ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ “ಲಿಂಗಾಯತ” ಹಾಗೂ ಜಾತಿ ಕಾಲಂನಲ್ಲಿ ತಮ್ಮ ಒಳಪಂಗಡದ ಹೆಸರನ್ನು ಬರೆಯಿಸಿಕೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಕರೆ ನೀಡಿದರು.
ಬೆಳಗಾವಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಮೀಕ್ಷೆ ಹೆಸರಿನಲ್ಲಿ ಜಾತಿಗಣತಿ ನಡೆಯುತ್ತಿದೆ. ಹೀಗಾಗಿ ಧರ್ಮದ ಕಾಲಂ 8ರ ಕ್ರಮಾಂಕ 11ರ ‘ಇತರೆ’ ವಿಭಾಗದಲ್ಲಿ ‘ಲಿಂಗಾಯತ’ ಎಂದು ನಮೂದಿಸಬೇಕು. ಈ ಕುರಿತು ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಎಲ್ಲ ಬಸವಪರ ಸಂಘಟನೆಗಳು ಏಕಮತದಿಂದ ನಿರ್ಧಾರ ತೆಗೆದುಕೊಂಡಿವೆ” ಎಂದರು.
ಅವರು ಮುಂದುವರಿದು, “ವಿವಿಧ ಒಳಪಂಗಡದವರು ಲಿಂಗಾಯತ ಎಂದು ಬರೆಯಿಸಿದರೂ ಮೀಸಲಾತಿ ಸೌಲಭ್ಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸಹ ಇದೆ. 2018ರ ಮಾರ್ಚ್ನಲ್ಲೇ ರಾಜ್ಯ ಸರ್ಕಾರ ಲಿಂಗಾಯತವನ್ನು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮವೆಂದು ಘೋಷಿಸಿ ಕೇಂದ್ರಕ್ಕೆ ವರದಿ ಕಳುಹಿಸಿತ್ತು. ಕೇಂದ್ರದ ಅನುಮೋದನೆ ಬಂದರೆ ಅದು ಜಾರಿಗೆ ಬರುತ್ತದೆ” ಎಂದರು.
ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕೆಲವು ಹಿಂದೂ ಉಪಜಾತಿಗಳನ್ನು ಕ್ರೈಸ್ತ ಪಟ್ಟಿಯಲ್ಲಿ ತೋರಿಸಿರುವುದನ್ನು ಅವರು ಆಕ್ಷೇಪಿಸಿದರು. “ಸರ್ಕಾರ ಇದನ್ನು ಸರಿಪಡಿಸಲಿದೆ ಎಂದು ನಂಬಿದ್ದೇವೆ. ಇಲ್ಲದಿದ್ದರೆ ಹೋರಾಟಕ್ಕೆ ಕೈಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ ಮಳಗಲಿ, ಪ್ರವೀಣ ಚಿಕಲಿ, ಸಿ.ಎಂ. ಬೂದಿಹಾಳ ಇತರರು ಉಪಸ್ಥಿತರಿದ್ದರು.