ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ದೋಷಗಳಿದ್ದು ಹಾಗೂ ಸಮೀಕ್ಷೆಗೆ ಸಮಯಾಕಾಶ ಬಹಳ ಕಡಿಮೆಯಿದೆ. ಇದನ್ನು ಹೆಚ್ಚಿಸಬೇಕು ಮತ್ತು ಸರ್ಕಾರ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಮಾಜಿ ಸಚಿವ ಮತ್ತು ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ್ ಹೇಳಿದರು.
ನಗರದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ಸಮೀಕ್ಷೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಿದ್ದು ಗಮನಾರ್ಹವೆಂದರೆ ಸರ್ಕಾರದಲ್ಲಿ ಸಮೀಕ್ಷೆ ಬಗ್ಗೆ ತಿಳಿದುಕೊಂಡವರೇ ಇಲ್ಲವೆಂದೆನಿಸುತ್ತಿದೆ. ಹದಿನೈದು ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಜೊತೆಗೆ ಸರ್ವರ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ಸಮೀಕ್ಷೆ ಮುಂದೂಡುವ ಸಾಧ್ಯತೆ ಎದುರಾಗುತ್ತದೆ. ರಾಜ್ಯ ಸರ್ಕಾರ ಕ್ರಮ ಬದ್ಧವಾಗಿ ಸಮೀಕ್ಷೆ ನಡೆಸಲು ಮುಂದಾಗಬೇಕು ಎಂದರು.
ಇದೀಗ ಗಣತಿದಾರರು ಕೆಲವು ಕಡೆ ಸಮೀಕ್ಷೆಗೆ ತೆರಳಿದ್ದಾರೆ ಆದರೆ ಕೆಲವೊಂದ ಗ್ರಾಮ ವಾರ್ಡಗಳಲ್ಲಿ ಈವರೆಗೂ ಗಣತಿದಾರರು ಸಮೀಕ್ಷೆಗೆ ಬಂದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರ ನೀಡಿರುವ ಮನೆಗಳ ಮಾಹಿತಿಯಾನುಸಾರ ಪ್ರಕಾರ ಗಣತಿದಾರರು ಹೋದಾಗ ಅಲ್ಲಿ ಮನೆಗಳೇ ಇಲ್ಲ ಎಂಬುವ ಅಂಶವು ಬೆಳಕಿಗೆ ಬಂದಿದೆ ಎಂದರು.
ಈ ಹಿಂದೆ ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ಕಸದಬುಟ್ಟಿಗೆ ಎಸೆದು, ಸಚಿವ ಸಂಪುಟದ ತೀರ್ಮಾನವನ್ನು ಅಂತಿಮಗೊಳಿಸಿ ನಾಗಮೋಹನದಾಸ್ ಅವರಿಗೆ ಅಗೌರವ ತೋರಿದ್ದಾರೆ. ಅದರಂತೆ ಈಗ ನಡೆಯುತ್ತಿರುವ ಸಮೀಕ್ಷೆಯನ್ನು ಒಳಮೀಸಲಾತಿಗೆ ನೀಡಿದ ವರದಿಯಂತೆ ಮಾಡಬಾರದು ಎಂದು ತಿಳಿಸಿದರು. ಮಾದಿಗ ಸಮುದಾಯದವರು, ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂ ನಲ್ಲಿ ಮಾದಿಗ ಎಂದು ಬರೆಸಬೇಕು. ಯಾವುದೇ ಗೊಂದಲಗಳಿಗೆ ಒಳಗಾಗದೇ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಗಮ-ಮಂಡಳಿ ನೇಮಕಾತಿಯಲ್ಲಿ ಜಿಲ್ಲೆಗೆ ಅನ್ಯಾಯ
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ವಿರುಪಾಕ್ಷಿ, ನರಸಪ್ಪ, ಎನ್.ಮಹಾವೀರ, ರವಿಕುಮಾರ, ರಾಜು.ಎಸ್, ರಾಮು, ರಮೇಶ, ತಿಪ್ಪಣ್ಣ, ಖಾಜಪ್ಪ ಸೇರಿದಂತೆ ಇತರರಿದ್ದರು.
