ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಆಕ್ರೋಶಗೊಂಡ ಯುವಕರು ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.
ಕುಡಚಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಸುಮಾರು 5 ಟನ್ ಗೋಮಾಂಸ ಸಾಗಿಸಲಾಗುತ್ತಿತ್ತು. ಖಚಿತ ಸುಳಿವಿನ ಮೇರೆಗೆ ಹಿಂದೂ ಕಾರ್ಯಕರ್ತರು ನಾಲ್ಕು ಲಾರಿಗಳ ಪೈಕಿ ಒಂದನ್ನು ತಡೆದು ವಿಚಾರಣೆ ನಡೆಸಿದಾಗ ಗೋಮಾಂಸ ಸಾಗಾಟ ಪತ್ತೆಯಾಯಿತು. ಇದರಿಂದ ಉದ್ರಿಕ್ತಗೊಂಡ ಯುವಕರು ತಕ್ಷಣವೇ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಥಣಿ ವಲಯ ಡಿವೈಎಸ್ಪಿ ಹಾಗೂ ಕಾಗವಾಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬೆಂಕಿಗೆ ಆಹುತಿಯಾಗುತ್ತಿದ್ದ ವಾಹನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದ್ದು, ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.