ತಮ್ಮ ಕೆಲಸವು ಮನಸ್ಸಿನ ಶಾಂತಿಯನ್ನು ಕಸಿದುಕೊಂಡಿದೆ. ಪ್ರತಿಯಾಗಿ, ಹಲವಾರು ಆರೋಗ್ಯ ಸಮಸ್ಯೆಗಳನ್ನು ನೀಡಿದೆ ಎಂದು ಸರ್ಕಾರಿ ಬ್ಯಾಂಕ್ ನೌಕರರೊಬ್ಬರು ತಮ್ಮ ಉದ್ಯೋಗವನ್ನು ಟೀಕಿಸಿದ್ದಾರೆ. ತಮ್ಮ ನೌಕರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ತಮ್ಮ ಉದ್ಯೋಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ನನ್ನ ನೌಕರಿಯಿಂದ ನನಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದೇಶದ ದೂರದ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿಯೇ ವರ್ಗಾವಣೆ ಮಾಡಲಾಗುತ್ತಿದೆ. ದಿನದ 12 ಗಂಟೆಗಳ ಕಾಲ ಫೋನ್ ಕರೆಯಲ್ಲಿ ಅಧಿಕಾರಿಗಳೊಂದಿಗೆ ಲಭ್ಯವಿರಬೇಕು. ಭಾನುವಾರವೂ ಸಹ ಕೆಲಸ ಇರುತ್ತದೆ” ಎಂದು ಹೇಳಿಕೊಂಡಿದ್ದಾರೆ.
“ಸರ್ಕಾರಿ ಬ್ಯಾಂಕಿನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆದರೆ, ನನಗೆ ಈ ನೌಕರಿಯು ಉಸಿರುಗಟ್ಟಿದಂತಿದೆ. ಇನ್ನು ಮುಂದೆಯೂ ನಾನು ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ
“ನಾನು ಅಖಿಲ ಭಾರತ ಮಟ್ಟದ ಮೂರು ಸುತ್ತುಗಳ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಉದ್ಯೋಗ ಪಡೆದುಕೊಂಡೆ. ಈ ಕೆಲಸವು ಉತ್ತರ ಭಾರತ ಭಾಗದಲ್ಲಿ ಸುರಕ್ಷಿತ ಮತ್ತು ಪ್ರತಿಷ್ಠಿತವೆಂದು ಪರಿಗಣಿಸಲಾಗುತ್ತದೆ. ಪಿಎಸ್‌ಯು ಬ್ಯಾಂಕ್ ಕೆಲಸವು ಸ್ಥಿರತೆಯ ಜೀವನ, ಯೋಗ್ಯವಾದ ಮನೆ, ಕಾರು, ಸ್ಥಿರ ಸಂಬಳ ಹಾಗೂ ಸಮಾಜದಲ್ಲಿ ಒಂದು ನಿರ್ದಿಷ್ಟ ಗೌರವವನ್ನು ನೀಡುತ್ತದೆ. ಆದರೆ, ಈ ಕೆಲಸವು ನನಗೆ ಶಾಂತಿಯನ್ನು ನೀಡುತ್ತಿಲ್ಲ” ಎಂದಿದ್ದಾರೆ.
“ಕೆಲಸದ ಒತ್ತಡದಿಂದಾಗಿ ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
“ಈ ಕೆಲಸದಲ್ಲಿ ಹಲವಾರು ಸಮಸ್ಯೆಗಳಿವೆ. ಮೊದಲನೆಯದಾಗಿ, ದೇಶದ ದೂರದ ಭಾಗಗಳಿಗೆ ಕಡಿಮೆ ಸಮಯದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ, ಸಾರ್ವಜನಿಕರಿಗೆ ನಿಷ್ಪ್ರಯೋಜಕ ವಿಮಾ ಸೌಲಭ್ಯಗಳನ್ನು ಮಾರಾಟ ಮಾಡುವಂತೆ ಪ್ರತಿ ತಿಂಗಳಿಗೂ ಟಾರ್ಗೆಟ್ ಕೊಡಲಾಗುತ್ತದೆ. ಗುರಿಯನ್ನು ತಲುಪಲು ಭಾನುವಾರವೂ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮೇಲಧಿಕಾರಿಗಳೊಂದಿಗೆ ಫೋನ್‌ನಲ್ಲಿ ಲಭ್ಯವಿರಬೇಕಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ.