ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

Date:

Advertisements

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು ಅಲ್ಲಿನ ಸರ್ಕಾರಗಳು 150 ರಿಂದ 200 ರುಪಾಯಿ ಮೀರದಂತೆ ನಿಯಂತ್ರಿಸಿವೆ. ಕೇರಳವೂ ತಹಬಂದಿಗೆ ತಂದಿದೆ. ಇಂತಹುದೇ ಉದ್ದೇಶ ಮಹಾರಾಷ್ಟ್ರ ಸರ್ಕಾರಕ್ಕಿದೆ.

ಥಿಯೇಟರುಗಳನ್ನು ಕೆಡವಿ ಅವುಗಳ ಜಾಗದಲ್ಲಿ ಶಾಪಿಂಗ್ ಮಾಲ್ ಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ತಲೆಯೆತ್ತಿದ ತರುವಾಯ ಟಿಕೆಟ್ ದರಗಳು ಆಕಾಶಕ್ಕೇರಿವೆ. ಸಣ್ಣ ಕುಟುಂಬವೊಂದು ಸಿನೆಮಾ ನೋಡಲು ಥಿಯೇಟರಿಗೆ ಹೋದರೆ ಸಾವಿರಾರು ರುಪಾಯಿ ಪೀಕಬೇಕಿರುವ ಅತಿ ದುಬಾರಿ ಸನ್ನಿವೇಶ ಸೃಷ್ಟಿಯಾಗಿದೆ. ಭಾರೀ ಸಿನೆಮಾಗಳಿಗೆ 1000- 2000 ರುಪಾಯಿಗಳ ಟಿಕೆಟ್ ದರಗಳನ್ನು ವಸೂಲು ಮಾಡಲಾಗುತ್ತಿದೆ.

ಸಿನೆಮಾ ಟಿಕೆಟ್ ಗಳ ಕನಿಷ್ಠ ದರಗಳನ್ನು ರಾಜ್ಯ ಸರ್ಕಾರ 200 ರುಪಾಯಿಗಳಿಗೆ ನಿಗದಿಪಡಿಸಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ದರ ಜಿ.ಎಸ್.ಟಿ. ತೆರಿಗೆಯನ್ನು ಒಳಗೊಂಡಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಇಂತಹ ಬೇಡಿಕೆಯು ಸರ್ಕಾರದ ಮುಂದಿತ್ತು. ಈ ಕ್ರಮವು ಥಿಯೇಟರುಗಳಿಂದ ದೂರವಾಗುತ್ತಿರುವ ಪ್ರೇಕ್ಷಕರನ್ನು ಮರಳಿ ಕರೆತರಲು ಸಹಾಯಕ ಆದೀತು ಎಂಬ ಆಶಾಭಾವನೆ ಚಿತ್ರೋದ್ಯಮದಲ್ಲಿದೆ. ಸರ್ಕಾರದ ಅಧಿಸೂಚನೆ 75 ಅಥವಾ ಅದಕ್ಕಿಂತ ಕಡಿಮೆ ಆಸನ ಸಂಖ್ಯೆಯ ವಿಲಾಸೀ ಮಲ್ಟಿಪ್ಲೆಕ್ಸ್ ಗಳಿಗೆ ಅನ್ವಯಿಸುವುದಿಲ್ಲ.

1964ರ ಕರ್ನಾಟಕ ಸಿನೆಮಾ (ನಿಯಂತ್ರಣ) ಕಾಯಿದೆಯ ಸೆಕ್ಷನ್ 19ರ ಪ್ರಕಾರ ರಾಜ್ಯದಲ್ಲಿ ಸಿನೆಮಾ ಕಾರ್ಯಾಚರಣೆಗಳು ಮತ್ತು ದರಗಳನ್ನು ನಿಯತ್ರಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

ಟಿಕೆಟ್ ದರಗಳಿಗೆ ಕಡಿವಾಣ ತೊಡಿಸುವ ಈ ಅನುಕ್ರಮವನ್ನು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲಿಸಿದರೆ, ಭಾರೀ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ವಿರೋಧಿಸಿವೆ. ರಾಜ್ಯ ಹೈಕೋರ್ಟಿನ ಕದವನ್ನೂ ತಟ್ಟಿವೆ. ಮಧ್ಯಂತರ ತಡೆಯಾಜ್ಞೆಯನ್ನೂ ತಂದಿವೆ. ತಮಿಳುನಾಡು ಆಂಧ್ರದಲ್ಲಿ ತೆಪ್ಪಗಿರುವ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಗಳು ಇಲ್ಲಿ ವಿರೋಧಿಸುತ್ತಿರುವ ಮರ್ಮವಾದರೂ ಏನು ಎಂದು ಪ್ರತಿಷ್ಠಿತ ನಿರ್ಮಾಪಕರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಸಂವಿಧಾನಬಾಹಿರ ಎಂದು ಭಾರತೀಯ ಮಲ್ಟಿಪ್ಲೆಕ್ಸ್ ಸಂಘ ಅಧಿಸೂಚನೆಯನ್ನು ಪ್ರಶ್ನಿಸಿದೆ. ಸಂವಿಧಾನದ 19 (1)(g) ಅನುಚ್ಛೇದವು ವ್ಯಾಪಾರದ ಸ್ವಾತಂತ್ರ್ಯವನ್ನು ನೀಡುತ್ತದೆ. ಇದು ಮೂಲಭೂತ ಹಕ್ಕುಗಳಲ್ಲೊಂದಾಗಿದೆ ಎಂದು ವಾದಿಸಿದೆ.

