ಭಾರತದಾದ್ಯಂತ ಜನರ ಜೀವ ಉಳಿಸುವ ಪ್ರಮುಖ ತುರ್ತು ಸೇವೆಯೆಂದರೆ 108 ಆಂಬುಲೆನ್ಸ್. ತುರ್ತು ಚಿಕಿತ್ಸಾ ಅಗತ್ಯವಿರುವ ಸಂದರ್ಭದಲ್ಲಿ 24 ಗಂಟೆಗಳ ಕಾಲ ಉಚಿತವಾಗಿ ಕಾರ್ಯನಿರ್ವಹಿಸುವ ಈ ಸೇವೆ, ಸಾವಿರಾರು ಜನರ ಜೀವ ಉಳಿಸಲು ನೆರವಾಗಿದೆ. ಆದರೆ ಇತ್ತೀಚಿನ ದಿನದಳಲ್ಲಿ ಜೀವ ಕಾಪಾಡುವ ಮಹತ್ವದ ಸೇವೆಯಾದ 108 ಆಂಬುಲೆನ್ಸ್ ಇದೀಗ ದಿನದ 24 ಗಂಟೆಗಳ ಬದಲಿಗೆ ಕೇವಲ 16 ಗಂಟೆಗಳಷ್ಟೇ ಕಾರ್ಯನಿರ್ವಹಿಸುತ್ತಿರುವುದು ಗಂಭೀರ ಸಮಸ್ಯೆ ಉಂಟುಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲು ನಿರೀಕ್ಷೆಯಲ್ಲಿದ್ದ ಅನೇಕ ರೋಗಿಗಳು ತಕ್ಷಣ ಸೇವೆ ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಆಂಬುಲೆನ್ಸ್ ಸೇವೆ ಹಗಲು ವೇಳೆ ಮಾತ್ರ ಸಿಗುತ್ತಿರುವುದರಿಂದ, ರಾತ್ರಿ ವೇಳೆಯಲ್ಲಿ ಹೃದಯಾಘಾತ, ರಸ್ತೆ ಅಪಘಾತ, ಹೆರಿಗೆ ತುರ್ತು ಪರಿಸ್ಥಿತಿ ಇತ್ಯಾದಿ ಸಂದರ್ಭಗಳಲ್ಲಿ ಜೀವ ಉಳಿಸುವಲ್ಲಿ ವಿಳಂಬ ಉಂಟಾಗುತ್ತಿದೆ. ಇದರಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯು 108 ಸೇವೆಯನ್ನು 24 ಗಂಟೆಗಳ ಕಾಲ ಲಭ್ಯವಿರಿಸುವಂತೆ ಒತ್ತಾಯಿಸಲಾಗುತ್ತಿದ್ದು, ಸಾರ್ವಜನಿಕರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಜನರ ಜೀವ ರಕ್ಷಣೆಗೇ ಬಳಸಬೇಕಾದ ಸೇವೆಯನ್ನು ಸಮಯಕ್ಕೆ ಸೀಮಿತಗೊಳಿಸುವುದು ಗಂಭೀರ ನಿರ್ಲಕ್ಷ್ಯವೆಂದು ನಾಗರಿಕರು ಆರೋಪಿಸಿದ್ದಾರೆ.

ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಸೇವೆ ದಿನದ 24ಗಂಟೆಗಳ ಬದಲಿಗೆ ಕೇವಲ 16 ಗಂಟೆಗಳಷ್ಟೇ ಸೇವೆ ನೀಡುತ್ತಿದ್ದು, ರೋಗಿಗಳು ತುರ್ತು ಸೇವೆ ಸಿಗದೆ ಪರದಾಡುವಂತಾಗಿದೆ ಎಂದು ವಿಶುಶೆಟ್ಟಿ ಅಂಬಲಪಾಡಿಯವರು ಆರೋಪಿಸಿದ್ದಾರೆ. 108 ಆಂಬುಲೆನ್ಸ್ ದಿನದ 24 ಗಂಟೆ ಸೇವೆ ನೀಡುವ ಉದ್ದೇಶ ಹೊಂದಿದೆ ಆದರೆ ಅದರ ಪಾಲನೆ ಆಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಐದಾರು ಗಂಟೆಗಳು ಕಳೆದರೂ ಆಂಬುಲೆನ್ಸ್ ಬರುತ್ತಿಲ್ಲ. ಇಂದು ಉಡುಪಿ ಹೊರವಲಯದ ರೋಗಿ ಒಬ್ಬರಿಗೆ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ 10 ಗಂಟೆಗೆ ಪೋನ್ ಮಾಡಿದ್ದರು ಮಧ್ಯಾಹ್ನ 3 ಗಂಟೆಯಾದರೂ ಅಂಬುಲೆನ್ಸ್ ಬಂದಿಲ್ಲ. ಹೀಗಾದರೆ ಬಡ ರೋಗಿಗಳ ಪ್ರಾಣ ಉಳಿಯುವುದು ಎಂತು ಎಂಬುದನ್ನು ಸಂಬಂಧ ಪಟ್ಟವರು ಸ್ಪಷ್ಟ ಪಡಿಸಬೇಕು. ಎಷ್ಟೋ ಸಂದರ್ಭದಲ್ಲಿ ಬಡ ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುತ್ತದೆ.ಅಂತಹ ಪರಿಸ್ಥಿತಿಯಲ್ಲಿ 108 ಸೇವೆಗೆ ಸಿಗದಿದ್ದಾರೆ ದುಬಾರಿ ಖಾಸಗಿ ಆಂಬುಲೆನ್ಸ್ ಮಾಡಿ ಅವರನ್ನು ಕೊಂಡೊಯ್ಯಲು ಸಾಧ್ಯವೇ? ಹೀಗಾಗಿ ಅದೆಷ್ಟೋ ರೋಗಿಗಳು ದಾರಿಯಲ್ಲಿಯೇ ಪ್ರಾಣ ಬಿಟ್ಟ ಉದಾಹರಣೆಗಳಿವೆ. ಪ್ರಸ್ತುತ 108 ಸೇವೆಯನ್ನು ಆವಲೋಕಿಸಿದಾಗ 3 ಪಾಳಿಯಲ್ಲಿ 8ಗಂಟೆಯಂತೆ 24ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಈ ಆಂಬುಲೆನ್ಸ್ಗಳು ಯಾವುದಾದರೊಂದು ಪಾಳಿಯನ್ನು ನಿರ್ವಹಿಸುತ್ತಿಲ್ಲ. ಈ ಸಂದರ್ಭದಲ್ಲಿ ಫೋನ್ ಮಾಡಿದರೆ ಆಂಬುಲೆನ್ಸ್ ಖಾಲಿ ಇಲ್ಲ ಎಂದೋ ಅಥವಾ ತಾಂತ್ರಿಕ ದೋಷ ಎಂದೋ ಸಬೂಬು ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ನಡೆಯುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಪ್ರಾಣ ಬಿಡುವಂತಾಗಿದೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ 18 ಆಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪಾಳಿಯಲ್ಲಿ ನೀಡುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಆರೇಳು ಅಂಬುಲೆನ್ಸ್ ಗಳು ಮಾತ್ರ ಲಭ್ಯವಿರುತ್ತವೆ. ಇವುಗಳಲ್ಲಿ ತಾಂತ್ರಿಕ ದೋಷ ಅಥವಾ ಇನ್ನಿತರ ಕಾರಣ ಗಳಿಂದ ನಿಂತರೆ ದೇವರೇ ಗತಿ. ಹೀಗಾಗಿ ಶಿಫ್ಟ್ ವ್ಯವಸ್ತೆಯನ್ನು ಕೈ ಬಿಡಬೇಕು. ಎಲ್ಲಾ 18 ಆಂಬುಲೆನ್ಸ್ ಗಳು 24*7 ಲಭ್ಯವಾಗಬೇಕು. ಆದರೆ ಇದೀಗ ಇವರ ಸೇವಾ ನ್ಯೂನತೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಬೇಕು. ಜನರ ಪ್ರಾಣ ಉಳಿಸುವ ಈ 108 ಸೇವೆ 24*7ಕಾರ್ಯ ನಿರ್ವಹಿಸುವಂತಾಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಬೇಕಾದ 108 ಆಂಬುಲೆನ್ಸ್ ಸೇವೆ ಇದೀಗ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಜನಸಾಮಾನ್ಯರ ಬದುಕನ್ನು ಉಳಿಸಬೇಕಾದ ಸೇವೆಯೇ ಕೈಕೊಡುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು 24 ಗಂಟೆ ಸೇವೆ ಪುನಃ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಬಡವರು, ಅಶಕ್ತರು, ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ಸಾವಿರಾರು ಜನರ ಜೀವ ಉಳಿಸಲು 108 ಆಂಬುಲೆನ್ಸ್ ಸೇವೆ ದಿನದ 24*7 ಸೇವೆ ಮುಂದುವರೆಯಲಿ.
