ಪ್ರಿಯತಮ ಮದುವೆ ಆಗಲು ನಿರಾಕರಿಸಿದಕ್ಕೆ ಯುವತಿಯೊಬ್ಬಳು ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಬಳಿ ಇಲಿ ಪಾಷಣ ಬೇರಸಿದ ಜ್ಯೂಸ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
23 ವರ್ಷದ ಸವಿತಾ (ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಇವರು ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನ ಗಾರ್ವೇಭಾವಿಪಾಳ್ಯದಲ್ಲಿ ನೆಲೆಸಿದ್ದಾರೆ. ನಗರದ ಕಂಪನಿಯೊಂದರಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಕಂಪನಿಯಲ್ಲಿಯೇ ಹರ್ಷವರ್ಧನ ಎಂಬಾತ ಕ್ವಾಲಿಟಿ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. 2022ರಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ನಂತರ ಈ ಸ್ನೇಹ ಪ್ರೀತಿಗೆ ತಿರುಗಿದೆ. ಮೊದಲಿಗೆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಹರ್ಷವರ್ಧನ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಯುವತಿ ಗರ್ಭಿಣಿಯಾದ ಬಳಿಕ ಆಕೆಯನ್ನು ಮದುವೆ ಆಗಲು ನಿರಾಕರಿಸಿದ್ದಾನೆ. ಅಲ್ಲದೇ, ಗರ್ಭಪಾತ ಮಾಡಿಸಿಕೊಳ್ಳುವಂತೆ ಯುವತಿಗೆ ಒತ್ತಾಯ ಮಾಡಿದ್ದಾನೆ.
ಇದರಿಂದ ಭಯಗೊಂಡ ಯುವತಿ ಯುವಕನ ಪೋಷಕರ ಜತೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾಳೆ. ಆದರೆ, ಅವರು ಕೂಡ ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಬೇಸತ್ತ ಯುವತಿ ಜುಲೈ 19ರಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಳು. ಪೊಲೀಸರು ಹರ್ಷವರ್ಧನ್ ವಿರುದ್ದ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಯುವತಿ ದೂರು ನೀಡಿದ ಹಿನ್ನೆಲೆ ಆರೋಪಿ ಹರ್ಷವರ್ಧನ ತಲೆಮರೆಸಿಕೊಂಡಿದ್ದನು. ಬಳಿಕ, ಪೊಲೀಸರು ಆಗಸ್ಟ್ 14 ರಂದು ಆತನ ಪತ್ತೆ ಮಾಡಿ ಬಂಧಿಸಿದ್ದರು.
ಹರ್ಷವರ್ಧನ ತನ್ನನ್ನು ಮದುವೆಯಾಗಲು ಒಪ್ಪುತ್ತಾನೆ ಎಂದು ನಿರೀಕ್ಷಿಸಿ, ಯುವತಿ ಪೊಲೀಸ್ ಠಾಣೆಗೆ ಧಾವಿಸಿದ್ದಳು. ಆತ ಪೊಲೀಸರ ಮುಂದೆಯೂ ಸಹ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಮಹಿಳೆ ಬೇಸತ್ತು ಠಾಣೆಯಿಂದ ಹೊರಬಂದು ಹತ್ತಿರದ ಜ್ಯೂಸ್ ಸ್ಟಾಲ್‌ಗೆ ತೆರಳಿದ್ದಾಳೆ. ಜ್ಯೂಸ್ ಖರೀದಿಸಿದ ಬಳಿಕ ಅದಕ್ಕೆ ಇಲಿ ಪಾಷಣ ಬೆರೆಸಿ ಕುಡಿದಿದ್ದಾಳೆ. ಆಕೆ ಪ್ರಜ್ಞಾಹೀನಳಾಗಿ ರಸ್ತೆಯಲ್ಲಿ ಬಿದ್ದಾಗ, ಕೆಲವು ಆಟೋ ಚಾಲಕರು ಮತ್ತು ದಾರಿಹೋಕರು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಪರಿಷ್ಕರಣೆಗೆ ಎಎಪಿ ಒತ್ತಾಯ: ಗಡ್ಕರಿಗೆ ಪತ್ರ
ಯುವತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ನಂತರ ಪೊಲೀಸರು ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿದ್ದಾರೆ. ವೈದ್ಯರ ಮುಂದೆ ಆಕೆಯ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಆರೋಪಿ ಹರ್ಷವರ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಕೆಯ ವಿರುದ್ಧವೂ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಳಿಕ ದೂರು ಹಿಂಪಡೆಯುವಂತೆ ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.