ಹಾಗೂ ಸ್ವಾತಂತ್ರೋತ್ತರದ ಭಾರತದ ಕತೆ ಸುಳಿಯುತ್ತದೆ. ಭಾರತದ ಸ್ವಾತಂತ್ರೋತ್ತರದ ದಾರುಣ ಅವಸ್ಥೆಯ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ’ಫ್ರೀಡಂ ಅಟ್ ಮಿಡ್‍ನೈಟ್’ ವೆಬ್ ಸೀರೀಸ್‌ನಲ್ಲಿ ಮಹಾತ್ಮ ಗಾಂಧಿ ಹೇಳುತ್ತಾರೆ – “ಜಿನ್ನಾರನ್ನೇ ಸ್ವತಂತ್ರ್ಯ ಭಾರತದ ಪ್ರಧಾನಿ ಮಾಡಿ, ಸಮಸ್ಯೆಯೇ ಇರಲ್ಲ” ಎಂದು. ವಲ್ಲಭ ಭಾಯ್‌ ಪಟೇಲ್ ಮತ್ತು ನೆಹರೂ ಸಮ್ಮತಿಸುವುದಿಲ್ಲ. ಅದೇನೆ ಇರಲಿ, ಸ್ವಾತಂತ್ರ್ಯ ಪಡೆದ ಮರು ವರ್ಷವೇ ಜಿನ್ನಾ ಅವರಿಗೆ ಕ್ಷಯರೋಗ ಉಲ್ಬಣಿಸಿ, ತೀವ್ರ ಅನಾರೋಗ್ಯದಿಂದ ದೈವಾಧೀನರಾಗುತ್ತಾರೆ.

ನನ್ನಂತೆ ಉತ್ತರ ಭಾರತದಲ್ಲಿ ದೀರ್ಘಕಾಲ ನೆಲೆ ನಿಂತವರಿಗೆ ಬದುಕಿನ ಹಲವಾರು ತಿರುವುಗಳಲ್ಲಿ ಭಾರತ ದೇಶ ಬಟವಾಡೆಯಾದಾಗಿನ ಗದರ್ ಘಳಿಗೆಯ ಕರಾಳ ನೆರಳು ಬೆನ್ನುಬಿಡದು. ಇಲ್ಲಿನವರ ಬಾಯಿಂದ ಆ ಕಥೆಗಳನ್ನು ಕೇಳಿದರೇ ಜೀವ ತರಗುಡುತ್ತದೆ. ಎಷ್ಟೆಲ್ಲ ಕಳೆದುಕೊಂಡಿದ್ದಾರೆ, ಏನೆಲ್ಲ ಅನುಭವಿಸಿದ್ದಾರೆಂದು ಯೋಚಿಸಿಯೇ ಕಿಚ್ಚು ಹಚ್ಚಿದಂತಾಗುತ್ತದೆ. ಆ ಕಾಲದಲ್ಲಿ ಕಳೆದುಹೋದ ಮಾನವೀಯ ಮೌಲ್ಯಗಳು, ಹೋರಾಟದ ಬದುಕು, ಪರಿಣಾಮ ಸ್ವರೂಪವುಂಟಾದ ಸಾಮಾಜಿಕ – ಆರ್ಥಿಕ ಪಲ್ಲಟಗಳು ಆಗಾಗ ಕಾಡಿಸುತ್ತಿರುತ್ತವೆ. ಬೇರೆಯವರಿಗೆ ಹೇಗೋ ಗೊತ್ತಿಲ್ಲ. ನನ್ನ ಪಾಲಿಗಂತೂ ಬಹಳಷ್ಟು ಬಾರಿ ಒಂದಿಲ್ಲಾ ಒಂದು ಸಂದರ್ಭದಲ್ಲಿ ಧುತ್ತನೆ ಎದುರಾಗಿ, ನಾನೇ ಅನುಭವಿಸಿದಷ್ಟು ಯಾತನೆ ಆಗುತ್ತದೆ. ಅದು ಕಾಲ ಮಾಸದ ನೋವು ಮುಖಾಮುಖಿಯಾಗುವ ಸಂಕಟ. ಸ್ಥಳೀಯರು, ಹರಿಯಾಣ, ಯುಪಿ, ಬಿಹಾರ, ಮುಂತಾದವರು ಮುಲ್ತಾನಿಗಳನ್ನು, ರೆಫ್ಯೂಜಿಗಳನ್ನು ಎದುರೆದುರೇ ಬಾಯಿಗೆ ಬಂದಂತೆ ಕಾಲೆಳೆಯುತ್ತಾರೆ. ನಗೆಚಟಾಕಿಯ ಮಾತುಗಳು ಕೆಲವೊಮ್ಮೆ ವಿಪರೀತಕ್ಕೂ ಹೋಗುವುದಿದೆ. ಈ ವಿಷಯ ಇಲ್ಲೇ ನಿಲ್ಲಲಿ ದೇವರೇ ಅಂದುಕೊಳ್ಳುತ್ತೇನೆ.

