ಸ್ವಾತಂತ್ರ್ಯ ದಿನದಂದು ನಗರಸಭೆ ಕಚೇರಿ ಆವರಣದಲ್ಲಿ ಧ್ವಜಾರೋಹಣದ ವೇಳೆ ಅಂಬೇಡ್ಕರ್ ಭಾವಚಿತ್ರ ಇಡದೇ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯಸ್ವಾಮಿ ಅವಮಾನ ಮಾಡಿದ್ದಾರೆ. ಅವರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ರಾಯಚೂರು ಜಿಲ್ಲಾಧಿಕಾರಿಕಚೇರಿ ಎದುರು ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. “ಸ್ವಾತಂತ್ರ‍್ಯ ದಿನಾಚರಣೆ ದಿನ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜಿಸಬೇಕೆಂದು ಹೈಕೋರ್ಟ್ ಆದೇಶವಿದೆ. ದೇಶಾದ್ಯಂತ ಎಲ್ಲ ಕಡೆ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜಿಸುತ್ತಾರೆ. ಆದರೆ, ನಗರಸಭೆಯಲ್ಲಿ ಮಾತ್ರ ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಪೌರಾಯುಕ್ತ ಗುರುಸಿದ್ದಯ್ಯಸ್ವಾಮಿ ಅವರು ಅವಮಾನ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಗರಸಭೆಯಲ್ಲಿ ಕೇವಲ ಮಹಾತ್ಮ ಗಾಂಧಿ ಅವರ ಭಾವಚಿತ್ರ ಇಟ್ಟು ಧ್ವಜಾರೋಹಣ ಮಾಡಿದ್ದು, ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ್ದಾರೆ. ಪೌರಾಯುಕ್ತ ಗುರುಸಿದ್ದಯ್ಯಸ್ವಾಮಿ ಅವರನ್ನು ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡ ಎಸ್. ಮಾರೆಪ್ಪ ವಕೀಲ, ರವೀಂದ್ರನಾಥ ಪಟ್ಟಿ, ಜೆ.ಬಿ. ರಾಜು, ಹೇಮರಾಜ ಅಸ್ಕಿಹಾಳ, ಎಂ.ಆರ್.ಬೇರಿ, ಜನಾ೯ಧನ ಹಳ್ಳಿಬೆಂಚಿ, ಎಸ್. ರಾಜು, ಅನಿಲ್‌ಕುಮಾರ್, ರಾಘವೇಂದ್ರ ಬೋರಡ್ಡಿ, ರಾಜುಪಟ್ಟಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.