ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಭಕ್ತರಿಗಾಗಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಸೆಪ್ಟೆಂಬರ್ 22ರಂದು ಸಂಜೆ ಮೊದಲ ಘಟ್ಟ ಸ್ಥಾಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 1ರಂದು ಆಯುಧ ಪೂಜೆ ನಡೆಯಲಿದ್ದು, ಅಕ್ಟೋಬರ್ 2ರಂದು ಬನ್ನಿ ಮುಡಿಯುವ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಒಂಭತ್ತು ದಿನಗಳಲ್ಲಿ ದೇವಿಗೆ ಸಾವಿರಾರು ಸೀರೆಗಳ ಅಲಂಕಾರ ನಡೆಯಲಿದ್ದು, ಲಕ್ಷಾಂತರ ಭಕ್ತರು ಗುಡ್ಡಕ್ಕೆ ಆಗಮಿಸುವ ನಿರೀಕ್ಷೆಯಿದೆ.
“ದೇವಿಗೆ ದೀಪಕ್ಕೆ ಎಣ್ಣೆ ಹಾಕುವುದು ಸಂಪ್ರದಾಯ. ಇದಕ್ಕಾಗಿ ಗರ್ಭಗುಡಿ ಎದುರು ಬೃಹತ್ ದೀಪ ಅಳವಡಿಸಲಾಗಿದೆ. ದಟ್ಟಣೆ ಕಾರಣದಿಂದ ಒಳಗೆ ಹೋಗಲು ಸಾಧ್ಯವಾಗದ ಭಕ್ತರು ಆವರಣದಲ್ಲಿನ ದೀಪಗಳಿಗೆ ಎಣ್ಣೆ ಹಾಕಬಹುದು” ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಗುಡ್ಡಕ್ಕೆ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್. ಗುಡೆನ್ನವರ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.