ಖುಶ್ವಂತ್ ಸಿಂಗ್, ಅಮೃತಾ ಪ್ರೀತಂರಂತೆ ಅಲ್ಲಿ ಹುಟ್ಟಿ ಇಲ್ಲಿ ಬಂದು ಬದುಕಿದವರಿಗೆ ಎರಡು ದೇಶಗಳು ಎರಡು ಕಣ್ಣಿದ್ದಂತೆ. ಅಲ್ಲೂ ನಮ್ಮಂತೆ ಕಂದು ಬಣ್ಣದ ನಮ್ಮನ್ನೇ ಹೋಲುವ ಜನರಿದ್ದಾರೆ – ಎಂದ ಖುಶ್ವಂತ್ ಸಿಂಗರ ಕಡುಹಸಿರು ಬಣ್ಣದ ಬಾಗಿಲು ನೋಡಿದಾಗೆಲ್ಲ ಈ ಮಾತು ನೆನಪಾಗುತ್ತದೆ. ಆ ಹಾಲಾಹಲವನ್ನು ಕುಡಿದವರಿಗೇ ಗೊತ್ತು. ಏನನ್ನು ಕಳೆದುಕೊಂಡರು, ಏನನ್ನು ಪಡೆದುಕೊಂಡರೆಂದು. ಸ್ವಾತಂತ್ರ್ಯದ ನಂತರದ ದೆಹಲಿ ರೆಫ್ಯೂಜಿ ಕ್ಯಾಂಪ್‌ಗಳಿಂದ ತುಂಬಿತ್ತು. ಹಾಡಹಗಲೇ ರಕ್ತಪಾತ- ಕೊಲೆ-ಸುಲಿಗೆ ಸಾಮಾನ್ಯವಾಗಿತ್ತಂತೆ. ಹದ್ದು- ಕಾಗೆಗಳ ದಂಡು ಕಾಯುತ್ತಿರುತ್ತಿತ್ತಂತೆ. ಅಂದಿನ ಆ ಚಿತ್ರವನ್ನು ಕಂಡವರು ಸಾಯುವವರೆಗೂ ಮರೆಯಲಾರರು. ಆದರೂ ಮರೆತು ನಗುವುದನ್ನು ಕಾಲ ಕಲಿಸುತ್ತದೆ. ಇಲ್ಲಿ ನನಗಿಷ್ಟವಾಗುವುದು ಇದೇ ಜೀವಂತಿಕೆ!