ಬಂಡವಾಳ ಹೂಡಿಕೆ, ತಂತ್ರಜ್ಞಾನ, ಸ್ಥಳಗಳು ಹಾಗೂ ಐಮ್ಯಾಕ್ಸ್ ಮತ್ತು 4 ಡಿಎಕ್ಸ್ ರೂಪರಚನೆಗಳನ್ನು ನಿರ್ಲಕ್ಷಿಸಿ ಏಕತೆರೆ ಮತ್ತು ಬಹುತೆರೆಗಳ ಥಿಯೇಟರುಗಳಿಗೆ ಒಂದೇ ದರವನ್ನು ನಿಗದಿ ಮಾಡಿರುವ ಸರ್ಕಾರಿ ಅಧಿಸೂಚನೆ ಮನಸೇಚ್ಛೆಯದು ಎಂದು ಟೀಕಿಸಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಅಫ್ ಇಂಡಿಯಾ ಮತ್ತು ಪಿವಿಆರ್ ಐನಾಕ್ಸ್ ಪರವಾಗಿ ಪ್ರತಿಷ್ಠಿತ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಉದಯ ಹೊಳ್ಳ ವಕಾಲತ್ತು ವಹಿಸಿದ್ದಾರೆ.

ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವ ತನಕ ಈ ಅಧಿಸೂಚನೆಯನ್ನು ತಡೆ ಹಿಡಿಯದೆ ಹೋದರೆ ಸಿನೆಮಾ ಥಿಯೇಟರುಗಳು ಮತ್ತು ಚಲನಚಿತ್ರ ನಿರ್ಮಾಪಕರು ಹೆಚ್ಚು ನಷ್ಟಕ್ಕೆ ಈಡಾಗುತ್ತಾರೆ. ಟಿಕೆಟ್ ದರಗಳು ನಗರ, ಟೌನ್ ಗಳಲ್ಲಿ ಬೇರೆ ಬೇರೆ ದರಗಳನ್ನು ಹೊಂದಿರುತ್ತವೆ. ನಿರ್ದಿಷ್ಟ ನಗರದಲ್ಲೇ ಒಂದು ಥಿಯೇಟರುಗಳ ದರಗಳು ಹೆಚ್ಚು ಕಡಿಮೆ ಇರುತ್ತವೆ. ಸಿನೆಮಾ ನಿರ್ಮಾಣ ವೆಚ್ಚ, ನಿರೀಕ್ಷಿತ ಲಾಭ ಹಾಗೂ ಥಿಯೇಟರುಗಳಲ್ಲಿ ಚಲನಚಿತ್ರ ವೀಕ್ಷಕರಿಗೆ ಅನುಕೂಲಗಳು ಮತ್ತು ಸೌಲಭ್ಯಗಳ ನಿರ್ಮಾಣದಂತಹ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಜಮೀನಿನ ಬೆಲೆ ಜಿಲ್ಲಾ ಕೇಂದ್ರಗಳು ಮತ್ತು ಬೆಂಗಳೂರಿನಲ್ಲಿ ಒಂದೇ ತೆರನಾಗಿರುವುದಿಲ್ಲ ಎಂಬುದನ್ನು ಪರಿಗಣಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಸೂಚನೆಯು ಈ ವ್ಯತ್ಯಾಸಗಳನ್ನು ಗುರುತಿಸದೆ ಅಸಮಾನರನ್ನು ಸಮಾನರೆಂದು ಪರಿಗಣಿಸಿಬಿಟ್ಟಿದೆ. ಟಿಕೆಟ್ ದರಗಳನ್ನು ನಿಯಂತ್ರಿಸುವ ಅವಕಾಶ ರಾಜ್ಯ ಸರ್ಕಾರದ ಶಾಸನದಲ್ಲಿ ಇಲ್ಲವೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೈಕೋರ್ಟು ತನ್ನ ಮಧ್ಯಂತರ ತಡೆಯಾಜ್ಞೆಯಲ್ಲಿ ಹೇಳಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಬೆಂಬಲಿಸಿದೆ. ಸರ್ಕಾರ ನಮ್ಮ ಮನವಿಯನ್ನು ಆಲಿಸಿದೆ. ಟಿಕೆಟುಗಳ ಕನಿಷ್ಠ ದರಗಳನ್ನು ನಿಗದಿ ಮಾಡುವುದು ಅತ್ಯಗತ್ಯವಾಗಿತ್ತು ಎಂದಿದೆ. 200 ರುಪಾಯಿಗಳ ಕನಿಷ್ಠ ದರ ನಿಗದಿಯ ನಂತರವೂ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳು ಬಡವರ್ಗಗಳಿರಲಿ, ಮಧ್ಯಮವರ್ಗಗಳಿಗೂ ಎಟುಕುವುದಿಲ್ಲ. ಪರಭಾಷಾ ಸಿನೆಮಾಗಳ ಟಿಕೆಟುಗಳ ದರಗಳು ಸಾವಿರಗಟ್ಟಲೆ ರೂಪಾಯಿಗೆ ಜಿಗಿಯುತ್ತವೆ. ಇವುಗಳ ದಾಳಿಯಲ್ಲಿ ಕನ್ನಡ ಚಲನಚಿತ್ರಗಳು ಉಸಿರಾಡುವುದೂ ಕಠಿಣವೆನಿಸುವ ಸನ್ನಿವೇಶ ನೆಲೆಸಿದೆ.

