ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ, ಬಣಗಳ ನಡುವಿನ ತಾಕಲಾಟ ತೀವ್ರಗೊಂಡಿದೆ. ಹುಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಸಭೆಯಲ್ಲಿ ಏಳು ಮತಗಳು ಜಾರಕಿಹೊಳಿ ಬಣದ ಪಾಲಾಗಿವೆ.
ಸಭೆಯಲ್ಲಿ ಸಂಘದ ಪ್ರತಿನಿಧಿಯಾಗಿ ಮತ ಚಲಾಯಿಸಲು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸಗೌಡ ಶಿವಗೌಡ ಪಾಟೀಲ್ ಅವರಿಗೆ ಸಮ್ಮತಿ ನೀಡಲಾಯಿತು. ಇದರೊಂದಿಗೆ ಸಂಘವು ಅಧಿಕೃತವಾಗಿ ಜಾರಕಿಹೊಳಿ ಬಣದ ತೆಕ್ಕೆಗೆ ಜಾರಿದಂತಾಯಿತು.
ಮೊದಲು ಸಂಘದ ಅಧ್ಯಕ್ಷರು ತಮ್ಮ ನಾಲ್ಕು ನಿರ್ದೇಶಕರೊಂದಿಗೆ ಹೊರಬಂದು ಕತ್ತಿ–ಪಾಟೀಲ್ ಬಣಕ್ಕೆ ಬೆಂಬಲ ಕೋರಿದರೂ, ಉಳಿದವರು ಜಾರಕಿಹೊಳಿ ಪರ ನಿಂತರು. ನಂತರ ಜಾರಕಿಹೊಳಿ ಬೆಂಬಲಿತ ನಿರ್ದೇಶಕರು ಹೊರಬಂದು ತಾವು ಆ ಬಣದ ಪರವೇ ಮತ ಚಲಾಯಿಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಮುಖಂಡರಾದ ಕಿರಣಸಿಂಗ್ ರಜಪೂತ್, ಮೌನೇಶ್ ಪೋತದಾರ್, ಬಾರ್ಚಿ, ಸಲಿಂ ಕಳಾವಂತ, ಚಂದು ಗಂಗನ್ನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದು ಪಾಟೀಲ್, ತಮ್ಮಣ್ಣಗೌಡ ಪಾಟೀಲ್, ಮಾರುತಿ ಪವಾರ್, ಬ್ಯಾಳಿ ಬಸು, ಸೋಮು ಮಠಪತಿ, ಶಿವರಾಜ ನಾಯಿಕ, ಅರವಿಂದ ದೇಶಪಾಂಡೆ, ಅಜ್ಜಪ್ಪ ಅಳವಡೆ, ಮಾಜಿ ಅಧ್ಯಕ್ಷ ಬಸವರಾಜ ನಾಯಿಕ ಸೇರಿದಂತೆ ಹಲವರು ಹಾಜರಿದ್ದರು.
ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.