Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

Date:

Advertisements

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಿದ್ದು, ಅಂತಿಮ ಮತಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಬಿಹಾರದ ಮತಪಟ್ಟಿಯಿಂದ ಬರೋಬ್ಬರಿ 6% ಅಂದರೆ, ಸುಮಾರು 47 ಲಕ್ಷ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ. ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಮತದಾನದಿಂದ ವಂಚಿತರಾಗಿದ್ದಾರೆ.

ಜೂನ್ 24ರಂದು ಎಸ್‌ಐಆರ್‌ ಪ್ರಕ್ರಿಯೆಯನ್ನುಆರಂಭಿಸಿದಾಗ ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದರು. ಮೂರು ತಿಂಗಳ ಕಾಲ ನಡೆದ ಪರಿಷ್ಕರಣೆಯ ನಂತರ ರಾಜ್ಯದಲ್ಲಿ ಅಂತಿಮ ಮತದಾರರ ಸಂಖ್ಯೆ 7.42 ಕೋಟಿಗೆ ಕುಸಿದಿದೆ. ಮತದಾರರ ಪ್ರಮಾಣ 5.95% ರಷ್ಟು ಇಳಿಕೆಯಾಗಿದೆ.

ಜೂನ್ 24ರ ಎಸ್‌ಐಆರ್ ಆರಂಭ ಮತ್ತು ಸೆಪ್ಟೆಂಬರ್ 30ರ ಅಂತಿಮ ಪಟ್ಟಿ ಪ್ರಕಟಣೆಗೂ ನಡುವೆ, ಆಗಸ್ಟ್ 1 ರಂದು ಮತದಾರರ ಕರಡು ಪಟ್ಟಿಯನ್ನು ಆಯೋಗ ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ 7.24 ಕೋಟಿ ಮತದಾರರ ಹೆಸರುಗಳಿದ್ದವು, 65 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಆ ನಂತರ, ನಡೆದ ಆಕ್ಷೇಪ ಸ್ವೀಕಾರ ಮತ್ತು ಮರು ಪರಿಶೀಲನಾ ಪ್ರಕ್ರಿಯೆಯಲ್ಲಿ 21.53 ಲಕ್ಷ ಅರ್ಹ ಮತದಾರರನ್ನು ಫಾರ್ಮ್ 6 ಅರ್ಜಿಯ ಮೂಲಕ ಮರಳಿ ಸೇರಿಸಲಾಗಿದೆ. ಆದಾಗ್ಯೂ, 47 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ.

ಈ ಪ್ರಕ್ರಿಯೆ ಮತ್ತು ಆಯೋಗದ ಧೋರಣೆಯಿಂದಾಗಿ ಮತದಾನದ ಹಕ್ಕನ್ನು ಕಳೆದುಕೊಂಡಿರುವ 47 ಲಕ್ಷ ಜನರಲ್ಲಿ ಬಹುಸಂಖ್ಯಾತರು ಬಡವರು, ಹಿಂದುಳಿದವರು, ತಳ ಸಮುದಾಯದವರು ಹಾಗೂ ಅಲ್ಪಸಂಖ್ಯಾತರೇ ಆಗಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಹೆಚ್ಚಿನವರು ಬಿಜೆಪಿ ವಿರುದ್ಧ ಮತ ಚಲಾಯಿಸುವವರೇ ಆಗಿದ್ದರೆಂದೂ ಚರ್ಚೆಗಳು ನಡೆಯುತ್ತಿವೆ.

ಈ ಲೇಖನ ಓದಿದ್ಧೀರಾ?: ಚುನಾವಣಾ ಆಯೋಗದ ಗೌಪ್ಯತೆಯೂ – SIR ರಹಸ್ಯ ಪಟ್ಟಿಗಳೂ ಮತ್ತು ಕಾಣೆಯಾದ ದಾಖಲೆಗಳೂ

