ಏಷ್ಯಾದ ಮೊದಲ ‘ಲೋಕೋಮೋಟಿವ್ ಪೈಲಟ್’ (ರೈಲು ಚಾಲಕಿ) ಸುರೇಖಾ ಯಾದವ್ ಅವರು ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದಾರೆ. ಕಳೆದ 36 ವರ್ಷಗಳಿಂದ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಸುರೇಖಾ ಅವರು ಸಹೋದ್ಯೋಗಿಗಳು ಗುರುವಾರ ಸಂಜೆ ಸನ್ಮಾನಿಸಿದ್ದಾರೆ. ಅವರ ಸೇವೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುರೇಖಾ ಅವರ ನಿವೃತ್ತಿ ಬಗ್ಗೆ ರೈಲ್ವೇ ಇಲಾಖೆಯು ಗುರುವಾರ ಮಧ್ಯಾಹ್ನ ಘೋಷಿಸಿತು. “ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಅವರು 36 ವರ್ಷಗಳ ಅದ್ಭುತ ಸೇವೆ ಸಲ್ಲಿಸಿದ್ದು, ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ” ಎಂದು ಟ್ವೀಟ್ ಮಾಡಿದೆ.
“ಸುರೇಖಾ ಅವರು ನಿಜವಾದ ಮಾರ್ಗದರ್ಶಕಿ. ಅವರು ಎಲ್ಲ ಅಡೆತಡೆಗಳನ್ನು ಮೀರಿ ಸೇವೆ ಸಲ್ಲಿಸಿದ್ದು, ಅಸಂಖ್ಯಾತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಗುರಿಮುಟ್ಟದ ಯಾವುದೇ ಕನಸುಗಳಿಲ್ಲ. ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರ ವೃತ್ತಿ ಪ್ರಯಾಣವು ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿ ಶಾಶ್ವತವಾಗಿ ಉಳಿಯುತ್ತದೆ” ಎಂದು ಇಲಾಖೆ ಹೇಳಿದೆ.
ನಿವೃತ್ತಿ ಕುರಿತು ಇಲಾಖೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ, ದೆಹಲಿಯ ಹಜರತ್ ನಿಜಾಮುದ್ದೀನ್‌ನಿಂದ ಮುಂಬೈನ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ರಾಜಧಾನಿ ಎಕ್ಸ್‌ಪ್ರೆಸ್ ಚಲಾಯಿಸಿಕೊಂಡು ಬಂದ ಸುರೇಖಾ ಅವರನ್ನು ಅವರ ಸಹ ರೈಲು ಚಾಲಕರು, ಇಲಾಖೆ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಸನ್ಮಾನಿಸಿದ್ದಾರೆ.
ಉದ್ಯಮಿ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸುರೇಖಾ ಅವರಿಗೆ ಅಭಿನಂದನೆ ಸಲ್ಲಿಸಿ, ಟ್ವೀಟ್ ಮಾಡಿದ್ದಾರೆ. “ದೀರ್ಘ ವೃತ್ತಿಜೀವನದ ಮೂಲಕ ಜನರಿಗೆ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿದ್ದೀರಿ. ನಿಮಗೆ ನನ್ನ ಅಭಿನಂದನೆಗಳು. ಅಪ್ರತಿಮ ಬದಲಾವಣೆಗೆ ನಾಂದಿ ಹಾಡಿದ ನಿಮ್ಮಂತಹವರನ್ನು ಗೌರವಿಸುವುದು ಮತ್ತು ನಿಮ್ಮ ಕೊಡುಗೆಗಳನ್ನು ನೆನಪಿಟ್ಟುಕೊಳ್ಳಬೇಕು” ಎಂದು ಹೇಳಿದ್ದಾರೆ.
ಸುರೇಖಾ ಅವರು ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದವರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ರೈಲ್ವೇ ಇಲಾಖೆಯಲ್ಲಿ ತರಬೇತಿ ಸಹಾಯಕ ಲೋಕೋ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ ಅವರು, ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಎಲ್ಲ ರೀತಿಯ ಅಡೆತಡೆಗಳನ್ನು ದಾಟಿ, ಉನ್ನತ ಸ್ಥಾನಕ್ಕೆ ಬಂದವರು. ಮಾತ್ರವಲ್ಲ, ಸುದೀರ್ಘ ಸೇವೆ ಸಲ್ಲಿಸಿದವರು.
ಏಷ್ಯಾ ಖಂಡದ ಮೊದಲ ಲೋಕೋಮೋಟಿವ್ ಪೈಲಟ್ ಎಂಬ ಹೆಗ್ಗಳಿಕೆಯೂ ಸುರೇಖಾ ಅವರದ್ದು. ತಮ್ಮ ಸಾಧನೆಗಳಿಗಾಗಿ, ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.