Fathima jinna
ಫಾತಿಮಾ ಜಿನ್ನಾ

ಹೀಗೆ ಇಂಥದ್ದೇ ಒಂದು ಕಾಲಕ್ಕೆ ಆಗಿನ ಪಂಜಾಬದಲ್ಲಿದ್ದ ಗುಜರನ್ ವಾಲಾದಿಂದ (ಈಗ ಪಾಕಿಸ್ತಾನ್) ಕುಟುಂಬವೆಲ್ಲ ದೆಹಲಿ ಓಡಿಬಂದು ಈಗ ಮೋಹನ ಪಾರ್ಕಿನಲ್ಲಿ ಇನ್ನೂರು ಗಜ ಜಾಗೆಯಲ್ಲಿ ಮೂರಂತಸ್ತಿನ ಮನೆ ಮಾಡಿಕೊಂಡ ನಮ್ಮ ಸಹೋದ್ಯೋಗಿ (ಈಗಿಲ್ಲ) ಕೀಮತಿಲಾಲ್ ಇನ್ನೂ ಮರೆತಿಲ್ಲ. ಅವರ ಕುಟುಂಬದವರೆಲ್ಲ ಎಲ್ಲೋ ಎಲ್ಲೋ ಹೆಸರಿಲ್ಲದಂತೆ ಹೋಗಿದ್ದನ್ನು ಆಗಾಗ ಹೇಳುತ್ತಿರುತ್ತಾನೆ. ಕೀಮತೀಲಾಲ್‌ನ ಪೂರ್ವಜರು ತೊರೆದ ಗುಜರನ್ ವಾಲಾದಿಂದಲೇ ಅಮೃತಾ ಪ್ರೀತಂ ಕೂಡ ತನ್ನ ಉಡಿಯಲ್ಲಿ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ದೆಹಲಿಗೆ ಜೀವವುಳಿಸಿಕೊಂಡು ಪಾರಾಗಿ ಬಂದಿದ್ದನ್ನು ಓದಿದ್ದೇನೆ. ಒಮ್ಮೆ ನಮ್ಮ ಕಚೇರಿಯ ಚೋಪ್ರಾ ಹೇಳುತ್ತಿದ್ದರು. ನಿರಾಶ್ರಿತರಿಗೆ ವಸತಿ ಒದಗಿಸಿದಾಗ ಅವರಿಗೆ ಹಳೆ ದೆಹಲಿಯ ಒಂದು ದೊಡ್ದ ಬಂಗಲೆಯನ್ನೆ ಹಂಚಿಕೊಟ್ಟಿದ್ದರಂತೆ. ಆದರೆ, ವಾತಾವರಣ ಎಷ್ಟು ಭಯ ಹುಟ್ಟಿಸುವಂತಿತ್ತೆಂದರೆ ಸುತ್ತುಮುತ್ತಲು ಮನುಷ್ಯರ ಸುಳಿವಿದ್ದಿಲ್ಲ. ಸಾಕ್ಷಾತ್ ಭೂತ ಬಂಗಲೆಯೇ. ಸಾವಿನ ಸೂತಕ ಹೊದ್ದ ಇಡೀ ಊರಿನ ತುಂಬ ಹದ್ದುಗಳ ಹಾರಾಟ, ಕಾಗೆಗಳ ಕ್ರಾ,ಕ್ರಾ ಬಿಟ್ಟರೆ ಒಂದು ನರಪಿಳ್ಳೆಯೂ ಸುತ್ತಮುತ್ತಲೂ ಇದ್ದಿಲ್ಲವಂತೆ. ಅವರ ಅಜ್ಜಿ ಹೆದರಿ ಒಬ್ಬಳೇ ನಾನಿಲ್ಲಿರುವುದೇ ಇಲ್ಲ ಎಂದು ಬೇರೆಡೆ ತಮ್ಮ ಬಂಧು-ಬಳಗದವರಿದ್ದಲ್ಲಿ ಗುಡಚಾಪೆ ಕಟ್ಟಿಕೊಂಡು ಹೋದಳಂತೆ. ಈಗ ಚೋಪ್ರಾ ಆ ಆಸ್ತಿ ತಮ್ಮದಾಗಿ ಇದ್ದಿದ್ದರೆ ತಾವೀಗ ಎಲ್ಲಿಗೆಲ್ಲಿಗಿರುತ್ತಿದ್ದರೋ ಎಂದು ಹಳಹಳಿಸುತ್ತಾರೆ. ಸದ್ಯ ಲಕ್ಷ್ಮೀನಗರದಲ್ಲಿ ಪುಟ್ಟಮನೆ ಮಾಡಿಕೊಂಡಿದ್ದಾರೆ. ಈಗ ಅವರ ಮಗಳಿಗೆ ಮದುವೆ.

