ಕಲಬುರಗಿ ನಗರದ ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಗುಂಡಿಗಳು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಾಜ್ಯ ಕಾರ್ಯದರ್ಶಿ ಮೊಬಿನ್ ಅಹಮ್ಮದ್ ಮಾತನಾಡಿ, ‘ಮಹಾನಗರ ಪಾಲಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದರೂ ನಗರದ ಮುಖ್ಯರಸ್ತೆಗಳೇ ನಿರ್ಲಕ್ಷ್ಯಗೊಂಡಿವೆ. ಗುಂಡಿಗಳಿಂದ ಅಪಘಾತ ಸಂಭವಿಸಿದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲೂ ಬೃಹತ್ ಗಾತ್ರದ ಗುಂಡಿಗಳು ಇರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಮರೆತಿದ್ದಾರೆ. ಅಧಿಕಾರಿಗಳು ಜಾಣಕುರುಡುತನ ತೋರಿಸುತ್ತಿದ್ದಾರೆ. ಪ್ರತಿದಿನ ನಾಗರಿಕರು ತೊಂದರೆ ಅನುಭವಿಸುತ್ತಿದ್ದು, ವಾಹನ ಹಾನಿಯಾಗುತ್ತಿವೆ, ಕೈಕಾಲು ಮುರಿಯುವ ಅಪಘಾತಗಳು ಹೆಚ್ಚುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಗರ ರಸ್ತೆ ಗುಂಡಿಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪಾಲಿಕೆಯವರು ಮುಂದಾಗಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸುವುದಾಗಿ’ ಎಚ್ಚರಿಕೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಸಲೀಮ್ ಅಹಮ್ಮದ್, ಸಲೀಮ್ ಸಗರಿ, ಅಬ್ದುಲ್ ಬಾರಿ, ತಾಜುದ್ದೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.