- ಸಚಿವ ಭಗವಂತ ಖೂಬಾಗೆ ಈಶ್ವರ ಖಂಡ್ರೆ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
- ಸಚಿವ ಖೂಬಾ ವಿರುದ್ಧ ಸಮಗ್ರ ತನಿಖೆಗೆ ಆದೇಶ ನೀಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲು ಸಿದ್ಧ
ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯ ಗುತ್ತಿಗೆಯನ್ನು ತಮ್ಮ ಸೋದರನ ಸಂಸ್ಥೆಗೆ ಕೊಡಿಸಿ, ಮಂಜೂರಾದ ಹುದ್ದೆಗಿಂತ ಕಡಿಮೆ ಜನರನ್ನು ಕೆಲಸಕ್ಕೆ ಹಚ್ಚಿ ಹಣ ಲೂಟಿ ಮಾಡಿದ ಕೇಂದ್ರ ಸಚಿವ ಭಗವಂತ ಖೂಬಾಗೆ ಈಶ್ವರ ಖಂಡ್ರೆ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ತಿರುಗೇಟು ನೀಡಿದ್ದಾರೆ.
“ಬ್ರಿಮ್ಸ್ ಆಸ್ಪತ್ರೆಯಲ್ಲಿ ದುಡಿದ ಬಡ ಮತ್ತು ದಲಿತ ನೈರ್ಮಲ್ಯ ಕಾರ್ಯಕರ್ತರಿಗೆ, ದುರ್ಬಲ ವರ್ಗದ ಮಹಿಳೆಯರಿಗೆ ಸರಿಯಾಗಿ ಸಂಬಳವನ್ನೂ ನೀಡದೆ, ಭವಿಷ್ಯನಿಧಿ, ಇ.ಎಸ್.ಐ. ಹಣ ಕಟ್ಟದೆ ವಂಚಿಸಿ, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಆರ್ಥಿಕ ಇಲಾಖೆಯ ಮೇಲೆ ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸಿಕೊಂಡವರು ಈಗ ಈಶ್ವರ ಖಂಡ್ರೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಹೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಆಗಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಎಲ್ಲ ಗ್ಯಾರಂಟಿಗಳನ್ನೂ ಹಂತ ಹಂತವಾಗಿ ಮತ್ತು ಯಶಸ್ವಿಯಾಗಿ ಜಾರಿ ಮಾಡುತ್ತಿದೆ. ಈಶ್ವರ ಖಂಡ್ರೆ ಅವರು ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸುತ್ತಿದ್ದು, ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಸಚಿವರ ಏಳಿಗೆ ಸಹಿಸದೆ ಖೂಬಾ ಅನಗತ್ಯ ಪ್ರಲಾಪ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರು ಬಂದರೆ ಅದರ ಪರಿಶೀಲನೆ ಮಾಡುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರುತ್ತದೆ. ಎಲ್ಲಿ ತಮ್ಮ ನಿಜ ಬಣ್ಣ ಬಯಲಾಗುತ್ತದೋ ಎಂದು ಹೆದರಿ ಖೂಬಾ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಚಕಾರ ಎತ್ತದ ಖೂಬಾ ಗುತ್ತಿಗೆದಾರ ಸಂಸ್ಥೆಯೊಂದಿಗೆ ಶಾಮೀಲಾಗಿರುವ ಬಗ್ಗೆ ಅವರ ಪಕ್ಷದವರೇ ಆರೋಪ ಮಾಡುತ್ತಿದ್ದಾರೆ” ದೂರಿದರು.
ಈ ಸುದ್ದಿ ಓದಿದ್ದೀರಾ ? ಬೀದರ್ | ಅಪ್ರಾಪ್ತೆಯನ್ನು ವಿವಾಹವಾದ ಸರ್ಕಾರಿ ಶಾಲೆ ಶಿಕ್ಷಕ; ಪ್ರಕರಣ ದಾಖಲು
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಸಮಗ್ರ ತನಿಖೆಗೆ ಆದೇಶ ನೀಡುವಂತೆ ಮತ್ತು ಸಂಪುಟದಿಂದ ವಜಾಮಾಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.