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು ಅಲ್ಲಿನ ಸರ್ಕಾರಗಳು 150 ರಿಂದ 200 ರುಪಾಯಿ ಮೀರದಂತೆ ನಿಯಂತ್ರಿಸಿವೆ. ಕೇರಳವೂ ತಹಬಂದಿಗೆ ತಂದಿದೆ. ಇಂತಹುದೇ ಉದ್ದೇಶ ಮಹಾರಾಷ್ಟ್ರ ಸರ್ಕಾರಕ್ಕಿದೆ.

ಆಧುನಿಕ ಸಮೂಹ ಮಾಧ್ಯಮಗಳ ಪೈಕಿ ಅತ್ಯಂತ ಶಕ್ತಿಶಾಲಿ ಕಲಾ ಮಾಧ್ಯಮ ಸಿನೆಮಾ. ಅದು ಕತೆ ಹೇಳುತ್ತದೆ, ಏಕಕಾಲಕ್ಕೆ ಕಲಿಸುತ್ತದೆ ಮತ್ತು ಮನರಂಜಿಸುತ್ತದೆ, ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ. ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿದೆ. ನಿರಂತರ ಬದಲಾಗುತ್ತಿರುವ ಪ್ರಪಂಚವನ್ನು ಬಹುತೇಕ ಸೆರೆಹಿಡಿದು ಪ್ರದರ್ಶಿಸುವ ಮಾಧ್ಯಮ ಸಿನೆಮಾ. ಜಗತ್ತಿನ ದೇಶಗಳು-ಸಮಾಜಗಳು-ಸಂಸ್ಕೃತಿಗಳಿಗೆ ಇಣುಕು ನೋಟವನ್ನಾದರೂ ಕಟ್ಟಿಕೊಡುವ ಮಾಧ್ಯಮ ಮತ್ಯಾವುದಿದೆ?

