ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ದಿವಂಗತ ಮಾಜಿ ಸಚಿವ ಉಮೇಶ್ ಕತ್ತಿ ಕುರಿತು ಬರೆಯಲ್ಪಟ್ಟ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಭಾನುವಾರ ಭವ್ಯವಾಗಿ ಜರುಗಿತು. ರಾಜ್ಯದ ಹಲವಾರು ಗಣ್ಯ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಜನರು ವೇದಿಕೆಯ ಮುಂಭಾಗದಲ್ಲಿ ಕುಳಿತು ಕಾರ್ಯಕ್ರಮವನ್ನು ಸಾಕ್ಷಿಯಾಗಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ರಮೇಶ್ ಕತ್ತಿ ತಮ್ಮ ಸಹೋದರನನ್ನು ನೆನೆದು ಕಣ್ಣೀರು ಹಾಕಿದರು. “ನನ್ನ ಪ್ರೀತಿಯ ಸಹೋದರ ಉಮೇಶ್ ಕತ್ತಿ ನಿಧನದಿಂದ ನಾನು ಕುಗ್ಗಿ ಹೋಗಿದ್ದೇನೆ. 60 ವರ್ಷಗಳ ಕಾಲ ಜೊತೆಯಲ್ಲಿದ್ದ ಎತ್ತು ಒಮ್ಮೆಗೆ ಬಿಟ್ಟುಹೋದಂತಾಗಿದೆ. ಅದೇ ಕಾರಣಕ್ಕೆ ನಾನು ಇತ್ತೀಚೆಗೆ ಮೌನವಾಗಿದ್ದೆ. ಆದರೆ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ನೋಡಿ ಸುಮ್ಮನೆ ಕುಳಿತಿರಲು ಸಾಧ್ಯವಾಗುತ್ತಿಲ್ಲ” ಎಂದು ಭಾವುಕರಾದರು.
ಅವರು ಮುಂದುವರಿದು, “ನಮ್ಮ ಕ್ಷೇತ್ರಕ್ಕೆ ಬರುವವರನ್ನು, ಅವರ ಮನೆಗಳಿಗೆ ಹಿಂದಿರುಗಿಸುವೆ. ಹುಕ್ಕೇರಿಯಿಂದಲೇ ಕ್ರಾಂತಿ ಪ್ರಾರಂಭವಾಗಲಿದೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸಿಡಿದು ಎದ್ದು ನಿಲ್ಲುತ್ತೇನೆ” ಎಂದು ಆವೇಶಗೊಂಡು ಶಪಥ ಮಾಡಿದರು.