- 1800-425-3553 ನೂತನ ಏಕೀಕೃತ ಸಹಾಯವಾಣಿ ಆರಂಭ
- ಸಚಿವರಿಂದ ಭೀಮಾ ಪಲ್ಸ್ ತೊಗರಿ ಬೇಳೆ ಬ್ರಾಂಡ್ ಬಿಡುಗಡೆ
ಕೃಷಿಗೆ ಸಂಬಂಧಿತ ಮಾಹಿತಿ, ಸಲಹೆ ಮಾರ್ಗದರ್ಶನ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಇಲಾಖೆಯ ಕೃಷಿ ಆಯುಕ್ತಾಲಯದಲ್ಲಿ ರೈತ ಕರೆ ಕೇಂದ್ರ ಉದ್ಘಾಟಿಸಿ, ನಂತರ ಸಂಗಮ ಸಭಾಂಗಣದಲ್ಲಿ 2023-24 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಮೂಲಕ ಭೀಮಾ ಪಲ್ಸ್ ತೊಗರಿ ಬೇಳೆ ಬ್ರಾಂಡ್ ಬಿಡುಗಡೆ ಮಾಡಿ ಮಾತನಾಡಿದರು.
“ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿಎಂ ಕಿಸಾನ್, ಕೆ ಕಿಸಾನ್, ಬೆಳೆ ಸಮೀಕ್ಷೆ ಮತ್ತಿತರ ವಿಷಯಗಳಲ್ಲಿ ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸುಲಭವಾಗಿ ಒದಗಿಸುವುದು ಏಕೀಕೃತ ರೈತ ಕರೆ ಕೇಂದ್ರದ ಉದ್ದೇಶ” ಎಂದರು.
“ಈ ಹಿಂದೆ ವಿವಿಧ ಯೋಜನೆಗಳಿಗೆ ಇದ್ದ 8 ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ
1800-425-3553 ನೂತನ ಏಕೀಕೃತ ಸಹಾಯವಾಣಿ ಕರೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ” ಎಂದು ಸಚಿವರು ವಿವರಿಸಿದರು.
“ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಇಲಾಖೆ ಮುಂದಾಗಿದೆ ಇದರ ಅಂಗವಾಗಿ ಭೀಮಾ ಫಲ್ಸ್ ಎಂಬ ಬ್ರಾಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
“ರೈತರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ. ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮದಲ್ಲಿಟ್ಟು ಸಮೀಕ್ಷೆ ನಡೆಸಬೇಕು” ಎಂದು ಅವರು ಹೇಳಿದರು.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್, ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ ಎಸ್ ರಮೇಶ್, ರೇಷ್ಮೆ ಅಭಿವೃದ್ಧಿ ಆಯುಕ್ತ ರಾಜೇಶ್ ಗೌಡ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೆಶಕ ಮಾಧುರಾಮ್ ಸೇರಿದಂತೆ ಇತರರು ಇದ್ದರು.