ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಕಣ ಅಂತಿಮ ಹಂತ ತಲುಪಿದ್ದು, ಭಾನುವಾರ (ಸೆ. 28) ಮತದಾನ ನಡೆಯಲಿದೆ. ನಾಳೆಯೇ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.
ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ, ಜಾರಕಿಹೊಳಿ ಸಹೋದರರ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಸಾಮಾನ್ಯ 9, ಮಹಿಳಾ 2, ಹಿಂದುಳಿದ “ಅ” ವರ್ಗ 1, ಹಿಂದುಳಿದ “ಬ” ವರ್ಗ 1, ಪಂ. ಜಾತಿ ಮೀಸಲು 1 ಹಾಗೂ ಪಂ. ಪಂಗಡ ಮೀಸಲು 1 ಸ್ಥಾನಗಳಿವೆ.
ಬಾಪೂಜಿ ಶಿಕ್ಷಣ ಸಂಸ್ಥೆ (ಮತಗಟ್ಟೆ 1–67)ಯಲ್ಲಿ 32,964 ಮತದಾರರು, ಎಸ್.ಹೈಸ್ಕೂಲ್ ಶಿಕ್ಷಣ ಸಂಸ್ಥೆ (ಮತಗಟ್ಟೆ 68–122)ಯಲ್ಲಿ 27,082 ಮತದಾರರು ಸೇರಿ ಒಟ್ಟು 60,046 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಒಟ್ಟು 122 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, 812 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಮತ ಎಣಿಕೆಗೆ 366 ಸಿಬ್ಬಂದಿ ಹಾಗೂ 14 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 6 ವಿಶೇಷ ಮತಗಟ್ಟೆಗಳನ್ನು ಪ್ರತ್ಯೇಕ ಬಣ್ಣ ಗುರುತುಗಳಿಂದ ಸಿದ್ಧಪಡಿಸಲಾಗಿದೆ.
ಮತದಾನ ಶೇ.100 ತಲುಪಿಸುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಮನೆಮನೆಗೆ ಗುರುತಿನ ಚೀಟಿ ಹಾಗೂ ಮತಗಟ್ಟೆ ಮಾಹಿತಿ ತಲುಪಿಸಲಾಗಿದೆ. ಸಂಜೆ 5 ಗಂಟೆಯಿಂದ ಸಂಕೇಶ್ವರ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.