ಜೆನ್‌ ಝಡ್ ಪ್ರತಿಭಟನೆ: ಚೇತರಿಕೆಯತ್ತ ನೇಪಾಳ – ಭವಿಷ್ಯ ಬದಲಾವಣೆಯ ಸೂಚನೆ

Date:

Advertisements
ಭವಿಷ್ಯದಲ್ಲಿ 'ಭ್ರಷ್ಟಾಚಾರ ಮುಕ್ತ ನೇಪಾಳ' ನಿರ್ಮಾಣ ಮಾಡುವುದೇ ನಮ್ಮ ಗುರಿ ಮತ್ತು ಆದ್ಯತೆ ಎಂದು ಸುಶೀಲಾ ಕರ್ಕಿ ಘೋಷಿಸಿದ್ದಾರೆ. 'ಜೆನ್ ಝಡ್' ಆಂದೋಲನವು ನೇಪಾಳದ ಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು...

ರಾಜಕೀಯ ಅರಾಜಕತೆ ಮತ್ತು ಜೆನ್‌ ಝಡ್‌ ಪ್ರತಿಭಟನೆಗೆ ಗುರಿಯಾಗಿರುವ ನೇಪಾಳ ಇನ್ನೂ ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಯುವಜನರು ಭ್ರಷ್ಟಾಚಾರ, ಸಾಮಾಜಿಕ ಮಾಧ್ಯಮ ನಿಷೇಧ ಹಾಗೂ ಆರ್ಥಿಕ ಅಸಮಾನತೆಯ ವಿರುದ್ಧ ನಡೆಸಿದ ‘ಜೆನ್‌ ಝಡ್’ ಆಂದೋಲನವು ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರವನ್ನು ಉರುಳಿಸಿದೆ. ಎರಡು ದಿನದ ಪ್ರತಿಭಟನೆಯು ನೇಪಾಳದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅಲುಗಾಡಿಸಿದೆ. ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ನೇಪಾಳದ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನದಲ್ಲಿದ್ದಾರೆ. ಪ್ರವಾಸೋದ್ಯಮದ ಚೇತರಿಕೆ, ಸಂಸತ್ತು ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳ ಮರುನಿರ್ಮಾಣ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಶ್ರೀಲಂಕಾ, ಬಾಂಗ್ಲಾದೇಶದ ಬಳಿಕ ನೇಪಾಳವು ಯುವಜನರ ತೀವ್ರ ಆಕ್ರೋಶಕ್ಕೆ ತತ್ತರಿಸಿದೆ. ಕಳೆದ ಕೆಲ ವರ್ಷಗಳಿಂದ ನೇಪಾಳದಲ್ಲಿ ನಿರುದ್ಯೋಗವು 20.8% ದಾಟಿದೆ. ಭಷ್ಟ್ರಾಚಾರ ಮಿತಿಮೀರಿದೆ. ಬಡ ಮತ್ತು ಹಿಂದುಳಿದ ಯುವಜನರು ಉದ್ಯೋಗ ಹರಸಿ ನಾನಾ ದೇಶಗಳಿಗೆ ವಲಸೆ ಹೋಗುತ್ತಿದ್ದರೆ, ರಾಜಕಾರಣಿಗಳ ಮಕ್ಕಳು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ ದುರವಸ್ಥೆಯು ನೇಪಾಳದ ಬಹುಸಂಖ್ಯಾತರ ಬದುಕನ್ನು ದುಸ್ಥರಗೊಳಿಸಿದೆ. ಹೀಗಾಗಿ, ನೇಪಾಳದ ಯುವಜನರು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶ ಪಾರಂಪರ್ಯ ರಾಜಕಾರಣ, ನಿರುದ್ಯೋಗ ಹಾಗೂ ಆರ್ಥಿಕ ಅಸಮಾನತೆಯ ವಿರುದ್ಧ ದನಿ ಎತ್ತುತ್ತಿದ್ದರು. ಮಾಧ್ಯಮಗಳನ್ನು ತನ್ನ ಸಾಕು ನಾಯಿ ಮಾಡಿಕೊಂಡಿದ್ದ ಒಲಿ ಸರ್ಕಾರ, ಯುವಜನರ ದನಿಯನ್ನು ಹತ್ತಿಕ್ಕಲು ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿ ಸೆಪ್ಟೆಂಬರ್ 4ರಂದು ಆದೇಶ ಹೊರಡಿಸಿತು. ಈ ನಿಷೇಧವು ಯುವಜನರು ಬೀದಿಗಿಳಿಯುವಂತೆ ಮಾಡಿತು. ಸೆಪ್ಟೆಂಬರ್ 8 ಮತ್ತು 9– ಈ ಎರಡು ದಿನಗಳ ಕಾಲ ನಡೆದ ಯುವಜನರ ‘ಜೆನ್ ಝಡ್’ ಪ್ರತಿಭಟನೆಯು ನೇಪಾಳದ ಚಿತ್ರಣವನ್ನೇ ಬದಲಿಸಿದೆ.

ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ದೌರ್ಜನ್ಯ, ದಮನದಿಂದಾಗಿ ಸುಮಾರು 19 ಮಂದಿ ಪ್ರತಿಭಟನಾಕಾರರು ಜೀವ ಕಳೆದುಕೊಂಡಿದ್ದಾರೆ. ಕೆರಳಿದ ಪ್ರತಿಭಟನಾಕಾರರು ನಡೆಸಿದ ಪ್ರತಿದಾಳಿಯಿಂದಾಗಿ ಸಂಸತ್, ಸುಪ್ರೀಂ ಕೋರ್ಟ್, ಸಿಂಘ ದುರ್ಬಾರ್ (ಪ್ರಧಾನ ಕಚೇರಿ), ರಾಷ್ಟ್ರಪತಿ ನಿವಾಸ ಹಾಗೂ ಹಲವಾರು ರಾಜಕೀಯ ನಾಯಕರ ಮನೆಗಳಿಗೆ ಭಾರೀ ಹಾನಿಯಾಗಿದೆ. ಸುಮಾರು 25,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

ಎರಡು ದಿನಗಳ ಭೀಕರ ಪರಿಸ್ಥಿತಿಯನ್ನು ಎದುರಿಸಿದ ನೇಪಾಳದ ಪರಿಸ್ಥಿತಿ ಈಗ ತಿಳಿಗೊಳ್ಳಲಾರಂಭಿಸಿದೆ. ಸದ್ಯ, ಇನ್ನೂ ಹಲವು ಪ್ರಮುಖ ಪಟ್ಟಣಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ನೇಪಾಳ ಸೇನೆಯು ಕಾನೂನು-ಸುವ್ಯವಸ್ಥೆ ಕಾಪಾಡುವ ಕೆಲಸದಲ್ಲಿ ತೊಡಗಿದೆ. ವ್ಯಾಪಾರ-ವಹಿವಾಟುಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಸಾಮಾಜಿಕ ಮಾಧ್ಯಮದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಉದ್ವಿಗ್ನ ಪರಿಸ್ಥಿತಿಯ ವೇಳೆ, ಜೈಲುಗಳಿಂದ ಸುಮಾರು 15,000 ಖೈದಿಗಳು ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನೇಪಾಳದ ಪ್ರಮುಖ ಆದಾಯದ ಮೂಲವಾದ ಪ್ರವಾಸೋದ್ಯಮವು ಮತ್ತೆ ಪ್ರವಾಸಿಗರನ್ನು ಸೆಳೆಯಲು ಆರಂಭಿಸಿದೆ. ನೇಪಾಳದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಪಾಲು 8%ಕ್ಕೂ ಹೆಚ್ಚಿದ್ದು, ವರ್ಷದಲ್ಲಿ ಕನಿಷ್ಠ 12 ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರತಿಭಟನೆ ಮತ್ತು ಉದ್ವಿಗ್ನತೆಯಿಂದಾಗಿ ಪ್ರವಾಸಿ ತಾಣಗಳ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಸ್ಥಗಿತಗೊಳಿಸಲಾಗಿತ್ತು. ಪ್ರವಾಸಿಗರ ಸಂಖ್ಯೆಯು 30% ಕುಸಿತ ಕಂಡಿತ್ತು. ಇದೀಗ, ಬುಕಿಂಗ್‌ಗಳನ್ನು ಪುನರಾರಂಭಿಸಲಾಗಿದೆ.

