ಆರೋಗ್ಯ ತುರ್ತುಸೇವೆಗಳಿಗಾಗಿ ನೀಡಲಾಗಿರುವ ‘108 ಆ್ಯಂಬುಲೆನ್ಸ್’ಗಳಿಗೆ ತುರ್ತು ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಯಲ್ಲಿನ ಆ್ಯಂಬುಲೆನ್ಸ್‌ಗಳು ನಿಂತ ಜಾಗದಿಂದ ಕದಲಲಾಗದೆ ಕೆಟ್ಟು ನಿಂತಿವೆ. ಇದೆಲ್ಲದರ ನಡುವೆ, ಈವೊಂದು ಆಸ್ಪತ್ರೆಯಲ್ಲಿ ಹೊಸ ಸಂಚಾರಿ ಚಿಕಿತ್ಸಾ ವಾಹನ ಕೂಡ ನಿಂತಿಲ್ಲಿಯೇ ನಿಂತಿರುವುದು ಸಾವ್ಜನಿಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ತಾಲೂಕು ಆಸ್ಪತ್ರೆಗೆ ‘ಜಿಲ್ಲಾ ಖನಿಜ ಪ್ರತಿಷ್ಠಾನ’ವು ಸಂಚಾರಿ ಚಿಕಿತ್ಸಾ ವಾಹನ ಒಂದನ್ನು ಕೊಡುಗೆಯಾಗಿ ನೀಡಿದೆ. ಎರಡು ತಿಂಗಳ ಹಿಂದೆಯೇ ವಾಹನವನ್ನು ನೀಡಿದ್ದರೂ, ಅದು ಇನ್ನೂ ಉದ್ಘಾಟನೆಯಾಗಿಲ್ಲ. ಉದ್ಘಾಟನೆಯನ್ನು ಕಾಣದ ಸಂಚಾರಿ ಚಿಕಿತ್ಸಾ ವಾಹನ ಇದ್ದರೂ ಇಲ್ಲದಂತಾಗಿದ್ದು, ಸಾರ್ವಜನಿಕರ ಸೇವೆಯಿಂದ ದೂರು ಉಳಿದಿದೆ.
ಹೊಳಲ್ಕೆರೆ ತಾಲೂಕಿನ ಸುಮಾರು 24 ಹಳ್ಳಿಗಳು ಗಣಿಗಾರಿಕೆಯಿಂದ ಬಾದಿತವಾಗಿವೆ. ಗಣಿಗಾರಿಕೆಯ ಧೂಳು, ಕಾರ್ಬನ್ ಮೋನಾಕ್ಸೈಡ್ ಮತ್ತು ನೈಟ್ರೇಟ್ ರಸಾಯನಿಕರಿಂದ ಈ ಹಳ್ಳಿಗಳಲ್ಲಿ ಜನರು ಪದೇ-ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗಣಿ ಇಲಾಖೆಯೂ ಜನರ ಆರೋಗ್ಯವನ್ನು ಕಡೆಗಣಿಸಿ, ಗಣಿಗಾರಿಕೆಗೆ ಅನುಮತಿ ನಿಡುತ್ತಿದೆ. ಯಾವುದೇ ರೀತಿಯ ಆರೋಗ್ಯ ಸಂಬಂಧಿ ಮುನ್ನೆಚ್ಚರಿಕೆಯಾಗಲೀ, ನೀತಿ ನಿಯಮಗಳನ್ನು ಗಣಿಗಾರಿಕೆ ನಡೆಸುವವರು ಪಾಲಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ ಖನಿಜ ಪ್ರತಿಷ್ಠಾನವು ಆಸ್ಪತ್ರೆಗೆ ಸಂಚಾರಿ ಚಿಕಿತ್ಸಾ ವಾಹನ ನೀಡಿದೆ. ಆದರರೆ, ಅದೂ ಬಳಕೆಯಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಭಾದಿತ ಪ್ರದೇಶಗಳ ಆರು ತಾಲೂಕುಗಳಿಗೆ ತಲಾವೊಂದೊಂದು ಆ್ಯಂಬುಲೆನ್ಸ್‌ಗಳನ್ನು ಖನಿಜ ಪ್ರತಿಷ್ಠಾನ ನೀಡಿದೆ. ಜಿಲ್ಲೆಯ ಮೊಳಕಾಲ್ಮೂರು, ಚಿತ್ರದುರ್ಗ ಚಳ್ಳಕೆರೆ, ಹಿರಿಯೂರು, ಹೊಸದುರ್ಗ ತಾಲೂಕಿನ ತಾಲೂಕು ಆಸ್ಪತ್ರೆಗಳಿಗೆ ನೀಡಲಾದ ಸಂಚಾರಿ ಚಿಕಿತ್ಸಾ ವಾಹನಗಳು ಜನರಿಗೆ ಸೇವೆ ನೀಡುತ್ತಿವೆ. ಆದರೆ, ಹೊಳಲ್ಕೆರೆ ಆಸ್ಪತ್ರೆಯ ಸಂಚಾರಿ ಚಿಕಿತ್ಸಾ ವಾಹನ ಮಾತ್ರ ನಿಂತಲ್ಲೇ ನಿಂತಿದೆ.
ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದಲೂ ವಾಹನಕ್ಕೆ ಒಬ್ಬರು ವೈದ್ಯರು, ಸುಶ್ರುಷಕ ಸಿಬ್ಬಂದಿ, ಒಬ್ಬರು ಡಿ ಗ್ರೂಪ್ ಮತ್ತು ಚಾಲಕರು ಸೇರಿದಂತೆ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಆದರೆ, ಸಂಚಾರಿ ಚಿಕಿತ್ಸಾ ವಾಹನ ಉದ್ಘಾಟನೆಗೊಳ್ಳದ ಕಾರಣ, ಸಿಬ್ಬಂದಿಗಳೂ ವಾಹನದ ಆರಂಭಕ್ಕಾಗಿ ಕಾದುಕುಳಿತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ಊಟಕ್ಕಿಲ್ಲದ ಉಪ್ಪಿನಕಾಯಿ’ ರೀತಿಯಲ್ಲಿವೆ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್‌ಗಳು
ಆ್ಯಂಬುಲೆನ್ಸ್ ಸೇವೆಯ ಬಗ್ಗೆ ಮಾತನಾಡಿದ ಹೆಸರು ಹೇಳಲಿಚ್ಚಿ ಇಚ್ಚಿಸದ ತಾಲೂಕಿನ ಆರೋಗ್ಯ ಅಧಿಕಾರಿ ಒಬ್ಬರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಶಿಷ್ಟಾಚಾರದ ಪ್ರಕಾರ ಶಾಸಕರು ಸಂಚಾರಿ ಚಿಕಿತ್ಸಾ ವಾಹನ ಉದ್ಘಾಟನೆ ಮಾಡಬೇಕು. ಆದರೆ, ಅವರ ಬಿಡುವಿಲ್ಲದ ಕಾರ್ಯಗಳಿಂದ ಉದ್ಘಾಟನೆ ಸಾಧ್ಯವಾಗಿಲ್ಲ. ಸದ್ಯದಲ್ಲೇ ಅವರು ಉದ್ಘಾಟನೆ ನೆರವೇರಿಸುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ತಾಲೂಕಿನ ಮದಕರಿಪುರ ಗ್ರಾಮದ ನಿಂಗಪ್ಪ ಈದಿನ.ಕಾಮ್ ಜೊತೆ ಮಾತನಾಡಿದ್ದು, “ತಮ್ಮ ಗ್ರಾಮದ ಸುತ್ತಮುತ್ತ 25 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಗೆ ಬಳಸುವ ಸಿಡಿ ಮದ್ದುಗಳು ಮತ್ತು ಅವುಗಳ ರಸಾಯನಿಗಳಿಂದ ವಿಷಪೂರಿತ ಅನಿಲಗಳಿಂದ ಇಲ್ಲಿನ ಜನರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸಂಬಂಧ ಪಟ್ಟ ಆರೋಗ್ಯ ಇಲಾಖೆ ಮತ್ತು ಗಣಿಗಾರಿಕೆ ಇಲಾಖೆ ಹಾಗೂ ಗಣಿಗಾರಿಕೆ ನಡೆಸುವವರು ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಈ ಸಮಸ್ಯೆಗಳನ್ನು ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆರೋಗ್ಯ ಸೇವೆಗೆಂದು ನೀಡಲಾಗಿರುವ ಸಂಚಾರಿ ಚಿಕಿತ್ಸಾ ವಾಹನವನ್ನೂ ಉದ್ಘಾಟಿಸಿಲ್ಲ. ಅದಕ್ಕೆ ಚಾಲನೆ ನೀಡದರೆ, ತುರ್ತು ಸಂದರ್ಭಗಳಲ್ಲಿ ಜನರಿಗೆ ನೆರವಾದರೂ ದೊರೆಯುತ್ತದೆ” ಎಂದು ಹೇಳಿದ್ದಾರೆ.