ಕೇವಲ ಗಮ್ಯ ಸ್ಥಾನವಷ್ಟೇ ಪ್ರಮುಖವಲ್ಲ; ಸಾಗುವ ದಾರಿಯೂ ಬಹಳ ಮುಖ್ಯ ಎನ್ನುವ ಮಾತಿದೆ. ಸರಕಾರ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಲಕ್ಷ ಲಕ್ಷ ಖರ್ಚು ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಆದರೆ, ಕೆಲವೊಮ್ಮೆ ಇದರ ಸೌಲಭ್ಯ ಇದ್ದೂ ಇಲ್ಲದಂತಾಗಿಬಿಡುತ್ತದೆ. ಅದಕ್ಕೆ ಸ್ಪಷ್ಟ ಉದಾಹರಣೆಯಂತೆ ಗದಗ ಜಿಲ್ಲೆಯಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾರಿಯೇ ಇಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೋಗಿಗಳು ಆಸ್ಪತ್ರೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ವೈದ್ಯರು ಕೂಡ ಅದರಿಂದ ಹೊರತಾಗಿಲ್ಲ.
ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾರಿಯೇ ಇಲ್ಲದಂತಾಗಿದೆ. ಸುಮಾರು ಹತ್ತು-ಹನ್ನೆರಡು ವರ್ಷಗಳಿಂದಲೂ ಈ ಆರೋಗ್ಯ ಕೇಂದ್ರಕ್ಕೆ ರಸ್ತೆ ಇಲ್ಲ. ಗ್ರಾಮದ ಜನರು ಚಿಕಿತ್ಸೆ ಪಡೆಯಲು ಅನಿವಾರ್ಯವಾಗಿ ಹಳ್ಳದ ದಾರಿಯಲ್ಲಿ ಹೋಗಬೇಕು. ಈ ದಾಲಿಯಲ್ಲಿ ರಾಶಿ ರಾಸಿ ಮುಳ್ಳು, ಗಿಡ-ಗಂಟಿಗಳು ತುಂಬಿಹೋಗುವುದರಿಂದ ವೃದ್ಧರು, ಮಕ್ಕಳು, ಗರ್ಭಿಣಿ-ಬಾಣಂತಿಯರು ಓಡಾಡಲು ತೀರಾ ದುಸ್ತರವಾಗಿದೆ.
ಗ್ರಾಮದ ಯಲ್ಲಪ್ಪ ಮು. ಹಂಚಿನಾಳ ಅವರ ಸ್ಮರಣಾರ್ಥಿವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಗ್ರಾಮದ ಮುದುಕಪ್ಪ ಯ. ಹಂಚಿನಾಳ, ಲಕ್ಷ್ಮವ್ವ ಮು. ಹಂಚಿನಾಳ ಕುಟುಂಬಸ್ಥರು ಮೂರುವರೆ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಇಲ್ಲಿಯ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ ಅವರ ನಿಸ್ವಾರ್ಥ ಸೇವೆಯನ್ನು ನಗಣ್ಯವಾಗುವಂತೆ ಮಾಡಿದೆ.
ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ, ತಪಾಸಣಾ ಸಲಕರಣೆಗಳು, ಆರು ಹಾಸಿಗೆಯುಳ್ಳ ಬೆಡ್ ಎಲ್ಲ ರೀತಿಯ ಮೂಲ ಸೌಕರ್ಯಗಳಿವೆ. ಆದರೆ ರಸ್ತೆಯೇ ಇಲ್ಲ. ಗ್ರಾಮದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಇರುವ ಆಸ್ಪತ್ರೆಗೆ ಹಳ್ಳದ ದಾರಿಯಲ್ಲಿಯೇ ಸಾಗಬೇಕು. ಕೆಸರು, ಹರಿಯುವ ಗಟಾರದ ನೀರು, ಮಣ್ಣಿನ ಹುದುಗಿನಲ್ಲಿಯೇ ವೈದ್ಯರು, ಸಿಬ್ಬಂದಿಗಳು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ನಡೆದು ಆಸ್ಪತ್ರೆ ತಲುಪುತ್ತಾರೆ.

ಮಳೆಯಾದರೆ ಈ ಆಸ್ಪತ್ರೆಗೆ ಹೋಗುವ ಹಳ್ಳದ ದಾರಿ ತೀರಾ ಹದಗೆಟ್ಟು ಹೋಗುತ್ತದೆ. ಗ್ರಾಮದ ಜನರು, ವೃದ್ಧರು, ಮಹಿಳೆಯರು ಅನಾರೋಗ್ಯದಿಂದ ತಪಾಸಣೆ ಮಾಡಿಸಿಕೊಳ್ಳಲು ಹೋಗುವಾಗ ಬಿದ್ದು-ಎದ್ದು ಹೋಗುವಷ್ಟರಲ್ಲಿ ಇನ್ನಷ್ಟು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರು ಇತ್ತ ಕಣ್ಣು ಹಾಯಿಸಿಲ್ಲ. ರಸ್ತೆ ಸರಿ ಮಾಡುವ ಪ್ರಯತ್ನವನ್ನೂ ಮಾಡದಿರುವುದು ದುರಂತ.
ಈ ಕುರಿತು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ಅಬ್ದುಲ್ ಸಾಬ್ ಮಾತನಾಡಿ, “ನನಗೆ ಎಪ್ಪತ್ತು ವರ್ಷ ಆಗಿದೆ. ಹತ್ತು ವರ್ಷದಿಂದ ದವಾಖಾನಿಗೆ ಬರ್ತಿದ್ದೀನಿ. ಗಟಾರ ನೀರು, ರಚ್ಚು, ಹುದುಗಿನ್ಯಾಗ ಸಿಕ್ಕೊಂಡು ಬಿದ್ದು ಎದ್ದು ಬರ್ತೀವಿ. ಯಾವ ಶಾಸಕ, ಅಧಿಕಾರಿನೂ ಈ ದವಾಖಾನೆಗೆ ರಸ್ತೆ ಮಾಡಿಸ್ತಿಲ್ಲ. ಯಾರರ ದವಾಖಾನಿಗೆ ಬರುವಾಗ ಬಿದ್ದು ಸತ್ತ ಮ್ಯಾಲ್ ರಸ್ತೆ ಮಾಡಿಸ್ತಾರೇನೋ?” ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಷಿಯನ್ ದಿವಾಕರ ಜೆ ಮಾತನಾಡಿ, “ನಾನು ಈಗ ಮೂರು ತಿಂಗಳು ಆತು ಇಲ್ಲಿಗೆ ವರ್ಗಾವಣೆಯಾಗಿ ಬಂದು. ಈ ಹಳ್ಳದ ಗಟಾರ್ ರಸ್ತೆದಾಗ ದಿನನಿತ್ಯ ಕೈಯಲ್ಲಿ ಚಪ್ಪಲಿ ಹಿಡಿದು ಬರ್ಬೇಕಾಗದ. ಇಲ್ಲ ಹೊಲ ಹೊಲದಾಗ ಹಾಸಿ ಆಸ್ಪತ್ರೆಗೆ ಹೋಗ್ತಿವಿ. ನಾವ್ ಹೆಂಗರ ಬರ್ತೀವಿ. ಆದ್ರ ರೋಗಿಗಳು, ಮಹಿಳೆಯರು, ವೃದ್ಧರು ಹ್ಯಾಂಗ ಬರ್ಬೇಕು ಹೇಳ್ರಿ… ಆದಷ್ಟು ಬೇಗ ಆಸ್ಪತ್ರೆ ತನಕ ಒಳ್ಳೆ ರಸ್ತೆ ಆದ್ರ ಎಲ್ಲರಿಗೂ ಅನುಕೂಲ ಆಗುತ್ತ” ಎಂದರು.
ಗದಗ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ನೀಲಗುಂದ ಅವರು ಈದಿನದೊಂದಿಗೆ ಮಾತನಾಡಿ, “ಹುಯಿಲಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆ ಸಮಸ್ಯೆ ಇದ್ದು, ಈಗಾಗಲೇ ಸಚಿವರ, ಶಾಸಕರ ಗಮನಕ್ಕೆ ತಂದಿರುವೆ. ಆದಷ್ಟು ಬೇಗ ಸುಸಜ್ಜಿತ ರಸ್ತೆ ನಿರ್ಮಿಸಿ, ಜನರಿಗೆ ಅನುಕೂಲ ಮಾಡಲಾಗುವುದು” ಎಂದು ಹೇಳಿದರು.
ಆರೋಗ್ಯ ಸೇವೆ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಆದರೆ ಹುಯಿಲಗೋಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸ್ಥಿತಿ ಈ ಹಕ್ಕು ಕಾಗದಕ್ಕಷ್ಟೇ ಎನ್ನುವುದನ್ನು ಬಿಚ್ಚಿಡುತ್ತಿದೆ. ಹತ್ತು ವರ್ಷಗಳಿಂದ ರಸ್ತೆಗಾಗಿ ನಿರೀಕ್ಷಿಸುತ್ತಿರುವ ಜನರು ಈಗಲಾದರೂ ತಮ್ಮ ಧ್ವನಿಗೆ ಸರ್ಕಾರ ಕಿವಿಗೊಟ್ಟು ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಬದುಕಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ನಿರ್ಮಾಣವಲ್ಲ, ಜನರು ಅದನ್ನು ಉಪಯೋಗಿಸಬಲ್ಲಂತೆ ಮೂಲಸೌಕರ್ಯ ಒದಗಿಸುವುದೂ ಸರ್ಕಾರದ ಜವಾಬ್ದಾರಿ. ಹುಯಿಲಗೋಳದ ರಸ್ತೆ ಸಮಸ್ಯೆ ಬಗೆಹರಿದು, ಗ್ರಾಮೀಣ ಆರೋಗ್ಯ ಸೇವೆಗೆ ನಿಜವಾದ ಅರ್ಥ ದೊರಕುವ ದಿನಗಳು ಬೇಗ ಬರಲಿ ಎಂಬುದೇ ಜನರ ಆಶಯ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.