ನೇಪಾಳ ಟೂರಿಸಂ ಬೋರ್ಡ್ (ಎನ್‌ಟಿಬಿ) ಪ್ರವಾಸಿ ತಾಣಗಳಲ್ಲಿ ‘ಪೂರ್ಣ ಸುರಕ್ಷತೆ’ಯನ್ನು ಘೋಷಿಸಿದೆ. ರದ್ದುಗೊಳಿಸಲಾಗಿದ್ದ ವೀಸಾಗಳನ್ನು ಉಚಿತವಾಗಿ ನವೀಕರಿಸುತ್ತಿದೆ. ನೇಪಾಳಿಗರು ಸಾಮಾಜಿಕ ಮಾಧ್ಯಮದಲ್ಲಿ ‘ನಾವು ಸುರಕ್ಷಿತವಾಗಿದ್ದೇವೆ. ಪ್ರವಾಸಿಗರಿಗೂ ಸಂಪೂರ್ಣ ಸುರಕ್ಷತೆ ಇರಲಿದೆ’ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎವರೆಸ್ಟ್, ಅನ್ನಪೂರ್ಣ ಟ್ರೆಕ್‌ಗಳು ಹಾಗೂ ಲುಂಬಿನಿ(ಬೌದ್ಧ ಕ್ಷೇತ್ರ)ಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿದೆ. ಗಮನಾರ್ಹವಾಗಿ, ನ್ಯೂಯಾರ್ಕ್ ಟೈಮ್ಸ್‌ನ 2025ರ ‘ಭೇಟಿ ನೀಡಬೇಕಾದ 52 ಸ್ಥಳ’ಗಳ (ಪ್ಲೇಸ್‌ ಟು ಗೋ) ಪಟ್ಟಿಯಲ್ಲಿ ಲುಂಬಿನಿ 9ನೇ ಸ್ಥಾನಲ್ಲಿದೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಲು ‘ಪೊಲೀಸ್-ಟೂರ್ ಆಪರೇಟರ್‌ಗಳು’ ಜಾರಿಯಲ್ಲಿವೆ ಎಂದು ಸರ್ಕಾರವು ಪ್ರಚಾರ ಮಾಡುತ್ತಿದೆ.

ಜೊತೆಗೆ, ಪ್ರತಿಭಟನೆ, ದಾಳಿ-ಪ್ರತಿದಾಳಿಗಳ ವೇಳೆ ಹಾನಿಯಾಗಿದ್ದ ಸುಮಾರು 100 ಸರ್ಕಾರಿ ಕಟ್ಟಡಗಳ ದುರಸ್ತಿ ಮತ್ತು ಮರುನಿರ್ಮಾಣ ಕೆಲಸಗಳು ಆರಂಭಗೊಂಡಿವೆ. ನೇಪಾಳ ಸಂಸತ್ (ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್) ಕಟ್ಟಡಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಪರಿಣಾಮ, ಸಂಸತ್ತು ಸಂಪೂರ್ಣವಾಗಿ ನಾಶಗೊಂಡಿದೆ. ಮೂಲಸೌಕರ್ಯ ಸಚಿವ ಕುಲ್‌ಮನ್ ಘಿಸಿಂಗ್ ಅವರು ಸಂಸತ್ ಆವರಣದಲ್ಲಿ ಪರಿಶೀಲನೆ ನಡೆಸಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲು ಮುಂದಾಗಿದ್ದಾರೆ. ಅವರು “ನಾವೇ ನಮ್ಮ ಕಟ್ಟಡಗಳನ್ನು ನಿರ್ಮಿಸೋಣ” ಅಭಿಯಾನವನ್ನೂ ಆರಂಭಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಎಥೆನಾಲ್ ಪೆಟ್ರೋಲ್ ಬಳಕೆ ಮೈಲೇಜ್ ಡ್ರಾಪ್ ಎಷ್ಟು? ಕೇಂದ್ರ ಸಚಿವ ಗಡ್ಕರಿಯ ಲೂಟಿ ಎಷ್ಟು…?

