- ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗಂಭೀರ ಆರೋಪ
- ‘ಸಿಎಂ ಸಭೆ ಕರೆದರೆ, ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ಕೊಡುತ್ತೇವೆ’
ರಾಜ್ಯದಲ್ಲಿ ಬಡವರಿಗೆ ನೀಡುವ ಪಡಿತರ ಮೇಲೂ ಕಮಿಷನ್ ಭೂತ ಆವರಿಸಿದ್ದು, ಪ್ರತಿ ಕಾರ್ಡಿಗೂ ಇಂತಿಷ್ಟು ಕಮಿಷನ್ ಕೊಡಬೇಕು ಎಂದು ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಗುತ್ತಿಗೆದಾರರ ಕಮಿಷನ್ ಆರೋಪ ಮತ್ತು ಸಚಿವರ ವಿರುದ್ಧ ಶಾಸಕರ ಅಸಮಾಧಾನದ ಪತ್ರ ಪ್ರಕರಣ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪ ಸರ್ಕಾರದ ಅಧಿಕಾರಿಗಳ ಮೇಲೆ ಕೇಳಿಬಂದಿದೆ.
ಮಂಡ್ಯದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, “ಒಂದು ಅಂಗಡಿಯಿಂದ 500 ಕಾರ್ಡ್ ಇದ್ದರೆ ₹3000 ರೂ. ಕಮಿಷನ್, 800-1000 ಕಾರ್ಡ್ಗಳು ಇದ್ದರೆ ₹4000 ರೂ. ಕಮಿಷನ್ ಬೇಡಿಕೆ ಇಟ್ಟಿದ್ದಾರೆ. ಮೇಲಧಿಕಾರಿಗಳು ಟಾರ್ಗೆಟ್ ಮಾಡಿ ತೊಂದರೆ ಕೊಡುತ್ತಿದ್ದಾರೆ. ಕಮಿಷನ್ಗೆ ಬೇಡಿಕೆ ಇಟ್ಟಿರುವ ಅಧಿಕಾರಿ ವಿರುದ್ಧ ತನಿಖೆ ನಡೆಸಿ ಸಸ್ಪೆಂಡ್ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
“ಫುಡ್ ಶಿರಸ್ತೇದಾರ್ ಕಿರುಕುಳ ಕೊಡುತ್ತಿರುವ ಬಗ್ಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಿಂದ ದೂರು ಬಂದಿತ್ತು. ಹೀಗಾಗಿ ತಿಂಗಳ ಹಿಂದೆಯೇ ನಾವು ಸಭೆ ಕೂಡ ಮಾಡಿದ್ದೇವೆ. ಕೃಷ್ಣಮೂರ್ತಿ ಎಂಬ ವ್ಯಕ್ತಿ ಗೋದಾಮು ಬಳಿ ಮಾಲೀಕರಿಗೆ ಧಮ್ಕಿ ಹಾಕಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಮಂತ್ರಿಗಳ ಗಮನಕ್ಕೆ ತಂದಿದ್ದೇವೆ” ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆ ‘ಅನ್ನಭಾಗ್ಯ’ ಹಳ್ಳ ಹಿಡಿಯೋದು ಬೇಡ. ಸಿಎಂ ಅವರು ಕೂಡಲೇ ಸಭೆ ಕರೆದರೆ, ಭ್ರಷ್ಟ ಅಧಿಕಾರಿಗಳ ಬಗ್ಗೆ ನಾವು ಮಾಹಿತಿ ಕೊಡುತ್ತೇವೆ” ಎಂದು ಹೇಳಿದರು.