ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಗ್ರಾಮದ ವಾರ್ಡ್-2ರಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಕಾಲೋನಿಯ ನಿವಾಸಿಗಳು ಪರದಾಡುತ್ತಿದ್ದು, ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ʼಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಕಂಡಿಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿದು ಜನರಿಗೆ ಓಡಾಡಲು ಪರದಾಡುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ರಸ್ತೆ, ಚರಂಡಿ ಅಧ್ವಾನದಿಂದ ಕೆಸರು ಗದ್ದೆಯಂತಾಗುವ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ರಸ್ತೆ, ಚರಂಡಿಯ ಅವ್ಯವಸ್ಥೆಯಿಂದ ಶಾಲಾ ಮಕ್ಕಳು, ವೃದ್ಧರಿಗೆ ತೀವ್ರ ತೊಂದರೆ ಆಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಚುನಾವಣೆ ವೇಳೆ ರಸ್ತೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ತದನಂತರ ಇತ್ತ ತಿರುಗಿಯೂ ನೋಡಿಲ್ಲ. ಗ್ರಾಮ ಪಂಚಾಯತಿ ಸದಸ್ಯರ ಅವಧಿ ಮುಗಿಯುತ್ತಿದ್ದರೂ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿಜಯಲಕ್ಷ್ಮಿ, ಜ್ಯೋತಿ, ಕವಿತಾ, ಲಕ್ಷ್ಮಿ, ಕೃಷ್ಣಬಾಯ್, ಸಂತೋಷ್, ಗೋಪಾಲ್, ಗುರುನಾಥ ಮತ್ತಿತರರು ಇದ್ದರು.
ವರದಿ ಮಾಹಿತಿ : ಲೋಕೇಶ ಕಾಂಬಳೆ, ಸಿಟಿಜನ್ ಜರ್ನಲಿಸ್ಟ್