ಮರುನಿರ್ಮಾಣ ಕೆಲಸಗಳಿಗಾಗಿ ಸರ್ಕಾರಕ್ಕೆ ನೆರವು ನೀಡಲು ಹಣಕಾಸು ಸಚಿವಾಲಯವು ಖಾಸಗಿ ಖಾತೆಯನ್ನು ತೆರೆದಿದೆ. ಸಂಸತ್ತು, ಸುಪ್ರೀಂ ಕೋರ್ಟ್, ಸಿಐಬಿ, ಪೊಲೀಸ್ ಕಚೇರಿಗಳು ಹಾಗೂ ಹಲವಾರು ಮೂಲ ಸೌಕರ್ಯಗಳ ಮರುನಿರ್ಮಾಣಕ್ಕೆ 100 ಸಾವಿರ ಕೋಟಿ ರೂ.ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿಗಳಿಗೆ ನೆರವು ನೀಡಲು ಸರ್ಕಾರವು ನೇಪಾಳಿಗರಿಗೆ ಕರೆ ಕೊಟ್ಟಿದೆ.

ಇದೆಲ್ಲದರ ನಡುವೆ, ಪ್ರತಿಭಟನೆ ವೇಳೆ ಸಾವನ್ನಪ್ಪಿದ ಯುವಜನರು ಮತ್ತು ಜನರಿಗೆ ಗೌರವ ಸಲ್ಲಿಸಲು ನೇಪಾಳ ಸರ್ಕಾರವು ಸೆಪ್ಟೆಂಬರ್ 17ರಂದು ‘ರಾಷ್ಟ್ರೀಯ ಶೋಕ ದಿನ’ವನ್ನು ಆಚರಿಸಿದೆ. ಸಾವನ್ನಪ್ಪಿದವರ ಮೃತದೇಹಗಳನ್ನು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಇದೇ ವೇಳೆ, ಪ್ರಧಾನಿ ಸುಶೀಲಾ ಕರ್ಕಿ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.  

ನೇಪಾಳದಲ್ಲಿ ಹೊಸ ಸರ್ಕಾರದ ಆಯ್ಕೆಯಾಗಿ 2026ರ ಮಾರ್ಚ್‌ 5ರಂದು ಚುನಾವಣೆ ನಡೆಸಲು ಸರ್ಕಾರವು ತೀರ್ಮಾನಿಸಿದೆ. ದಿನಾಂಕ ನಿಗದಿ ಮಾಡಿದೆ. ಭವಿಷ್ಯದಲ್ಲಿ ‘ಭ್ರಷ್ಟಾಚಾರ ಮುಕ್ತ ನೇಪಾಳ’ ನಿರ್ಮಾಣ ಮಾಡುವುದೇ ನಮ್ಮ ಗುರಿ ಮತ್ತು ಆದ್ಯತೆ ಎಂದು ಸುಶೀಲಾ ಕರ್ಕಿ ಘೋಷಿಸಿದ್ದಾರೆ. ಭ್ರಷ್ಟಾಚಾರವನ್ನು ತೊಡೆದು ಹಾಕಲು ಎಲ್ಲ ರೀತಿಯಲ್ಲಿಯೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ‘ಜೆನ್ ಝಡ್’ ಆಂದೋಲನವು ನೇಪಾಳದ ಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ ಎಂದು ನಂಬಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ...

Download Eedina App Android / iOS

X