ಮಹಾರಾಷ್ಟ್ರದಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಆದರೆ, ಉತ್ತರ ಭಾರತದಲ್ಲಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಾನು ಬ್ರಾಹ್ಮಣ ಸಮುದಾಯದವನು. ದೇವರ ದಯೆಯಿಂದಾಗಿ ಮೀಸಲಾತಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಮ್ಮ ಸಮುದಾಯಕ್ಕೆ ಬಂದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ತಮ್ಮ ಬ್ರಾಹ್ಮಣಿಕೆ ಮತ್ತು ಮೇಲ್ಪಂಕ್ತಿಯ ಅಹಂಅನ್ನು ಪ್ರದರ್ಶಿಸಿದ್ದಾರೆ.
ಮರಾಠಾ, ಒಬಿಸಿ ಮತ್ತು ಬಂಜಾರ ಮೀಸಲಾತಿ ವಿಚಾರವು ಮಹಾರಾಷ್ಟ್ರದಲ್ಲಿ ಭಾರೀ ಹೋರಾಟ, ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಆಯಾಮವನ್ನು ಪಡೆದುಕೊಂಡಿವೆ. ಇದೇ ಸಮಯದಲ್ಲಿ, ನಿತಿನ್ ಗಡ್ಕರಿ ಅವರು ಬ್ರಾಹ್ಮಣ್ಯದ ಹೆಗ್ಗಳಿಕೆ ಮತ್ತು ಮೀಸಲಾತಿ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ.
ನಾಗ್‌ಪುರದಲ್ಲಿ ನಡೆದ ಹಲ್ಬಾ ಫೆಡರೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, “ಬ್ರಾಹ್ಮಣ ಸಮುದಾಯಕ್ಕೆ ಮೀಸಲಾತಿ ಸಿಗದೇ ಇರುವುದು ದೇವರ ಆಶೀರ್ವಾದವೆಂದು ಭಾವಿಸುತ್ತೇನೆ. ಯಾವುದೇ ವ್ಯಕ್ತಿಯ ಪ್ರಾಮುಖ್ಯತೆಯನ್ನು ಅವರ ಜಾತಿ, ಪಂಗಡ, ಧರ್ಮ ಅಥವಾ ಲಿಂಗದಿಂದ ನಿರ್ಧರಿಸಲಾಗುವುದಿಲ್ಲ. ಬದಲಾಗಿ, ಅವರ ಗುಣಗಳು ಮತ್ತು ಸಾಧನೆಗಳಿಂದ ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
“ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯವು ಪ್ರಾಮುಖ್ಯತೆ ಹೊಂದಿದೆ. ಇಲ್ಲಿ, ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಆದರೆ, ಬಿಹಾರ, ಉತ್ತರ ಪ್ರದೇಶದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ದುಬೆಗಳು, ತ್ರಿಪಾಠಿಗಳು ಹಾಗೂ ಮಿಶ್ರಾ ರೀತಿಯ ಬ್ರಾಹ್ಮಣ ಸಮುದಾಯಗಳು ಗಣನೀಯ ಸಾಮಾಜಿಕ ಮತ್ತು ರಾಜಕೀಯ ಪ್ರಭಾವ ಹೊಂದಿವೆ” ಎಂದಿದ್ದಾರೆ.