ಸಾಮಾಜಿಕ ವಾಸ್ತವಗಳು, ಸಂಘರ್ಷಗಳು ಹಾಗೂ ಆಶೋತ್ತರಗಳನ್ನು ಪ್ರತಿಫಲಿಸುತ್ತದೆ. ಅಸಮಾನತೆ, ಬಗೆಬಗೆಯ ಭೇದಭಾವಗಳನ್ನು ಎತ್ತಿ ತೋರುವ ಜೊತೆಗೆ ಸಾರ್ವಜನಿಕ ಸಂವಾದವನ್ನು, ವಾದ-ವಿವಾದಗಳು- ವಾಗ್ವಾದಗಳನ್ನು ಕಟ್ಟುವ, ಸಾರ್ವಜನಿಕ ಗ್ರಹಿಕೆಗಳನ್ನು ಪ್ರಭಾವಿಸುವಷ್ಟು ಪರಿಣಾಮಕಾರಿಯೂ ಹೌದು. ಸಾಮಾಜಿಕ ರೀತಿ ರಿವಾಜುಗಳು, ರೂಢಿ ಸಂಪ್ರದಾಯಗಳನ್ನು ಕಟ್ಟಿಕೊಡುವ ಜೊತೆಗೆ ಅವುಗಳನ್ನು ಪ್ರಶ್ನಿಸುವ ಪಾತ್ರವನ್ನೂ ವಹಿಸಿದೆ. ಸಾಮಾಜಿಕ ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಸಹಾಯಕ ಅಲ್ಲದೆ ಸಾಮಾಜಿಕ ಪರಿವರ್ತನೆಗೂ ಪ್ರೇರಕ. ಅದು ಕೇವಲ ಮನರಂಜನೆಯನ್ನು ಮೀರಿದ್ದು. ಸಾಮಾಜಿಕ ಮೌಲ್ಯಗಳು, ಸಂಘರ್ಷಗಳು ಹಾಗೂ ರೂಪಾಂತರಗಳ ಪ್ರತಿಬಿಂಬ. ಶಿಕ್ಷಣ, ವರ್ಗ, ಜಾತಿ, ವರ್ಣ ಲಿಂಗ ಭೇದಗಳನ್ನು ದಾಟಿ ಮನಸುಗಳನ್ನು ಮುಟ್ಟುತ್ತದೆ ದೃಶ್ಯ ಮಾಧ್ಯಮ. ಕಠೋರ ವಾಸ್ತವಗಳಿಂದ ಒಂದೆರಡು ತಾಸುಗಳ ಕಾಲ ಪಲಾಯನ ಮಾಡಿ ಮೈಮರೆತು ಭ್ರಮೆಗಳಲ್ಲಿ ಕಳೆದು ಹೋಗಬಹುದಾದ ಮಾಧ್ಯಮ.  ರಾಗ ದ್ವೇಷಗಳನ್ನು ಬಿತ್ತುವ ಪ್ರಚಾರ ಸಮರಕ್ಕೂ (ಪ್ರಾಪಗ್ಯಾಂಡ) ಬಳಕೆಯಾಗುತ್ತ ಬಂದಿದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಸಿನೆಮಾ ಅಥವಾ ಚಲನಚಿತ್ರಗಳು ಹೆಸರೇ ಹೇಳುವಂತೆ ಸ್ಥಿರ ಚಿತ್ರಗಳಲ್ಲ, ಚಲಿಸುವ ಚಿತ್ರಗಳು. ಅವುಗಳ ಶಕ್ತಿಯಿರುವುದೇ ಚಲನೆಯಲ್ಲಿ. ಹೀಗಾಗಿಯೇ ಅವುಗಳು ಜಾಗತಿಕ- ವಿಶ್ವಾತ್ಮಕ. ದೇಶ-ವಿದೇಶಗಳ ಸರಹದ್ದುಗಳ ಗೊಡವೆಗಳಿಲ್ಲ. ಚಲಿಸುವ ಚಿತ್ರಗಳು ಕತೆಯೊಂದನ್ನು ಹೇಳಿ ನೋಡುಗರನ್ನು ಭಾವುಕ ಲೋಕಕ್ಕೆ ಒಯ್ಯುತ್ತವೆ. ಇಲ್ಲವೇ ಕಠೋರ ವಾಸ್ತವವನ್ನು ಬಿಚ್ಚಿಟ್ಟು ಆಘಾತಗೊಳಿಸುತ್ತವೆ. ಥಿಯೇಟರುಗಳಿಗೆ ಸೀಮಿತಗೊಂಡಿದ್ದ ಚಲನಚಿತ್ರಗಳು ಈಗ ಟೀವಿಗಳ ಮೂಲಕ ಮನೆಮನೆಗಳನ್ನು ಮುಟ್ಟಿವೆ. ತಲೆಮಾರುಗಳ ಕಾಲ ಪ್ರಸ್ತುತವಾಗಿ ಉಳಿದ ಬಾಳಿವೆ.

ಇಂತಹ ಜನಪ್ರಿಯ ಮನರಂಜನೆ ಮತ್ತು ಶಿಕ್ಷಣದ ಬೃಹತ್ ಮಾಧ್ಯಮ ಜನರ ಜೇಬುಗಳಿಗೆ ಎಟುಕುವಂತಿರಬೇಕು. ಚಲನಚಿತ್ರ ನಿರ್ಮಾಪಕರು ಅಸ್ತಿತ್ವ ಕೂಡ ಜನ ಥಿಯೇಟರಿಗೆ ಬರುವುದನ್ನೇ ಅವಲಂಬಿಸಿದೆ ಎಂಬುದನ್ನು ಮರೆಯುವಂತಿಲ್ಲ. ವಿಶೇಷವಾಗಿ ಕನ್ನಡ ಚಲನಚಿತ್ರ ರಂಗದ ಅಳಿವು ಉಳಿವು ಈ ಅಂಶವನ್ನು ಆಧರಿಸಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು...

Download Eedina App Android / iOS

X