ಕಲ್ಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜೊತೆಗೆ, ಮಹಾರಾಷ್ಟ್ರದಲ್ಲಿಯೂ ಹೆಚ್ಚು ಮಳೆಯಾಗುತ್ತಿರುವ ಕಾರಣ, ಉಜನಿ ಮತ್ತು ನೀರ ಜಲಾಶಯಗಳಿಂದ ಕೃಷ್ಣ ಮತ್ತು ಭೀಮಾ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ. ಪರಿಣಾಮವಾಗಿ, ಕರ್ನಾಟಕದಲ್ಲಿ ಕೃಷ್ಣ ಮತ್ತು ಭೀಮಾ ನದಿ ತೀರದಲ್ಲಿ ಪ್ರವಾಹದ ಭೀತಿ ಆವರಿಸಿದೆ. ಹೀಗಾಗಿ, ಕಲಬುರಗಿ, ಬಿಜಾಪುರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪರಿಸ್ಥಿತಿಯ ಮೇಲೆ ನಿಗಾವಹಿಸಿ, ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಕ್ರಮಗಳು ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪ್ರವಾಹ ಭೀತಿ ಇರುವ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಈದಿನ.ಕಾಮ್ ಗ್ರೌಂಡ್ ರಿಪೋರ್ಟ್ |ತೆವಳುತ್ತಿರುವ ಜಾತಿವಾರು ಸಮೀಕ್ಷೆ- ಸಮಸ್ಯೆಗಳ ಸುರಿಮಳೆ, ಶೇ.2ರಷ್ಟು ಗುರಿ ಮುಟ್ಟಲೂ ವಿಫಲ!
ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಮಾನವ ಮತ್ತು ರಾಸುಗಳ, ಜಾನವಾರುಗಳ ಪ್ರಾಣ ಹಾನಿ ಆಗದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದ್ದಾರೆ.