ಇದನ್ನೂ ಓದಿ ಸಾಮಾಜಿಕ ನ್ಯಾಯ ದಿನ | ದ್ರಾವಿಡ ಮಣ್ಣಲ್ಲಿ ‘ಸ್ವಾಭಿಮಾನ’ದ ಬೀಜ ಭಿತ್ತಿ ಫಸಲು ತೆಗೆದ ಪೆರಿಯಾರ್

ಎದುರಿಗೆ ಕತೆ ಕೇಳುವವರು ಹಿಂದೆ ಹಳಿಯುತ್ತಾರೆ. ಏನು ಕಡಿಮೆಯಾಗಿದೆ ಇವರಿಗೆ. ಎಲ್ಲ ಬರಿಗೈಯಲ್ಲಿ ಬಂದು ಈಗ ತಾವೇ ದಿಲ್ಲಿಯ ವಾರಸುದಾರರಾಗಿ ಕುಳಿತಿದ್ದಾರೆ. ಈ ದೇಶದ ತುಣುಕೊಂದರ ಎದೆಯನ್ನು ಸೀಳಿ ರಕ್ತದ ಮಡುವಿನಲ್ಲಿ ಬಿರಿದು ಅರಳಿದ ಬದುಕಿನ ಹೂಗಳು. ಕಾಲ ತೊಳೆದರೂ ಮಾಸದ ಗಾಯದ ಕಲೆಗಳು. ಒಂದು ಪ್ರಾಂತ್ಯದ, ಸಮಾಜದ, ಜನಾಂಗವೊಂದರ ಕಷ್ಟ ಕಾರ್ಪಣ್ಯಗಳಿಂದ ಅಪರಿಚಿತರೇ ಆಗುಳಿದ ನಮಗಿದು ಕೇವಲ ಒಂದು ಮಾತು, ಒಂದು ನಿಟ್ಟುಸಿರು ಅಷ್ಟೇ ಆಗಿ ಉಳಿಯುತ್ತದೆ.

ಸುಜಾನ್ ಸಿಂಗ್ ಪಾರ್ಕ್‌ನಿಂದ ಹೊರಟು ಔರಂಗಜೇಬ್ ರೋಡ್‌ ದಾಟುತ್ತಿರುವಾಗ ದಟ್ಟ ಹಸುರಿನಲ್ಲಿ ದೆಹಲಿಯ ಮಬ್ಬು ಮಸುಕಿನಲ್ಲಿ ಇಷ್ಟೆಲ್ಲ ಕುತೂಹಲ ಹುಟ್ಟಿಸಿದ್ದ ಹತ್ತು ನಂಬರಿನ ಬಂಗಲೆಗಾಗಿ ಕಣ್ಣು ಹುಡುಕತೊಡಗುತ್ತವೆ. ಹೆಸರನ್ನು ಯಾರು ಬೇಕಾದರೂ ಬದಲಿಸಿಕೊಳ್ಳಲಿ, ನನಗೆ ಮತ್ತು ನನ್ನಂತ ದೆಹಲಿಗರಿಗೆ ಇದು ಯಾವಾಗಲೂ ಔರಂಗಜೇಬ್ ರೋಡೇ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...

ದಿಲ್ಲಿ ಮಾತು | ಬೆಳಕಿನ ಬೆನ್ನೇರಿ ಹೋದ ಕತ್ತಲು, ಮತ್ತೆ ಮರಳದಂತೆ ಮುಚ್ಚಿದ ಕಬ್ಬಿಣದ ಬಾಗಿಲುಗಳು…

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್...

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....