ಜೂನ್ 24 ರಂದು ಎಸ್‌ಐಆರ್ ಘೋಷಿಸಿದ ಚುನಾವಣಾ ಆಯೋಗವು, ಮತದಾರರ ಪಟ್ಟಿಯಲ್ಲಿ ‘ವಿದೇಶಿ ಅಕ್ರಮ ವಲಸಿಗರು ಮತಪಟ್ಟಿಯಿಂದ ತೆಗೆದುಹಾಕುವುದು, ಒಂದಕ್ಕಿಂತ ಹೆಚ್ಚು ಮತದಾರ ಗುರುತಿನ ಚೀಟಿ ಹೊಂದಿರುವವರನ್ನು ಪರಿಷ್ಕರಿಸಿ, ಕೈಬಿಡುವುದು ಹಾಗೂ ವಲಸೆ ಹೋದವರು ಮತ್ತು ಮೃತಪಟ್ಟವರ ಹೆಸರನ್ನು ಪರಿಷ್ಕರಿಸುವುದು’ ಸೇರಿದಂತೆ ವಿವಿಧ ಗುರಿಯನ್ನು ಸಾಧಿಸಲು ಎಸ್‌ಐಆರ್‌ ಅಗತ್ಯವೆಂದು ಹೇಳಿಕೊಂಡಿತ್ತು. ಅದಕ್ಕಾಗಿ, ಬಿಹಾರದಲ್ಲಿನ ನಿವಾಸಿಗಳಲ್ಲಿ, 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿತ್ತು. ಆಧಾರ್ ಅನ್ನು ಪುರಾವೆಯಾಗಿ ಪರಿಗಣಿಸುವುದಿಲ್ಲ ಎಂದು ಘೋಷಿಸಿತ್ತು. ಇದು ಮತಪಟ್ಟಿ ಪರಿಷ್ಕರಣೆ ಮಾತ್ರವಲ್ಲ, ಪೌರತ್ವ ಪರಿಷ್ಕರಣೆಯೂ ಆಗಿದೆ ಎಂಬ ಗಂಭೀರ ಆರೋಪ-ವಿರೋಧಕ್ಕೆ ಗುರಿಯಾಗಿತ್ತು.

ಆಯೋಗದ ಈ ನಿರ್ಧಾರವು, ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅತೀ ಹಿಂದುಳಿದ ಸಮುದಾಯಗಳ ಜನರು ಆಯೋಗದ ಕ್ರಮದಿಂದ ತೀವ್ರ ತೊಂದರೆಗೆ ಸಿಲುಕಿಸಿತು. ಸಾಮಾನ್ಯವಾಗಿ ಬಳಸಲಾಗುವ ದಾಖಲೆಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮನರೇಗಾ ಜಾಬ್ ಕಾರ್ಡ್ ಅಥವಾ ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುತ್ತಿಲ್ಲ ಮತ್ತು ಸ್ವೀಕರಿಸಲಾಗುತ್ತಿಲ್ಲ. ಬದಲಿಗೆ, ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲೆಗಳಂತಹ ದಾಖಲೆಗಳನ್ನು ಕೇಳಲಾಗುತ್ತಿದೆ. ಆದರೆ, ಈ ದಾಖಲೆಗಳು ಗ್ರಾಮೀಣ ಬಡವರ ಬಳಿ ಸಾಮಾನ್ಯವಾಗಿ ಇರಲಿಲ್ಲ.

ಆದ್ದರಿಂದ, ಆಧಾರ್‌ಅನ್ನು ಗುರುತಿನ ಪುರಾವೆಯಾಗಿ ಪರಿಗಣಿಸಬೇಕೆಂದು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆಧಾರ್‌ಅನ್ನು ಪರಿಗಣಿಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತು.

ಆದಾಗ್ಯೂ, ಮಂಗಳವಾರ ಚುನಾವಣಾ ಆಯೋಗ ಪ್ರಕಟಿಸಿದ ಮತಪಟ್ಟಿಯಲ್ಲಿ 47 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಆದರೆ, ಪರಿಷ್ಕರಣೆ ವೇಳೆ ಎಷ್ಟು ವಿದೇಶಿ ಅಕ್ರಮ ವಲಸಿಗರು ಕಂಡುಬಂದಿದ್ದಾರೆ ಎಂಬುದನ್ನು ಆಯೋಗ ತಿಳಿಸಿಲ್ಲ.

