ಮಹಾರಾಷ್ಟ್ರದಲ್ಲಿ ದೇವಸ್ಥಾನದ ಆವರಣಕ್ಕೆ ಮಾಂಸ ಎಸೆದು, ಅಪವಿತ್ರಗೊಳಿಸಿದ ಆರೋಪದ ಮೇಲೆ ನಂದಕಿಶೋರ್ ವಡ್ಗಾಂವ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅನ್ವಾ ಗ್ರಾಮದಲ್ಲಿ ಸೆಪ್ಟೆಂಬರ್ 21ರಂದು ಘಟನೆ ನಡೆದಿದೆ. ಗ್ರಾಮದ ಹೇಮದ್ವಂತಿ ಮಹಾದೇವ್ ದೇವಾಲಯದ ಪಕ್ಕದಲ್ಲಿ ನಂದಕಿಶೋರ್ ಮನೆ ನಿರ್ಮಾಣ ಮಾಡಲು ಯೋಜಿಸಿದ್ದರು. ಆದರೆ, ಮನೆ ನಿರ್ಮಾಣಕ್ಕೆ ಅನುಮತಿ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಕೋಪಗೊಂಡ ನಂದಕಿಶೋರ್, ದೇವಾಲಯದ ಆವರಣಕ್ಕೆ ಮಾಂಸ ಮತ್ತು ಮೂಳೆಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಾಲಯದ ಸಿಬ್ಬಂದಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ನಂದಕಿಶೋರ್ ಅವರನ್ನು ಬಂಧಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ
ಆದಾಗ್ಯೂ, ಕೆಲವು ಸುದ್ದಿವಾಹಿನಿಗಳು ಘಟನೆಯನ್ನು ಸಮಾಜದಲ್ಲಿ ಕೋಮುದ್ವೇಷ ಹರಡಲು ಬಳಸಿಕೊಂಡಿದ್ದವು. ದೇವಾಲಯದ ಆವರಣಕ್ಕೆ ಮುಸ್ಲಿಮರು ಮಾಂಸ ಎಸೆದಿದ್ದಾರೆ ಎಂದು ಸುದರ್ಶನ್ ನ್ಯೂಸ್ ಕೋಮುದ್ವೇಷದ ಸುಳ್ಳು ಸುದ್ದಿ ಪ್ರಕಟಿಸಿತ್ತು. ಕೋಮು ಭಾವನೆ ಕೆರಳಿಸಲು ಯತ್ನಿಸಿತ್ತು. ಆದರೆ, ಈ ಪ್ರಕರಣವು ಕೋಮು ಪಿತೂರಿಯಲ್ಲ, ವೈಯಕ್ತಿಕ ಕಾರಣದಿಂದ ನಡೆದ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ.