- ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ
- ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿಗೆ ಗಾಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಕ್ವಾಲಿಟಿ ಕಂಟ್ರೋಲ್ ಲ್ಯಾಬ್ (ಕ್ಯೂಸಿಎಲ್) ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜ್ಯೋತಿ ಎಂಬ ಯುವತಿಯ ಮದುವೆ ಕೆಲವೇ ದಿನಗಳಲ್ಲಿ ನಡೆಯಬೇಕಿತ್ತು. ಆದರೆ, ಅಗ್ನಿ ಅವಘಡದಿಂದ ಅವರ ಬದುಕಿಗೆ ಕತ್ತಲು ಕವಿದಂತಾಗಿದೆ. ಯುವತಿ ಜೀವನದಲ್ಲಿ ಮತ್ತೆ ಬೆಳಕು ತರಲು ಬಿಬಿಎಂಪಿ ಇದೀಗ ಆಕೆಯ ಗುತ್ತಿಗೆ ಆಧಾರಿತ ಕೆಲಸವನ್ನು ಖಾಯಂ ಮಾಡಲು ಮುಂದಾಗಿದೆ.
ಅಗ್ನಿ ಅವಘಡದಲ್ಲಿ ಜ್ಯೋತಿ ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಕ್ವಾಲಿಟಿ ಕಂಟ್ರೋಲ್ ಲ್ಯಾಬ್ (ಕ್ಯೂಸಿಎಲ್) ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ₹12,000 ಸಂಬಳ ಪಡೆಯುತ್ತಿದ್ದರು. ಗಾಯಗೊಳಗಾದ ಜ್ಯೋತಿ ಅತೀ ಕಡಿಮೆ ಸಂಬಳದ ಗುತ್ತಿಗೆ ಉದ್ಯೋಗಿ ಎಂದು ತಿಳಿದ ನಂತರ ಬಿಬಿಎಂಪಿ ಈಗ ಅವರ ಕೆಲಸವನ್ನು ಖಾಯಂಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಒಪ್ಪಿಗೆ ಸೂಚಿಸುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಈ ಅಗ್ನಿ ಅವಘಡದ ದುರಂತದಲ್ಲಿ ಜ್ಯೋತಿಯ ಮುಖ ಮತ್ತು ಕೈಗಳು ಸುಟ್ಟುಹೋಗಿವೆ. ಅವರ ಮದುವೆ ರದ್ದುಗೊಂಡಿದೆ. ಕರುಣೆಯ ಆಧಾರದ ಮೇಲೆ ಪಾಲಿಕೆ ಅವರನ್ನು ಖಾಯಂ ಸಿಬ್ಬಂದಿಯನ್ನಾಗಿ ಮಾಡುವ ಕ್ರಮಕ್ಕೆ ಚಿಂತನೆ ನಡೆಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಇಬ್ಬರಿಗೆ ಮುಖ್ಯ ಇಂಜಿನಿಯರ್‌ರಾದ ಶಿವಕುಮಾರ್ ಮತ್ತು ಜ್ಯೋತಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ಎಲ್ಲ ಸಿಬ್ಬಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಈಗಾಗಲೇ ಪಾಲಿಕೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ| ವಾರ್ಡ್ ಕರಡು ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ; ಡಿಸೆಂಬರ್ ವೇಳೆಗೆ ಚುನಾವಣೆ ಸಾಧ್ಯತೆ
ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, “ಯುವತಿಗೆ ಕೆಲಸವನ್ನು ಖಾಯಂ ಮಾಡುವ ಬಗ್ಗೆ ಮಾಹಿತಿ ಇದೆ. ಇಂತಹ ನಿರ್ಧಾರವನ್ನು ಸಂಘವು ಸ್ವಾಗತಿಸುತ್ತದೆ. ಸಂಘದಿಂದ ₹10 ಲಕ್ಷ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಜ್ಯೋತಿ ಅವರನ್ನು ಬಿಬಿಎಂಪಿ ಸಿಬ್ಬಂದಿಯಾಗಿ ಶಾಶ್ವತವಾಗಿ ನೇಮಿಸಿದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಆಕೆಯ ಮದುವೆಯನ್ನು ರದ್ದುಗೊಳಿಸಿರುವ ಬಗ್ಗೆಯೂ ಮಾಹಿತಿ ಇತ್ತು. ಆಕೆಯನ್ನು ಖಾಯಂ ಸಿಬ್ಬಂದಿಯನ್ನಾಗಿ ಮಾಡಿದರೆ, ಜ್ಯೋತಿ ಮತ್ತು ಅವರ ಕುಟುಂಬಕ್ಕೆ ಸ್ವಲ್ಪ ಸಾಂತ್ವನ ಸಿಕ್ಕಂತಾಗುತ್ತದೆ” ಎಂದು ಹೇಳಿದರು.