ಈ ಲೇಖನ ಓದಿದ್ಧೀರಾ?: ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ

ಆಗಸ್ಟ್‌ 1ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ ಹೊರಹಾಕಲಾಗಿದ್ದ 65 ಲಕ್ಷ ಮತದಾರರಲ್ಲಿ, 22 ಲಕ್ಷ ಮತದಾರರನ್ನು ಸತ್ತವರು ಮತ್ತು 36 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ 7 ಲಕ್ಷ ಜನರನ್ನು ಬಹು ಸ್ಥಳಗಳಲ್ಲಿ ನೋಂದಣಿ ಹೊಂದಿರುವವರು ಎಂದು ಆಯೋಗ ಘೋಷಿಸಿತ್ತು. ಇದೀಗ, ಆಕ್ಷೇಪಣೆ ಮತ್ತು ಮರು ಪರಿಶೀಲನೆ ಬಳಿಕ, 18 ಲಕ್ಷ ಮಂದಿಯನ್ನು ಮರು ಸೇರ್ಪಡೆ ಮಾಡಲಾಗಿದೆ. ಇನ್ನೂ, 47 ಲಕ್ಷ ಮಂದಿ ಮತಪಟ್ಟಿಯಿಂದ ಹೊರಗುಳಿದಿದ್ದಾರೆ.

ಸೆಪ್ಟೆಂಬರ್‌ 1ರವರೆಗೆ ಮಾತ್ರವೇ ನೀಡಲಾಗಿದ್ದ ಆಕ್ಷೇಪಣೆ ಮತ್ತು ಮರುಪರಿಶೀಲನೆ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ಆಯೋಗ ವಿಸ್ತರಿಸಿದೆ. ಬಿಹಾರದಲ್ಲಿ ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯ ದಿನಾಂಕಕ್ಕಿಂತ 10 ದಿನಗಳ ಮುಂಚಿನವರೆಗೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಆಯೋಗ ಹೇಳಿಕೊಂಡಿದೆ.

ಬಿಹಾರದಲ್ಲಿ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದ್ದು, ಮತಪಟ್ಟಿಯ ಪರಿಷ್ಕರಣೆ ನೆಪದಲ್ಲಿ ಪೌರತ್ವ ಪರಿಷ್ಕರಣೆ ನಡೆಸುವ ಹುನ್ನಾರವನ್ನು ಹೊಂದಿದೆ. ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ಹಿಂಬಾಗಿಲಿನಿಂದ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯನ್ನು (ಎನ್‌ಆರ್‌ಸಿ) ಜಾರಿಗೆ ತರುತ್ತಿದೆ. ಜನರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ತಮ್ಮ ಪೌರತ್ವವನ್ನು ಸಾಬೀತು ಮಾಡಬೇಕಾಗಿದೆ. ಮತಪಟ್ಟಿಯಿಂದ ಹೆಸರು ಕಳೆದುಕೊಂಡವರನ್ನು ಭಾರತದ ಪೌರರಲ್ಲವೆಂದು ಗುರುತಿಸುವ ಅಪಾಯವಿದೆ ಎಂದು ಆರೋಪಿಸಲಾಗಿತ್ತು. ಆಯೋಗದ ಧೋರಣೆಯೂ ಅದೇ ರೀತಿಯಲ್ಲಿತ್ತು.

ಆದ್ದರಿಂದಲೇ, ಈ ಪರಿಷ್ಕರಣೆಯು ಬಿಹಾರದಲ್ಲಿ ‘ವೋಟ್‌ಬಂದಿ’ (ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಕೃತ್ಯ) ಎಂದು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಟೀಕಿಸಿತು. ಜನರನ್ನು ಪೌರತ್ವ ಇಲ್ಲದವರೆಂದು ಗುರುತಿಸುವ ಕುತಂತ್ರವಾಗಿದೆ ಎಂದು ಆರೋಪಿಸಿತು.

ಚುನಾವಣಾ ಆಯೋಗದ ಈ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ವಿಪಕ್ಷಗಳು ನಿರಂತರ ಹೋರಾಟಗಳನ್ನು ನಡೆಸಿವೆ. ಮಾತ್ರವಲ್ಲದೆ, ಬಿಜೆಪಿ ‘ವೋಟ್‌ ಚೋರಿ’ (ಮತ ಕಳವು) ನಡೆಸುತ್ತಿದ್ದು, ಬಿಜೆಪಿಗೆ ಚುನಾವಣಾ ಆಯೋಗ ನೆರವು ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ಹಬ್ಬದ ದಿನವೇ ಸಾರ್ವಜನಿಕರಿಗೆ ದರ ಏರಿಕೆಯ ಶಾಕ್‌; ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಆಯುಧ ಪೂಜೆ ಹಬ್ಬದ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ...

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

Download Eedina App Android / iOS

X